Advertisement

ಕಂಬಳಕ್ಕೆ ಗ್ರಾಮೀಣ ಕ್ರೀಡಾಕೂಟದ ಮಾನ್ಯತೆ 

08:32 AM Sep 02, 2022 | Team Udayavani |

ಕಾರ್ಕಳ: ತುಳುನಾಡ ಕಂಬಳ ಕ್ರೀಡೆ ಇನ್ನು ಮುಂದೆ ಕಬಡ್ಡಿ, ಖೋಖೋ, ಕುಸ್ತಿ, ಅಟ್ಯಪಟ್ಯ ಕ್ರೀಡೆಗಳಂತೆ ಗ್ರಾಮೀಣ ಕ್ರೀಡಾಕೂಟ ಪಟ್ಟಿಯಲ್ಲಿ ಇರಲಿದೆ. ಎತ್ತಿನಗಾಡಿ ಓಟ, ಕೋಣಗಳ ಓಟ ಇವೆರಡನ್ನು ಗ್ರಾಮೀಣ ಕ್ರೀಡಾಕೂಟಕ್ಕೆ ಸೇರ್ಪಡೆಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆ. 29ರಂದು ನಡೆದ ರಾಷ್ಟ್ರೀಯ ದಿನಾಚರಣೆ ಸಂದರ್ಭ ಹೇಳಿದ್ದಾರೆ. ಸರಕಾರದ ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರಬೀಳಲಿದೆ.

Advertisement

ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡಿನ 200ಕ್ಕೂ ಅಧಿಕ ಕಡೆ ಸಾಂಪ್ರದಾಯಿಕ ಕಂಬಳಗಳು, 25 ಕಡೆ ಆಧುನಿಕ ಕಂಬಳಗಳು ನಡೆಯುತ್ತವೆ. ಸಾಂಪ್ರದಾಯಿಕ ಕಂಬಳಗಳು ಕೆಸರು ಗದ್ದೆಗಳಲ್ಲಿ ಮುಕ್ತವಾಗಿ ನಡೆದರೆ, ಆಧುನಿಕ ಕಂಬಳಗಳು ಅದಕ್ಕೆಂದೇ ನಿರ್ಮಿಸಿದ ಜೋಡುಕರೆ ಮತ್ತು ಸ್ಟೇಡಿಯಂಗಳಲ್ಲಿ ನಡೆಯುತ್ತವೆ. ಸಾಂಪ್ರದಾಯಿಕ ಕಂಬಳಗಳಲ್ಲಿ ಪರಂಪರೆಯ ನಂಬಿಕೆ, ಕ್ರಮಗಳು ಹಾಸು ಹೊಕ್ಕಾಗಿರುವುದರ ಜತೆಗೆ ಕೋಣಗಳ ಓಟವೂ ಸಂಪ್ರದಾಯದ ಚೌಕಟ್ಟಿನಲ್ಲಿರುತ್ತದೆ. ಆಧುನಿಕ ಕಂಬಳಗಳಲ್ಲಿ ಸ್ಪರ್ಧೆ ಮುಖ್ಯವಾಗಿರುತ್ತದೆ.

ಉಳುಮೆ ಮಾಡುವ ಗದ್ದೆಯಲ್ಲಿ ಕೋಣಗಳನ್ನು ಓಡಿಸುವ ಪುರಾತನ ಸಂಪ್ರದಾಯವೇ ಕಂಬಳ. ಇದು ಅತೀ ಪುರಾತನ ಕಾಲದಿಂದ ನಡೆದುಕೊಂಡು ಬಂದ ಪದ್ಧತಿ. 1970ರ ಬಳಿಕ ಇದು ಕ್ರೀಡಾರೂಪ ತಳೆಯಿತು. ಮುಂದೆ ಕಂಬಳ ಕ್ರೀಡಾ ಹಬ್ಬವಾಗಿ ಮಾರ್ಪಟ್ಟಿತು. ಕನೆ ಹಲಗೆ, ಹಗ್ಗ ಹಿರಿಯ, ಅಡ್ಡ ಹಲಗೆ, ನೇಗಿಲು ಹಾಗೂ ಕಿರಿಯ ವಿಭಾಗಗಳೆಂಬ ಹೊಸ ಮಾರ್ಪಾಡುಗಳು ಹುಟ್ಟಿಕೊಂಡವು.

