Advertisement

ಜೈಲು ಅಕ್ರಮದ ಬಗ್ಗೆ ವರದಿ ಕೇಳಿದ ಲೆಕ್ಕಪತ್ರ ಸಮಿತಿ

11:23 AM Jul 22, 2017 | Team Udayavani |

ಬೆಂಗಳೂರು: ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ 2004ರ ಲೆಕ್ಕ ಪರಿಶೋಧನಾ (ಸಿಎಜಿ) ವರದಿಯಲ್ಲಿ ಉಲ್ಲೇಖವಾಗಿದ್ದರೂ, ಅದನ್ನು ಕಡೆಗಣಿಸಿರುವ ಬಗ್ಗೆ ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಸಂಬಂಧಿಸಿದ ಅಧಿಕಾರಿಗಳಿಂದ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಆರ್‌. ಅಶೋಕ್‌ ಮಾಹಿತಿ ಕೇಳಿದ್ದಾರೆ. 

Advertisement

ವಿಧಾನಸೌಧದಲ್ಲಿ ಶುಕ್ರವಾರ ಸಮಿತಿಯ ಸಭೆ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌,  ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆ  ಸಿಎಜಿ ವರದಿ ಅಂಶಗಳನ್ನು ಪಾಲಿಸದಿರುವ ಬಗ್ಗೆ ಪೊಲೀಸ್‌ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

2004ರಿಂದ ಸತತವಾಗಿ ವರದಿಯಲ್ಲಿ ಈ ಬಗ್ಗೆ ಆಕ್ಷೇಪ ವ್ಯಕ್ತವಾಗಿದ್ದರೂ ಕ್ರಮ ಕೈಗೊಂಡಿಲ್ಲ. 2015ರ ವರದಿಯಲ್ಲಿ ಅಕ್ರಮಗಳನ್ನು ತಡೆಯಲು ಸಿಎಜಿ ವರದಿ ಕೆಲವು ಶಿಫಾರಸು ಮಾಡಿದ್ದರೂ ಅದನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ 15 ದಿನಗಳಲ್ಲಿ ಸಮಗ್ರ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಅಧಿಕಾರಿಗಳಿಗೆ ತರಾಟೆ: ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಸಮಿತಿ ಸದಸ್ಯರು ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಅ ಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ 2004ರಿಂದ ಇಲ್ಲಿಯವರೆಗೆ ಜೈಲಿನಲ್ಲಿ ಅಕ್ರಮಕ್ಕೆ ಸಹಕಾರ ನೀಡಿದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಲು ಸೂಚಿಸಿದರು ಎಂದು ತಿಳಿದುಬಂದಿದೆ.

ಶಶಿಕಲಾಗೆ ವಿಶೇಷ ಸೌಲಭ್ಯ ನೀಡಿದವರಿಗೆ ಹಾಗೂ ಕೈದಿಗಳನ್ನು ರಾಜರೋಷವಾಗಿ ಜೈಲಿನಲ್ಲಿ ಅಲೆದಾಡುವುದಕ್ಕೆ  ಬಿಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಪತ್ರ ಬರೆಯಬೇಕು ಎಂದು ಸಮಿತಿ ತೀರ್ಮಾನಿಸಿದ್ದಾಗಿ ಮೂಲಗಳು ತಿಳಿಸಿವೆ.

Advertisement

ಜೈಲು ಅಕ್ರಮ ಬಯಲಿಗೆಳೆಯಲು ಎಸಿಬಿಗೆ ದೂರು
ಬೆಂಗಳೂರು:
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ವಕೀಲ ಎಸ್‌.ನಟರಾಜ್‌ ಶರ್ಮಾ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಶುಕ್ರವಾರ ದೂರು ನೀಡಿದ್ದಾರೆ.

ತಮಿಳುನಾಡಿನ ಎಐಎಡಿಎಂಕೆ ಮಾಜಿ ನಾಯಕಿ ಶಶಿಕಲಾ ನಟರಾಜನ್‌ಗೆ ಐಶಾರಾಮಿ ಕೊಠಡಿ ಹಾಗೂ ಇತರೆ ಸೌಲಭ್ಯ ಕಲ್ಪಿಸಲು ಕಾರಾಗೃಹ ಇಲಾಖೆಯ ಮಹಾನಿರ್ದೇಶಕರಾಗಿದ್ದ ಎಚ್‌.ಎನ್‌.ಸತ್ಯನಾರಾಯಣರಾವ್‌ ಸೇರಿದಂತೆ ಕೆಲ ಅಧಿಕಾರಿಗಳು 2 ಕೋಟಿ ರೂ. ಲಂಚ ಪಡೆದಿದ್ದಾರೆ ಎಂದು ಡಿಐಜಿ ರೂಪಾ ಮೌದ್ಗಿಲ್‌ ಆರೋಪಿಸಿದ್ದು, ವರದಿಯನ್ನು ಸ್ವತಃ ಸತ್ಯನಾರಾಯಣರಾವ್‌ ಅವರಿಗೆ ನೀಡಿದ್ದಾರೆ.

