Advertisement

ಆರೋಪ; ತಾರತಮ್ಯ ಸರಿಪಡಿಸಲು ಮನವಿ

10:44 PM Jun 01, 2020 | Sriram |

ಕೋಟ: ಕೋವಿಡ್-19 ಸಮಸ್ಯೆಯಿಂದಾಗಿ ಯಕ್ಷಗಾನ ಪ್ರದರ್ಶನಗಳು ಸ್ಥಗಿತಗೊಂಡು ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದು, ಮುಜರಾಯಿ ಇಲಾಖೆ ದೇಗುಲದ ವತಿಯಿಂದ ನೇರವಾಗಿ ತಿರುಗಾಟ ನಡೆಸುವ ಮೇಳಗಳ ಕಲಾವಿದರಿಗೆ ಸರಕಾರ ಸಂಪೂರ್ಣ ಪರಿಹಾರವನ್ನು ನೀಡಿದೆ. ಆದರೆ ಅದೇ ಮುಜರಾಯಿ ಇಲಾಖೆಗೆ ಒಳಪಡುವ ಸಂಚಾಲಕತ್ವದ ಮೇಳಗಳ ಕಲಾವಿದರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಸಂಚಾಲಕತ್ವದ ಮೇಳದ ಕಲಾವಿದರು ಆರೋಪಿಸಿದ್ದಾರೆ.

Advertisement

ಮುಜರಾಯಿ ಇಲಾಖೆಯಿಂದ ನಡೆಯುವ ಮೇಳದ ಕಲಾವಿದರಿಗೆ ಸಂಪೂರ್ಣ ಆರು ತಿಂಗಳ ಸಂಬಳ ಈಗಾಗಲೇ ಕೈ ಸೇರಿದೆ.

ಆದರೆ ಸಂಚಾಲಕತ್ವದ ಮೇಳಗಳ ತಿರುಗಾಟ ಅಂತ್ಯಗೊಳ್ಳುವಾಗ ಪ್ರದರ್ಶನ ಗಳು ನಡೆದ ಸಂಖ್ಯೆಗೆ ಅನುಗುಣವಾಗಿ ಸಂಬಳವನ್ನು ನೀಡಲಾಗಿದ್ದು ಸರಕಾರ ದಿಂದಾಗಲಿ ಯಾವುದೇ ಸಹಕಾರದ ಸುಳಿವೂ ಸಿಕ್ಕಿಲ್ಲ ಎನ್ನುವುದು ಕಲಾವಿದರ ಅಳಲಾಗಿದೆ.

ಸಹಕಾರ ಬೇಕಿತ್ತು
ಕೋವಿಡ್-19 ದಿಂದಾಗಿ ಸರಕಾರದ ಅರ್ಥಿಕತೆ ಸಂಕಷ್ಟದಲ್ಲಿದೆ. ಆದ್ದರಿಂದ ಸಂಪೂರ್ಣ ಸಂಬಳ ನೀಡುವುದು ಕಷ್ಟ ಎನ್ನುವುದು ನಮಗೂ ತಿಳಿದಿದೆ. ಆದರೆ ಕನಿಷ್ಠ ಅರ್ಧ ಸಂಬಳ ಅಥವಾ ನಿರ್ಧಿಷ್ಟ ಮೊತ್ತದ ಸಹಕಾರ ನೀಡದಿರುವುದು ಒಂದು ಕಣ್ಣೆಗೆ ಸುಣ್ಣ; ಮತ್ತೂಂದು ಕಣ್ಣೆಗೆ ಬೆಣ್ಣೆ ಎನ್ನುವಂತಾಗಿದೆ ಎನ್ನುವ ಮಾತುಗಳು ಕಲಾವಿದರಿಂದ ಕೇಳಿ ಬಂದಿದೆ.

ಸರಕಾರದ ಕ್ರಮ ಸರಿಯಲ್ಲ
ಮುಜರಾಯಿ ಮೇಳಗಳ ಕಲಾವಿದರಿಗೆ ಸಂಪೂರ್ಣ ಸಹಕಾರವನ್ನು ನೀಡಿ ಸಂಚಾಲಕತ್ವದ ಮೇಳಗಳ ಕಲಾವಿದರನ್ನುಅವಗಣಿಸಿರುವುದು ಕಲಾವಿದರಿಗೆ ಮಾಡಿದ ಅನ್ಯಾಯವಾಗಿದೆ. ಈ ಕುರಿತು ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗದಿರುವುದು ತುಂಬಾ ಬೇಸರ ತರಿಸಿದೆ. ಮೇಳಗಳನ್ನು ಖಾಸಗಿಯವರಿಗೆ ನೀಡುವಾಗ ಕಲಾವಿದರಿಗೆ ಭದ್ರತೆ ನೀಡುವ ಷರತ್ತು ವಿಧಿಸಬೇಕು. ಇಲ್ಲವಾದರೆ ಸರಕಾರವೇ ನೇರವಾಗಿ ಮೇಳಗಳನ್ನು ನಡೆಸಬೇಕು.
– ಕೋಡಿ ವಿಶ್ವನಾಥ ಗಾಣಿಗ
ಯಕ್ಷಗಾನ ಕಲಾವಿದ

Advertisement

ಇನ್ನಾದರೂ ಸಹಕಾರ ನೀಡಲಿ
ಕಲಾವಿದರಿಗೆ ಆಗಿರುವ ಅನ್ಯಾಯವಾದ ಕುರಿತು ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ಆದ್ದರಿಂದ ಇನ್ನಾದರೂ ಸರಕಾರ ಈ ತಪ್ಪನ್ನು ಸರಿಪಡಿಸಬೇಕು ಎನ್ನುವುದು ಕಲಾವಿದರ ಮನವಿಯಾಗಿದೆ.

ಕಲಾವಿದರಿಗೆ ಭದ್ರತೆ ಬೇಕು
ಮುಂದೆ ಮೇಳಗಳನ್ನು ಖಾಸಗಿಯವರಿಗೆ ವಹಿಸಿ ಕೊಡುವಾಗ ಕಲಾವಿದರಿಗೆ ವೃತ್ತಿ ಭದ್ರತೆ ನೀಡುವ ಷರತ್ತು ವಿಧಿಸಬೇಕು. ಇದು ಕಷ್ಟವಾದರೆ ಸರಕಾರವೇ ನೇರವಾಗಿ ಮೇಳಗಳನ್ನು ಮುನ್ನಡೆಸಬೇಕು ಎನ್ನುವ ಮನವಿ ಕೇಳಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next