ಬೆಂಗಳೂರು: ರಿವಾಲ್ವರ್ “ಮಿಸ್ ಫೈರ್’ ಆಗಿ ಎದೆಗೆ ಗುಂಡು ಹೊಕ್ಕ ಪರಿಣಾಮ ಉದ್ಯಮಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಎಚ್‌ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ. ದೊಡ್ಡನೆಕ್ಕುಂದಿ ನಿವಾಸಿ ಕೋಟೆ ನವೀನ್ ಚಂದ್ರರೆಡ್ಡಿ (37) ಗಾಯಗೊಂಡ ಉದ್ಯಮಿ.
ಎದೆಯ ಎಡಭಾಗಕ್ಕೆ ಗುಂಡು ತಗುಲಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ನವೀನ್ ಚಂದ್ರರೆಡ್ಡಿ ಅವರಿಗೆ ಮಣಿಪಾಲ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಚಂದ್ರರೆಡ್ಡಿ, ಪತ್ನಿ ಹಾಗೂ ಮಕ್ಕಳ ಜತೆ ದೊಡ್ಡನೆಕ್ಕುಂದಿಯಲ್ಲಿ ವಾಸವಿದ್ದು, ತಮ್ಮ ಮನೆಯ ನೆಲ ಮಹಡಿಯಲ್ಲೇ ಕೊಠಡಿಯೊಂದನ್ನು ಕಚೇರಿಯಾಗಿ ಮಾಡಿಕೊಂಡಿದ್ದಾರೆ. ಗುರುವಾರ ಮಧ್ಯಾಹ್ನ 12.15ರ ಸುಮಾರಿಗೆ ರೆಡ್ಡಿ ಒಬ್ಬರೇ ಕಚೇರಿ ಸ್ವತ್ಛಗೊಳಿಸುತ್ತಿದ್ದರು.
ಈ ವೇಳೆ ತಮ್ಮ ವೆಬ್ಲೇ ರಿವಾಲ್ವರ್ ಅನ್ನು ಬಟ್ಟೆಯಿಂದ ಒರೆಸಲು ಮುಂದಾಗಿದ್ದಾರೆ. ಆದರೆ ರಿವಾಲ್ವರ್ ನಳಿಕೆಯನ್ನು ತಮ್ಮ ಎದೆಗೆ ತಾಕಿಸಿಕೊಂಡು ಒರೆಸುವಾಗ ಆಕಸ್ಮಿಕವಾಗಿ ಟ್ರಿಗರ್ ಒತ್ತಿದ ಪರಿಣಾಮ ರಿವಾಲ್ವರ್‌ನಿಂದ ಗುಂಡು ಹಾರಿ ಚಂದ್ರರೆಡ್ಡಿ ಅವರ ಎದೆ ಹೊಕ್ಕು ಬೆನ್ನಿನಿಂದ ಹೊರ ಬಂದಿದೆ.
ಗುಂಡು ಹೊಕ್ಕಿದ್ದರಿಂದ ನಿತ್ರಾಣಗೊಂಡ ಚಂದ್ರರೆಡ್ಡಿ ಸ್ಥಳದಲ್ಲೇ ಕುಸಿದುಬಿದ್ದಿದ್ದಾರೆ. ಇತ್ತ ಗುಂಡಿನ ಸದ್ದು ಕೇಳಿ ಮನೆಯ ಹೊರಗಿದ್ದ ಕಚೇರಿ ಸಹಾಯಕ ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಿ, ರಕ್ತದ ಮಡುವಿನಲ್ಲಿ ಬಿದ್ದಿದ್ದ ರೆಡ್ಡಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು. ಈ ಸಂಬಂಧ ಎಚ್‌ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರವಾನಿಗೆ ಹೊಂದಿದ್ದ ರಿವಾಲ್ವರ್!
ಸುದ್ದಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ತೆರಳಿ ರಿವಾಲ್ವರ್ ವಶಕ್ಕೆ ಪಡೆದು ಪರಿಶೀಲಿಸಲಾಗಿದೆ. ರಿಯಲ್ ಎಸ್ಟೇಟ್ ಉದ್ಯಮ ಸೇರಿದಂತೆ ಹಲವು ವ್ಯವಹಾರಗಳನ್ನು ನಡೆಸುತ್ತಿರುವ ಚಂದ್ರರೆಡ್ಡಿ ಹಲವು ವರ್ಷಗಳ ಹಿಂದೆ ಪ್ರಾಣ ರಕ್ಷಣೆ ಕಾರಣ ನೀಡಿ ಪರವಾನಿಗೆ ಪಡೆದು ರಿವಾಲ್ವರ್ ಹೊಂದಿದ್ದಾರೆ.
ಇತ್ತೀಚೆಗೆ ಪರವಾನಿಗೆ ನವೀಕರಣ ಕೂಡ ಮಾಡಿಸಿದ್ದಾರೆ. ಸದ್ಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಂದ್ರರೆಡ್ಡಿ ಅವರಿಗೆ ಪ್ರಜ್ಞೆ ಬಂದ ಬಳಿಕ, ಘಟನೆ ಸಂಬಂಧ ಹೇಳಿಕೆ ಪಡೆಯುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.