Advertisement

ಗ್ರಾಹಕರಿಗೆ ಖಾತೆಯ ಚಿಂತೆ; ಸಿಬಂದಿಗೆ ಕೋವಿಡ್ 19 ಭೀತಿ!

01:04 AM Apr 10, 2020 | Sriram |

ಮಂಗಳೂರು/ ಉಡುಪಿ: ಲಾಕ್‌ಡೌನ್‌ ಸಂದರ್ಭ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವವರ ನೆರವಿಗೆ ಧಾವಿಸಿರುವ ಕೇಂದ್ರ ಸರಕಾರವು ಗರೀಬ್‌ ಕಲ್ಯಾಣ ಪ್ಯಾಕೇಜ್‌ ಅಡಿಯಲ್ಲಿಜನಧನ್‌ ಬ್ಯಾಂಕ್‌ ಖಾತೆಗಳಿಗೆ 500 ರೂ. ಜಮೆ ಮಾಡಿದೆ. ಇತ್ತ ಖಾತೆ ಖಾತ್ರಿ ಮತ್ತು ಹಣ ಹಿಂಪಡೆಯುವಿಕೆಗಾಗಿ ಬ್ಯಾಂಕ್‌ಗಳಿಗೆ ದೌಡಾಯಿಸುವ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ಈ ಸಂದರ್ಭ ಜನತೆ ಕನಿಷ್ಠ ಸುರಕ್ಷಾ ನಿಯಮಗಳನ್ನೂ ಪಾಲಿಸದಿರುವುದು ಬ್ಯಾಂಕ್‌ ಸಿಬಂದಿಗೆ ತಲೆನೋವಾಗಿ ಪರಿಣಮಿಸಿದೆ.

Advertisement

ನಮ್ಮ ಜನಧನ ಖಾತೆ ಸರಿಯಾಗಿದೆಯೋ ಇಲ್ಲವೋ; ನಮಗೆ ಹಣ ಬರುತ್ತದೋ ಇಲ್ಲವೋ ಎಂಬ ಚಿಂತೆ ಹಲವರಲ್ಲಿದ್ದು ಬ್ಯಾಂಕ್‌ಗಳಿಗೆ ಧಾವಿಸಿ ಗೊಂದಲ ನಿವಾರಿಸಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಹೊರ ಊರುಗಳಿಂದ ಊರಿಗೆ ಬಂದಿರುವ ಕೆಲವರು ಊರಿನಲ್ಲಿ ಚಾಲ್ತಿಯಲ್ಲಿರದ ಖಾತೆಗಳಿಗೆ ಮರುಜೀವ ನೀಡಲು ಬ್ಯಾಂಕ್‌ಗಳಿಗೆ ಆಗಮಿಸುತ್ತಿದ್ದಾರೆ.

ಕೋವಿಡ್ 19 ಬಗ್ಗೆ ಎಷ್ಟು ಮುನ್ನೆಚ್ಚರಿಕೆ ವಹಿಸಿದರೂ ಈ ಸಂದರ್ಭದಲ್ಲಿ ಸಾಕಾಗುವುದಿಲ್ಲ. ಆದಷ್ಟು ಆನ್‌ಲೈನ್‌ ವ್ಯವಹಾರ ಮಾಡಬೇಕೆಂದು ಸೂಚಿಸಿದ್ದರೂ ಜನರು ಕೇಳುತ್ತಿಲ್ಲ. ಮಾಸ್ಕ್ ಧರಿಸದೇ, ಅಂತರ ಕಾಯ್ದುಕೊಳ್ಳದೆ ಇರುವುದರಿಂದ ನಮಗೂ ಸೋಂಕಿನ ಭಯ ಕಾಡುತ್ತಿದೆ ಎಂದು ಬ್ಯಾಂಕ್‌ ಸಿಬಂದಿ ಹೇಳುತ್ತಿದ್ದಾರೆ.