ಸತ್ಯಮಿಥ್ಯೆಗಳ ಮಧ್ಯೆ ಗೆದ್ದ ಕಂಬಳ:

ಕಂಬಳವು ದೊಡ್ಡ ಚರ್ಚೆಗೆ ಎಡೆ ಮಾಡಿಕೊಟ್ಟಿದ್ದು ಜಲ್ಲಿಕಟ್ಟು ಎನ್ನುವ ತಮಿಳುನಾಡಿನ ಜಾನಪದ ಕ್ರೀಡೆಯನ್ನು ಹಿಂಸಾತ್ಮಕ ಎಂಬ ನೆಲೆಯಲ್ಲಿ 2014ರಲ್ಲಿ ಸುಪ್ರೀಂ ಕೋರ್ಟ್‌ ನಿಷೇಧಿಸಿದಾಗ. ತೀರ್ಪಿನಲ್ಲಿ ಕಂಬಳ ಉಲ್ಲೇಖವಿಲ್ಲದಿದ್ದರೂ ಇದು ಕೂಡ ಪ್ರಾಣಿಗಳನ್ನು ಓಡಿಸುವ ಕ್ರಿಡೆಯಾಗಿರುವ ಕಾರಣ ತೀರ್ಪನ್ನು ಅನ್ವಯಿಸುವ ಪ್ರಕ್ರಿಯೆಯಲ್ಲಿ ಕಂಬಳದ ಮೇಲೂ ತೂಗುಗತ್ತಿ ನೇತಾಡಿತ್ತು. ಆದರೆ ಪ್ರಸ್ತುತ ಕಂಬಳ ಓಟಕ್ಕೆ ಕಾನೂನಿನ ಬಲ ಬಂದಿದೆ.

Advertisement

ಕಂಬಳಕ್ಕೆ ಸರಕಾರ ಮಾನ್ಯತೆ ನೀಡಿದ್ದು, ಗ್ರಾಮೀಣ ಕ್ರೀಡೆ ಎಂದು ಘೋಷಿಸಿದೆ. ಇದು ತುಳುನಾಡಿನ ಗೌರವವನ್ನು ಹೆಚ್ಚಿಸಿದೆ. ಎಲ್ಲ ಕಂಬಳಗಳಿಗೆ ಸಹಾಯಧನ, ಪ್ರೋತ್ಸಾಹ, ಓಟಗಾರರಿಗೆ ಕ್ರೀಡಾ ರತ್ನ ಪ್ರಶಸ್ತಿ ನೀಡಲಾಗುವುದು.ವಿ. ಸುನಿಲ್‌ ಕುಮಾರ್‌, ಸಚಿವ 

ಸರಕಾರ ಎರಡು ಕ್ರೀಡೆಗಳನ್ನು ಗ್ರಾಮೀಣ ಕ್ರೀಡಾಕೂಟಕ್ಕೆ ಸೇರ್ಪಡೆಗೊಳಿಸಿದೆ. ಉತ್ತರ ಕರ್ನಾಟಕದ ಎತ್ತಿನ ಗಾಡಿ ಓಟ ಒಂದಾದರೆ, ಇನ್ನೊಂದು ಕರಾವಳಿ ಭಾಗದ 3 ಜಿಲ್ಲೆಗಳ ಕಂಬಳ ಸೇರಿದೆ. ಆಯಾ ಭಾಗದ ಪ್ರಾಶಸ್ತ್ಯ ನೋಡಿಕೊಂಡು ಈ ಗೌರವ ಕ್ರೀಡೆಗೆ ನೀಡಲಾಗಿದೆ. ರೋಶನ್‌ ಕುಮಾರ್‌, ಕ್ರೀಡಾಧಿಕಾರಿ, ಉಡುಪಿ

 

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next