Advertisement

ಅಪಘಾತಗಳಿಗೆ ಪಾದಚಾರಿಗಳೇ ಹೆಚ್ಚು ಬಲಿ!

11:59 AM May 15, 2017 | |

ಬೆಂಗಳೂರು: ನಗರದ ಸಂಚಾರ ವ್ಯವಸ್ಥೆಯಲ್ಲಿ ವಾಹನ ಚಾಲಕರಿಗಿಂತ ಅಸುರಕ್ಷತೆ ಭೀತಿ ಎದುರಿಸುತ್ತಿರುವವರು ಪಾದಚಾರಿಗಳು. ಹೌದು, ರಸ್ತೆ ಅಪಘಾತಗಳಲ್ಲಿ ವಾಹನ ಸವಾರರಿ ಗಿಂತ ಹೆಚ್ಚು ಪಾದಚಾರಿಗಳೇ ಬಲಿಯಾಗುತ್ತಿದ್ದಾರೆ ಎಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌) ಸಮೀಕ್ಷಾ ವರದಿ ಬಹಿರಂಗಪಡಿಸಿದೆ. 

Advertisement

ಬೆಂಗಳೂರಿನಲ್ಲಿ ಪ್ರತಿ ವರ್ಷ ಸಾವಿರಕ್ಕೂ ಅಧಿಕ ಸಾವುಗಳು ಸಂಭವಿಸುತ್ತಿದ್ದು, ಈ ಪೈಕಿ ಶೇ. 52ರಷ್ಟು ಪಾದಚಾರಿಗಳೇ ಆಗಿದ್ದಾರೆ. ಇದರಲ್ಲಿ ಬಹುತೇಕರು 16ರಿಂದ 45 ವರ್ಷದ ಒಳಗಿನವರಾಗಿದ್ದು, ಹೀಗೆ ಸಾವನ್ನಪ್ಪುವ ಪ್ರತಿ ನಾಲ್ವರು ಪಾದಚಾರಿಗಳಲ್ಲಿ ಒಂದು ಮಗು ಮತ್ತು ಒಬ್ಬರು ವಯೋವೃದ್ಧರು ಇರುತ್ತಾರೆ ಎಂದು ನಿಮ್ಹಾನ್ಸ್‌ ಬಿಡುಗಡೆ ಮಾಡಿದ “ಅಡ್ವಾನ್ಸಿಂಗ್‌ ರೋಡ್‌ ಸೇಫ್ಟಿ ಇನ್‌ ಇಂಡಿಯಾ: ಇಂಪ್ಲಿಮೆಂಟೇಷನ್‌ ಈಸ್‌ ದಿ ಕೀ’ ಕುರಿತ ವರದಿ ತಿಳಿಸಿದೆ. 

ರಸ್ತೆ ದಾಟುವಾಗಲೇ ಹೆಚ್ಚು ಬಲಿ: ರಸ್ತೆ ದಾಟುವಾಗ, ರಸ್ತೆ ಬದಿ ಸಂಚರಿಸುವಾಗ, ಹಿಂಬದಿಯಿಂದ ಹೀಗೆ ಹಲವು ರೀತಿಯಲ್ಲಿ ಪಾದಚಾರಿಗಳಿಗೆ ವಾಹನಗಳು ಡಿಕ್ಕಿ ಹೊಡೆದು ಸಾವನ್ನಪ್ಪುತ್ತಿದ್ದಾರೆ. ಆದರೆ, ಅತಿ ಹೆಚ್ಚು ಶೇ.60ರಷ್ಟು ಜನ ರಸ್ತೆ ದಾಟು ವಾಗಲೇ ಮೃತಪಟ್ಟಿದ್ದಾರೆ. ಇದರಲ್ಲಿ ಶೇ. 24ರಷ್ಟು ಸಾವುಗಳು ಕಾರುಗಳು ಡಿಕ್ಕಿ ಹೊಡೆದ ಪರಿಣಾಮದಿಂದ ಸಂಭವಿಸುತ್ತಿವೆ. ದ್ವಿಚಕ್ರ ವಾಹನಗಳಿಂದ ಶೇ. 22ರಷ್ಟು ಹಾಗೂ ಶೇ. 18ರಷ್ಟು ಬಸ್‌ಗಳ ಅಪಘಾತದಲ್ಲಿ ಪಾದಚಾರಿಗಳು ಬಲಿಯಾಗುತ್ತಿದ್ದಾರೆ ಎಂದು ನಿಮ್ಹಾನ್ಸ್‌ನ ಜಿ. ಗುರುರಾಜ್‌ ನೇತೃತ್ವದಲ್ಲಿ ಸಿದ್ಧಪಡಿಸಿದ ವರದಿ ಹೇಳುತ್ತದೆ. 

