ಪುತ್ತೂರು: ಬಸ್ಸೊಂದರಲ್ಲಿ ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಪ್ರಕರಣದ ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಾಗ ಠಾಣೆಯಲ್ಲಿ ಕುಳಿತಿದ್ದ ಆರೋಪಿ ಅಲ್ಲಿಂದ ಓಡಿ ತಪ್ಪಿಸಿಕೊಂಡ ಘಟನೆ ನಡೆದಿದೆ.
ಸುಳ್ಯ ಕಡೆಯಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿಗೆ ಹತ್ತಿ ಹಿಂದಿನ ಸೀಟಿನಲ್ಲಿ ಕುಳಿತಿದ್ದ ನಗರದ ಕಾಲೇಜೊಂದರ ವಿದ್ಯಾರ್ಥಿನಿಗೆ ಯುವಕನೋರ್ವ ಕಿರುಕುಳ ನೀಡುವ ಪ್ರಯತ್ನ ನಡೆಸಿದ್ದಾನೆ. ಇದನ್ನು ಆಕ್ಷೇಪಿಸಿದ ವಿದ್ಯಾರ್ಥಿನಿ ಬಸ್ಸಿನ ನಿರ್ವಾಹಕನಿಗೆ ಮಾಹಿತಿ ನೀಡಿದ್ದಾಳೆ.
ಬಸ್ಸು ಸಂಪ್ಯದಲ್ಲಿರುವ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಬಳಿಗೆ ಬರುತ್ತಿದ್ದಂತೆ ಚಾಲಕ ಬಸ್ಸನ್ನು ಠಾಣೆಯ ಎದುರು ನಿಲ್ಲಿಸಿದ್ದು, ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದಾಳೆ. ಆರೋಪಿಯನ್ನು ಬಸ್ಸಿನಿಂದ ಠಾಣೆಗೆ ಕರೆಸಲಾಗಿದ್ದು, ಠಾಣೆಯಲ್ಲಿದ್ದ ಮಹಿಳಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಂತೆ ಆರೋಪಿ ಅಲ್ಲಿಂದ ಓಡಿ ಪರಾರಿಯಾಗಿದ್ದಾನೆ.
ಸಭ್ಯ ಯುವಕರಂತೆ ವಸ್ತ್ರ ಧರಿಸಿದ ಆರೋಪಿ ಪುತ್ತೂರು ಮಾರ್ಗವಾಗಿ ಓಡುತ್ತಿದ್ದಂತೆ ಸ್ಥಳೀಯರು ಬೈಕ್, ರಿಕ್ಷಾಗಳಲ್ಲಿ ಬೆನ್ನಟ್ಟಿದ್ದಾರೆ. ಆದರೆ ಆರೋಪಿ ವಿಷ್ಣುಮೂರ್ತಿ ದೇವಸ್ಥಾನ ರಸ್ತೆಯಲ್ಲಿ ಓಡಿ ಕಣ್ಮರೆಯಾಗಿದ್ದಾನೆ ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಠಾಣೆಯಲ್ಲಿ ಮಹಿಳಾ ಪೊಲೀಸರು ಮಾತ್ರ ಇದ್ದ ಕಾರಣ ಅವರು ಆರೋಪಿಯ ಹಿಂದೆ ಬಿದ್ದಿಲ್ಲ. ವಿದ್ಯಾರ್ಥಿನಿ ಬಾಯಿ ಮಾತಿನ ದೂರು ಮಾತ್ರ ನೀಡಿದ್ದ ಕಾರಣ ಪ್ರಕರಣ ಅಲ್ಲಿಗೆ ಮುಕ್ತಾಯಗೊಂಡಿದೆ.