ಬಾಗಲಕೋಟೆ: ಲಂಬಾಣಿ ಯುವಕರು ಹಾಗೂ ಕಾಲೇಜು ವಿದ್ಯಾರ್ಥಿನಿಯರ ಮನವೊಲಿಸಿ ಸಾಮೂಹಿಕವಾಗಿ ಮತಾಂತರಕ್ಕೆ ಯತ್ನಿಸಲಾಗುತ್ತಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಥಳಿಸಿದ ಘಟನೆ ನವನಗರದ ಸೆಕ್ಟರ್ ನಂ.31ರಲ್ಲಿ ನಡೆದಿದೆ.
ಭಾನುವಾರ ಮಧ್ಯಾಹ್ನ ನವನಗರದ ಸೆಕ್ಟರ್ ನಂ.31ರಲ್ಲಿ ಲಂಬಾಣಿ ಸಮಾಜದ ಯುವಕರು, ಕಾಲೇಜು ವಿದ್ಯಾರ್ಥಿನಿಯರನ್ನು ಒಟ್ಟಿಗೆ ಸೇರಿಸಿ, ಅವರಿಗೆ ಅನ್ಯ ಧರ್ಮಕ್ಕೆ ಮತಾಂತರಗೊಳ್ಳಲು ಪ್ರಚೋದನೆ ನೀಡುತ್ತಿದ್ದ ಎಂದು ಆರೋಪಿಸಿರುವ ಕೆಲವರು, ತುಕಾರಾಮ ರಾಠೊಡ ಎಂಬಾತನನ್ನು ಹಿಗ್ಗಾಮಗ್ಗಾ ಥಳಿಸಿದ್ದಾರೆ.
ಲಂಬಾಣಿ ಸಮಾಜದ ಹಿರಿಯರೂ ಆಗಿರುವ ಜಿಪಂ ಸದಸ್ಯ ಹೂವಪ್ಪ ರಾಠೊಡ, ವಕೀಲ ರಾಜು ಲಮಾಣಿ ಮುಂತಾದವರು ಸ್ಥಳಕ್ಕೆ ಧಾವಿಸಿ, ಒಂದೆಡೆ ಕೂಡಿದ್ದ ಲಂಬಾಣಿ ಸಮಾಜದ ಯುವತಿ, ವಿದ್ಯಾರ್ಥಿನಿಯರನ್ನು ಅನ್ಯ ಧರ್ಮಕ್ಕೆ ಮತಾಂತರಗೊಳ್ಳದೆ ಪುನಃ ಮನವೊಲಿಸುವ ಪ್ರಯತ್ನ ಮಾಡಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ತುಕಾರಾಮ ರಾಠೊಡ ಸೇರಿ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಆದರೆ, ಈ ಕುರಿತು ಸ್ಪಷ್ಟನೆ ನೀಡಿರುವ ಎಸ್‌ಪಿ ಲೋಕೇಶ ಜಗಲಾಸರ, ಇದು ಸಾಮೂಹಿಕ ಮತಾಂತರ ನಡೆದ ಘಟನೆಯಲ್ಲ. ಸಂಶಯಗೊಂಡು ವ್ಯಕ್ತಿಯೊಬ್ಬನನ್ನು ಹಾಗೂ ಥಳಿಸಿದವನನ್ನೂ ವಶಕ್ಕೆ ಪಡೆಯಲಾಗಿದೆ.
ಯಾವುದೇ ವ್ಯಕ್ತಿಗಳು ಇಂಥ ಅನುಮಾನ ಬಂದಲ್ಲಿ ಪೊಲೀಸರಿಗೆ ದೂರು ಅಥವಾ ಮಾಹಿತಿ ನೀಡಬೇಕು. ಈ ಕುರಿತು ಸಮಗ್ರ ತನಿಖೆ ನಡೆಸಲಾಗುತ್ತಿದೆ. ಒಂದು ವೇಳೆ ಮತಾಂತರ ನಡೆಸುತ್ತಿದ್ದರು ಎಂಬುದು ಗೊತ್ತಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.