ಹೀಗಾಗಿ ಯಾರು, ಯಾರಿಗೆ 2 ಕೋಟಿ ರೂ. ಲಂಚ ನೀಡಿದ್ದಾರೆ ಎಂಬುದು ತಿಳಿಯಬೇಕಿದೆ. ಇದರೊಂದಿಗೆ ಛಾಪಾ ಕಾಗದ ಹಗರಣದ ರೂವಾರಿ ಕರೀಂ ಲಾಲ್‌ ತೆಲಗಿಗೂ ಐಶಾರಾಮಿ ಸೌಲಭ್ಯ ಕೊಡಲಾಗಿದ್ದು, ಇಲ್ಲಿ ಗಾಂಜಾ ಸಹ ಮಾರಾಟ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳನ್ನು ರೂಪಾ ಮಾಡಿದ್ದಾರೆ.

ವಿಪರ್ಯಾಸವೆಂದರೆ ಹಿರಿಯ ಅಧಿಕಾರಿಗಳಿಗೆ ವರದಿ ತಲುಪುವ ಮೊದಲೇ ಮಾಧ್ಯಮಗಳಿಗೆ ವರದಿ ಸೋರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ರೂಪಾ ಅವರನ್ನೂ ವಿಚಾರಣೆಗೊಳಪಡಿಸಬೇಕು. ಅಲ್ಲದೇ ರೂಪಾ ಅವರಿಂದ ಸೂಕ್ತ ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.

ಕರೀಂ ಲಾಲ್‌ ತೆಲಗಿಗೆ ನೀಡಿರುವ ಐಶಾರಾಮಿ ಕೊಠಡಿ ಹಾಗೂ ಇತರೆ ಸೌಲಭ್ಯಗಳ ಬಗ್ಗೆ ಆತನ ಕೊಠಡಿಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ಮೂಲಕ ಡಿಜಿಪಿ ಸತ್ಯನಾರಾಯಣರಾವ್‌ ವೀಕ್ಷಿಸಿದರೂ ಯಾವ ಕಾರಣಕ್ಕೆ ಕ್ರಮಕೈಗೊಂಡಿಲ್ಲ ಎಂಬ ಬಗ್ಗೆ ತನಿಖೆ ನಡೆಸಬೇಕಿದೆ. ಮತ್ತೂಂದೆಡೆ ಅಕ್ರಮದ ಬಗ್ಗೆ ರೂಪಾ ಅವರು ಎಸಿಬಿಗೆ ದೂರು ನೀಡಿದರೂ, ತನಿಖಾ ಸಂಸ್ಥೆಯ ಅಧಿಕಾರಿಗಳು ದೂರು ಸ್ವೀಕರಿಸಿಲ್ಲ. ಈ ಬಗ್ಗೆ ಸಾಕಷ್ಟು ಅನುಮಾನಗಳಿವೆ ಎಂದು ತಮ್ಮ ದೂರಿನಲ್ಲಿ ನಟರಾಜ್‌ ಶರ್ಮಾ ತಿಳಿಸಿದ್ದಾರೆ.

ಅಕ್ರಮದ ತನಿಖೆಗೆ ನಿವೃತ್ತ ಐಎಎಸ್‌ ಅಧಿಕಾರಿ ವಿನಯ್‌ ಕುಮಾರ್‌ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದು, ಸದ್ಯದಲ್ಲೇ ಪ್ರಾಥಮಿಕ ವರದಿಯನ್ನು ಸಲ್ಲಿಸಲಿದ್ದಾರೆ. ಆದರೆ, ರೂಪಾ 2ನೇ ವರದಿ ಸಲ್ಲಿಸುವ ಮೊದಲೇ ಸತ್ಯನಾರಾಯಣರಾವ್‌ ಹಾಗೂ ಇತರೆ ಅಧಿಕಾರಿಗಳು ಸಾಕ್ಷ್ಯಗಳನ್ನು ನಾಶಪಡಿಸಿರುವ ಸಾಧ್ಯತೆಯಿದೆ.  ಈ ಬಗ್ಗೆಯೂ ತನಿಖಾ ಸಂಸ್ಥೆ ವಿಚಾರಣೆ ನಡೆಸಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next