ಕೆಲವು ಬ್ಯಾಂಕ್‌ಗಳಲ್ಲಿ ಸಿಬಂದಿಗೆ ಸ್ಯಾನಿಟೈಸರ್‌, ಮಾಸ್ಕ್, ಗ್ಲೌಸ್‌ಗಳ ವ್ಯವಸ್ಥೆ ಮಾಡಲಾಗಿದ್ದರೂ ಕೆಲವು ಬ್ಯಾಂಕ್‌ಗಳಲ್ಲಿ ಇಲ್ಲ. ಕೆಲವು ಬ್ಯಾಂಕ್‌ಗಳಲ್ಲಿ ಸಿಬಂದಿ ಖಾತೆಗೆ ಹಣ ಹಾಕಿ ಅವರೇ ಕೊಂಡುಕೊಳ್ಳುವಂತೆ ತಿಳಿಸಲಾಗಿದೆ. ಆದರೆ ಮೆಡಿಕಲ್‌ಗ‌ಳಲ್ಲಿ ಸದ್ಯ ಲಭ್ಯವಿಲ್ಲದೆ ಕಾರಣ ಸಮಸ್ಯೆಯಾಗಿ ಪರಿಣಮಿಸಿದೆ.

ಕೆಲಸದ ಒತ್ತಡ
ಕೋವಿಡ್ 19 ಆತಂಕದ ಹಿನ್ನೆಲೆಯಲ್ಲಿ ಬ್ಯಾಂಕ್‌ ಸಿಬಂದಿಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕೆಲಸದ ಸಮಯವನ್ನು ನಿಗದಿ ಮಾಡಲಾಗಿತ್ತು. ಆದರೆ ಪ್ರಸ್ತುತ ಮತ್ತೆ ಹಳೆ ಮಾದರಿಯಲ್ಲಿ ಬೆಳಗ್ಗೆ 10ರಿಂದ ಸಂಜೆ 5ರ ತನಕ ಸಮಯ ನಿಗದಿಪಡಿಸಲಾಗಿದೆ. ಪ್ರಸ್ತುತ ಗ್ರಾಹಕರ ಸಂಖ್ಯೆಯೂ ಹೆಚ್ಚಿರುವುದರಿಂದ ರಾತ್ರಿ ವರೆಗೂ ಕೆಲಸ ಮಾಡಬೇಕಾಗುತ್ತದೆ ಎಂಬುದು ಬ್ಯಾಂಕ್‌ ಸಿಬಂದಿ ಅಳಲು.

Advertisement

19.20 ಕೋ.ರೂ. ಜಮೆ
ಉಡುಪಿ ಜಿಲ್ಲೆಯಲ್ಲಿ 1,24,000, ದ.ಕ. ಜಿಲ್ಲೆಯಲ್ಲಿ 2,60,000 ಮಹಿಳಾ ಜನಧನ ಖಾತೆಗಳಿವೆ. ಉಭಯ ಜಿಲ್ಲೆಗಳಲ್ಲಿ 3.84 ಲಕ್ಷ ಮಹಿಳಾ ಜನಧನ ಖಾತೆದಾರರಿಗೆ ಒಟ್ಟು 19.20 ಕೋ.ರೂ. ಬಿಡುಗಡೆಯಾಗಿದೆ. ಮೇ ಹಾಗೂ ಜೂನ್‌ ತಿಂಗಳ ಹಣ ಮುಂದಿನ ತಿಂಗಳಿನಲ್ಲಿ ಕ್ರಮವಾಗಿ ಬಿಡುಗಡೆಯಾಗಲಿದೆ.

ಅನಗತ್ಯ ಬರಬೇಡಿ
ಕೋವಿಡ್ 19ಆತಂಕ ಇರುವುದರಿಂದ ಗ್ರಾಹಕರು ಅನಗತ್ಯವಾಗಿ ಬ್ಯಾಂಕ್‌ಗಳಿಗೆ ಬರಬಾರದು. ಸಾಧ್ಯವಾದಷ್ಟು ಆನ್‌ಲೈನ್‌ ವ್ಯವಹಾರಕ್ಕೆ ಒತ್ತು ಕೊಡಬೇಕು. ಹೋಗಲೇಬೇಕಾದ ಅನಿವಾರ್ಯ ಇದ್ದಲ್ಲಿ ಮಾಸ್ಕ್ ಧರಿಸಿ, ಸ್ಯಾನಿಟೈಸರ್‌ನಲ್ಲಿ ಕೈ ಶುಚಿಗೊಳಿಸಿಕೊಂಡು ತೆರಳ‌ಬೇಕು.
–  ರುದ್ರೇಶ್‌ ಮತ್ತು ಪ್ರವೀಣ್‌ ಎಂ.ಪಿ.,
ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ಗಳು, ಉಡುಪಿ, ದ.ಕ. ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next