ಬೆಂಗಳೂರು: ಇನ್ನುಮುಂದೆ ಸಹಾಯಕ ಕಂದಾಯ ಅಧಿಕಾರಿಗಳ (ಎಆರ್‌ಒ) ಕಚೇರಿಗಳಲ್ಲಿ ಖಾತಾ ನೋಂದಣಿ ಹಾಗೂ ವರ್ಗಾವಣೆಗೆ ಅರ್ಜಿಗಳನ್ನು ಸ್ವೀಕರಿಸುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪಾಲಿಕೆಯ ಎಆರ್‌ಒ ಕಚೇರಿಗಳಲ್ಲಿ ನಾಗರಿಕರು ಖುದ್ದು ಭೇಟಿ ನೀಡಿ ಖಾತಾ ನೋಂದಣಿ ಹಾಗೂ ವರ್ಗಾವಣೆಗೆ ಅರ್ಜಿ ನೀಡಿದರೂ, ಅರ್ಜಿಗಳ ವಿಲೇವಾರಿ ವಿಳಂಬವಾಗುತ್ತಿದೆ. ಆ ಹಿನ್ನೆಲೆಯಲ್ಲಿ ಖಾತಾ ನೋಂದಣಿ ಹಾಗೂ ವರ್ಗಾವಣೆ (ಖಾತಾ ವಿಭಜನೆ ಹಾಗೂ ಜೋಡಣೆ) ಸೇವೆಗಳನ್ನು ಆನ್‌ಲೈನ್ ಮೂಲಕವೇ ನಿರ್ವಹಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
ಆನ್‌ಲೈನ್ ಖಾತಾ ಸೇವೆಗಳಿಗೆ ಇ-ಆಡಳಿತ ಇಲಾಖೆಯ ವತಿಯಿಂದ ತಂತ್ರಾಶ ಅಭಿವೃದ್ಧಿಪಡಿಸಲಾಗಿದ್ದು ಈಗಾಗಲೇ ಪ್ರಯೋಗಿಕವಾಗಿ ಯಶಸ್ವಿಯಾಗಿದೆ. ಹೀಗಾಗಿ, ಇನ್ಮುಂದೆ ಆನ್‌ಲೈನ್‌ನಲ್ಲೇ ವಿಲೇವಾರಿ ಮಾಡಬೇಕು. ಕಂದಾಯ ಅಧಿಕಾರಿಗಳು ಸಾರ್ವಜನಿಕರಿಂದ ಖಾತಾ ನೋಂದಣಿ ಹಾಗೂ ವರ್ಗಾವಣೆಗೆ ಸಂಬಂಧಿಸಿದ ಅರ್ಜಿಗಳನ್ನು ಸ್ವೀಕರಿಸುವಂತಿಲ್ಲ ಎಂದು ಇಲಾಖೆ ಗುರುವಾರ ಸುತ್ತೋಲೆ ಹೊರಡಿಸಿದೆ. ಸಾರ್ವಜನಿಕರು ಖಾತಾ ನೋಂದಣಿ ಹಾಗೂ ವರ್ಗಾವಣೆ ಸೇವೆಗಳಿಗಾಗಿ ಬೆಂಗಳೂರು ಒನ್ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಉದಯವಾಣಿ ಪ್ರಕಟಿಸಿತ್ತು: ಸಾರ್ವಜನಿಕರು ಅನಗತ್ಯವಾಗಿ ಬಿಬಿಎಂಪಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಹಾಗೂ ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಖಾತಾ ನೋಂದಣಿ, ವರ್ಗಾವಣೆ, ವಿಭಜನೆ ಹಾಗೂ ಜೋಡಣೆಯಂತಹ ಸೇವೆಗಳನ್ನು ಆನ್‌ಲೈನ್‌ಗೊಳಿಸಲು ಬಿಬಿಎಂಪಿ ಮುಂದಾಗಿರುವ ಕುರಿತು “ಉದಯವಾಣಿ’ಯ ಮಂಗಳವಾರ (ಏ.17) “ಇನ್ನು ಖಾತಾ ಕೂಡ ಆನ್‌ಲೈನ್‌ನಲ್ಲೇ’ ಎಂಬ ಶೀರ್ಷಿಕೆಯಡಿಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.
ಸಾರ್ವಜನಿಕರಿಗೆ ಆನ್‌ಲೈನ್ ಮೂಲಕ ಖಾತಾ ನೋಂದಣಿ ಹಾಗೂ ವರ್ಗಾವಣೆ ಸೇವೆಗಳನ್ನು ಒದಗಿಸಲು ಇ-ಆಡಳಿತ ಇಲಾಖೆಯಿಂದ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಅದರಂತೆ ಇನ್ನು ಮುಂದೆ ಸಹಾಯಕ ಕಂದಾಯ ಅಧಿಕಾರಿಗಳು ಅರ್ಜಿಗಳನ್ನು ಸ್ವೀಕರಿಸುವಂತಿಲ್ಲ. ಸಾರ್ವಜನಿಕರು ಆನ್‌ಲೈನ್ ಇಲ್ಲವೆ, ಬೆಂಗಳೂರು ಒನ್ ಕೇಂದ್ರಗಳ ಮೂಲಕ ಸೇವೆ ಪಡೆಯಬಹುದು.
-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