Advertisement

ಗಣರಾಜ್ಯೋತ್ಸವಕ್ಕೆ ರಾಜ್ಯದ ಜನಪದ ನೃತ್ಯ ಪ್ರಕಾರ ಸ್ತಬ್ಧಚಿತ್ರ

09:41 AM Jan 23, 2017 | Harsha Rao |

ಹೊಸದಿಲ್ಲಿ: ಜನವರಿ 26ರಂದು ಗಣ ರಾಜ್ಯೋತ್ಸವ ಪ್ರಯುಕ್ತ ದಿಲ್ಲಿಯ ರಾಜಪಥದಲ್ಲಿ ನಡೆಯಲಿರುವ ಪಥ ಸಂಚಲನದಲ್ಲಿ ಈ ಬಾರಿ ಜನಪದ ನೃತ್ಯ ಪ್ರಕಾರಗಳ ಸ್ತಬ್ಧಚಿತ್ರ ರಾಜ್ಯವನ್ನು ಪ್ರತಿನಿಧಿಸಲಿದೆ. ರಾಜ್ಯ ಸರಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೇತೃತ್ವದಲ್ಲಿ, ರಕ್ಷಣಾ ಸಚಿವಾಲಯದ ಬಿಗಿ ಕಾವಲಿನಲ್ಲಿ ಕಳೆದೊಂದು ತಿಂಗಳಿನಿಂದ ಸ್ತಬ್ಧಚಿತ್ರ ನಿರ್ಮಾಣಗೊಳ್ಳುತ್ತಿದ್ದು, ಅಂತಿಮ ಸ್ಪರ್ಶ ನೀಡಲಾಗುತ್ತಿದೆ.

Advertisement

ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್‌.ಆರ್‌. ವಿಶು ಕುಮಾರ್‌, ರಾಜ್ಯವನ್ನು ಪ್ರತಿನಿಧಿಸುವ ಸ್ತಬ್ಧ ಚಿತ್ರದ ಬಗ್ಗೆ ವಿವರಣೆ ನೀಡಿದರು. ರಕ್ಷಣಾ ಇಲಾಖೆಯ ಆಯ್ಕೆ ಸಮಿತಿ ಕರ್ನಾಟಕದ ಜನ ಪದ ನೃತ್ಯಪ್ರಕಾರಗಳನ್ನು ಆಯ್ಕೆ ಮಾಡಿದೆ. ಈ ಸ್ತಬ್ಧಚಿತ್ರದಲ್ಲಿ ಗೊರವರ ಕುಣಿತ, ಡೊಳ್ಳು ಕುಣಿತ, ಸೋಮನ ಕುಣಿತ, ವೀರಗಾಸೆ, ಕಂಸಾಳೆ, ಪೂಜಾ ಕುಣಿತ, ಪಟ್ಟದ ಕುಣಿತ, ಜಗ್ಗಲಗೆ, ದಾಸರಪದ, ನಂದಿಧ್ವಜದಂತಹ ಜನಪದ ಪ್ರಕಾರಗಳು ಇರಲಿವೆ. ಇದಕ್ಕಾಗಿ ರಾಜ್ಯದಿಂದ ಕಲಾವಿದರನ್ನು ಆಯ್ಕೆ ಮಾಡಲಾಗಿದ್ದು, ಕಳೆದ 15 ದಿನಗಳಿಂದ ಅಭ್ಯಾಸದಲ್ಲಿ ನಿರತರಾಗಿದ್ದಾರೆ. 

ರಾಜ್ಯದ ಪ್ರಸಿದ್ಧ ಕಲಾವಿದರಾದ ಶಶಿಧರ ಅಡಪ ಅವರ ಕೈಚಳಕದಲ್ಲಿ ರಾಜ್ಯದ ಸ್ತಬ್ಧಚಿತ್ರ ನಿರ್ಮಾಣಗೊಳ್ಳುತ್ತಿದ್ದು, ಒಂದು ತಿಂಗಳಿಂದ 25ಕ್ಕೂ ಹೆಚ್ಚು ಕಾರ್ಮಿಕರು ಇದಕ್ಕಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ವಿ. ಮನೋಹರ್‌ ಅವರು ಸ್ತಬ್ಧಚಿತ್ರಕ್ಕೆ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಇಲಾಖೆಯ ಉಪ ನಿರ್ದೇಶಕರಾದ ಗುರುಮೂರ್ತಿ, ಗಿರೀಶ್‌ ಎಲ್‌.ಪಿ. ಅವರು ಸ್ತಬ್ಧಚಿತ್ರದ ನಿರ್ಮಾಣದ ಉಸ್ತುವಾರಿ ವಹಿಸಿದ್ದು, ಅಮರೇಶ್‌ ದೊಡ್ಡಮನಿ ಕಲಾವಿದರ ಉಸ್ತುವಾರಿ ವಹಿಸಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ, ಪತ್ರಕರ್ತರ ಜತೆ ಮಾತನಾಡಿದ ಕಲಾವಿದರು, ಈ ಬಾರಿಯ ಗಣರಾಜ್ಯೋತ್ಸವ ಪೆರೇಡ್‌ನ‌ಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ಸಂತಸವಾಗುತ್ತಿದೆ. ತಮಗೆ ಇದೊಂದು ಅವಿಸ್ಮರಣೀಯ ಸಮಯ. ನಡುಗುವ ಚಳಿಯಲ್ಲೂ ಮುಂಜಾನೆ ವೇಳೆ ರಾಜ್‌ಪಥ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next