ಒಟ್ಟಾರೆ ದೇಶದಲ್ಲಿ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿರುವ ಪಾದಚಾರಿಗಳ ಸಂಖ್ಯೆ ಶೇ. 40ರಷ್ಟಿದೆ. ಬೆಂಗಳೂರಿನಲ್ಲಿ ಈ ಪ್ರಮಾಣ ಶೇ. 52ರಷ್ಟಿದೆ. ಎತ್ತರಿಸಿದ ಪಾದಚಾರಿಗಳ ಮಾರ್ಗಗಳ ಕೊರತೆ, ಕೆಲವೆಡೆ ಈ ಮೇಲ್ಸೇತುವೆಗಳಿದ್ದರೂ ಎಸ್ಕಲೇಟರ್‌ ಅಥವಾ ಲಿಫ್ಟ್ಗಳು ಇಲ್ಲದ್ದರಿಂದ ವೃದ್ಧರು, ಗರ್ಭಿಣಿಯರು, ಮಕ್ಕಳು ಏರಿ-ಇಳಿಯಲು ಆಗುವುದಿಲ್ಲ. ದೊಡ್ಡ ರಸ್ತೆಗಳು ಇರುವ ಕಡೆಗಳಲ್ಲಿ (ಉದಾಹರಣೆಗೆ ಬಳ್ಳಾರಿ ರಸ್ತೆ) ರಸ್ತೆ ದಾಟುವಾಗ ಅಪಘಾತಗಳು ಸಂಭವಿಸಿ, ಸಾವನ್ನಪ್ಪುತ್ತಿರುವುದು ಸಾಮಾನ್ಯವಾಗಿದೆ ಎಂದು ತಜ್ಞರು ಹೇಳುತ್ತಾರೆ. 

ರಸ್ತೆ ದಾಟಲು ವ್ಯವಸ್ಥೆಯೇ ಇಲ್ಲ: ಜನ ಎಲ್ಲೆಂದರಲ್ಲಿ ರಸ್ತೆ ದಾಟುವುದು ಒಂದು ಕಡೆಯಾದರೆ, ನಗರದ ಈಗಲೂ ಹಲವು ಪ್ರಮುಖ ಜಂಕ್ಷನ್‌ಗಳಲ್ಲಿ ರಸ್ತೆ ದಾಟಲು ಸೂಕ್ತ ವ್ಯವಸ್ಥೆಗಳಿಲ್ಲ. ಇನ್ನು ಸಿಗ್ನಲ್‌ಗ‌ಳಲ್ಲಂತೂ ಪಾದಚಾರಿಗಳು ಲೆಕ್ಕಕ್ಕೇ ಇಲ್ಲ. ರಸ್ತೆ ದಾಟಲು ಕೆಲವೆಡೆ 5ರಿಂದ 10 ಸೆಕೆಂಡ್‌ ಇರುತ್ತದೆ. ಹೀಗಿರುವಾಗ ರಸ್ತೆ ದಾಟುವುದು ಹೇಗೆ ಎಂದು ಸಿವಿಕ್‌ ಸಂಸ್ಥೆಯ ಕಾರ್ಯನಿರ್ವಾಹಕ ಟ್ರಸ್ಟಿ ಕಾತ್ಯಾಯಿನಿ ಚಾಮರಾಜ್‌ ಕೇಳುತ್ತಾರೆ. 

Advertisement

ಈ ಮಧ್ಯೆ ರಸ್ತೆ ವಿಸ್ತರಣೆ, ಫ‌ುಟ್‌ಪಾತ್‌ಗಳಲ್ಲಿ ಟ್ರಾನ್ಸ್‌ಫಾರ್ಮರ್‌ಗಳು, ಮರಳು ಗುಡ್ಡೆ ಹಾಕಲಾಗಿರುತ್ತದೆ. ಆಗ ಅನಿವಾರ್ಯವಾಗಿ ರಸ್ತೆಗಳಲ್ಲಿ ಸಂಚರಿಸಬೇಕಾಗುತ್ತದೆ. ಫ್ಲೈಓವರ್‌ಗಳು ಇದ್ದಲ್ಲಂತೂ ಇನ್ನೂ ಸಮಸ್ಯೆ. ಇಂತಹ ಸಮಸ್ಯೆಗಳಿಗೆ ಪಾದಚಾರಿಗಳು ಬಲಿಯಾಗುತ್ತಿದ್ದಾರೆ. ಸರ್ಕಾರ ಮತ್ತು ಬಿಬಿಎಂಪಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಅದೇ ರೀತಿ, ಬೈಕ್‌ ಸವಾರರು ಕೂಡ ಅಪಘಾತಗಳಲ್ಲಿ ಹೆಚ್ಚು ಸಾವನ್ನಪ್ಪುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನಗಳ ಸವಾರರಿಗೆ ಪ್ರತ್ಯೇಕ ಪಥ ನಿರ್ಮಿಸಬೇಕು ಎಂದೂ ಕಾತ್ಯಾಯಿನಿ ಚಾಮರಾಜ್‌ ಅಭಿಪ್ರಾಯಪಡುತ್ತಾರೆ. 

ಚಾಲನೆ ವೇಳೆ ಮೊಬೈಲ್‌ ಬಳಕೆ
ನಗರದಲ್ಲಿ ಶೇ. 83ರಷ್ಟು ಚಾಲಕರು ವಾಹನ ಚಾಲನೆ ವೇಳೆ ಮೊಬೈಲ್‌ ಫೋನ್‌ ಬಳಕೆ ಮಾಡುತ್ತಾರೆ. ಇದರಿಂದಾಗಿ ದೇಶದಲ್ಲೇ ಅತ್ಯಧಿಕ ಮಂದಿ ವಾಹನ ಚಾಲನೆ ವೇಳೆ ಮೊಬೈಲ್‌ಬಳಸುವ ನಗರ ಬೆಂಗಳೂರು ಎಂಬ ಕುಖ್ಯಾತಿ ಬಂದಿದೆ. “ಸೇವ್‌ ಲೈಫ್’ ಪ್ರತಿಷ್ಠಾ ನವು ಬಿಡುಗಡೆ ಮಾಡಿದ 2017ನೇ ಸಾಲಿನ ಸಮೀಕ್ಷಾ ವರದಿಯಲ್ಲಿ ಈ ಮಾಹಿತಿ ಬಹಿರಂಗ ಗೊಂಡಿದೆ.

ಆದರೆ, ಮೊಬೈಲ್‌ ಬಳಕೆ ಸಂದರ್ಭದಲ್ಲೇ ರಸ್ತೆ ಅಪಘಾತಗಳು ಸಂಭವಿಸಿ, ಸವಾ ರರು ಅಥವಾ ಚಾಲಕರು ಸಾವನ್ನಪ್ಪಿರುವವರ ಬಗ್ಗೆ ಇದುವರೆಗೆ ಎಲ್ಲಿಯೂ ಯಾವುದೇ ಮಾಹಿತಿ ಇಲ್ಲ ಎಂದು ನಿಮ್ಹಾನ್ಸ್‌ನ ಜಿ. ಗುರು ರಾಜ್‌ “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ. ವಾಹನ ಚಾಲನೆ ವೇಳೆ ಮೊಬೈಲ್‌ ಬಳಕೆ ಮಾಡುವ ಚಾಲಕರ ಪ್ರಮಾಣ 2008ರಲ್ಲಿ ಶೇ. 6.5 ಇತ್ತು. 2017ರಲ್ಲಿ ಇದು ಶೇ. 83ಕ್ಕೆ ಏರಿಕೆಯಾಗಿದೆ. ಕೋಲ್ಕತಾದಲ್ಲಿ ಶೇ. 70 ಹಾಗೂ ಮುಂಬೈನಲ್ಲಿ ಶೇ. 65ರಷ್ಟು ಚಾಲಕರು ವಾಹನ ಚಾಲನೆ ವೇಳೆ ಮೊಬೈಲ್‌ ಬಳಕೆ ಮಾಡುತ್ತಾರೆ ಎಂದು ಪ್ರತಿಷ್ಠಾನ ತಿಳಿಸಿದೆ.

ಹೆಲ್ಮೆಟ್‌ ಬಳಸುವವರ ಸಂಖ್ಯೆ ಶೇ.50ಕ್ಕೂ ಕಡಿಮೆ
ದಂಡ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದ್ದರೂ ನಗರದಲ್ಲಿ ಹೆಲ್ಮೆಟ್‌ ಬಳಕೆದಾರರ ಪ್ರಮಾಣ ಶೇ. 50ಕ್ಕಿಂತ ಕಡಿಮೆ ಇದೆ ಎಂದೂ ವರದಿ ತಿಳಿಸಿದೆ. ಹೆಲ್ಮೆಟ್‌ ಧರಿಸುವುದರ ಬಗ್ಗೆ ಸಾಕಷ್ಟು ಅರಿವು ಮೂಡಿಸಿದ್ದರೂ ಅದರ ಬಳಕೆ ತುಂಬಾ ಕಡಿಮೆ ಇದೆ. “ದಂಡ ಪ್ರಯೋಗ’ದಿಂದ ತಪ್ಪಿಸಿಕೊಳ್ಳಲಿಕ್ಕೆ ಮಾತ್ರ ಕೆಲವರು ಹೆಲ್ಮೆಟ್‌ ಧರಿಸುತ್ತಿದ್ದಾರೆ ಅಷ್ಟೇ. ಸಮೀಕ್ಷೆ ಪ್ರಕಾರ ಶೇ. 50ಕ್ಕಿಂತಲೂ ಕಡಿಮೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸುತ್ತಾರೆ. ಅಪಘಾತದಲ್ಲಿ ಗಾಯಗೊಂಡು ತುರ್ತು ಸೇವೆ ವಿಭಾಗಕ್ಕೆ ಬಂದ ಗಾಯಾಳುಗಳಲ್ಲಿ ಶೇ. 24ರಿಂದ ಶೇ. 51ರಷ್ಟು ಗಾಯಾಳುಗಳು ಮಾತ್ರ ಹೆಲ್ಮೆಟ್‌ ಧರಿಸಿರುವುದು ತಿಳಿದುಬಂದಿದೆ ಎಂದು ಜಿ. ಗುರುರಾಜ್‌ ಹೇಳುತ್ತಾರೆ.

* ವಿಜಯಕುಮಾರ್‌ ಚಂದರಗಿ 

Advertisement

Udayavani is now on Telegram. Click here to join our channel and stay updated with the latest news.

Next