Advertisement

ಪಡುಬಿದ್ರಿ-ಕಾರ್ಕಳ ಜಂಕ್ಷನ್‌ನಲ್ಲಿ ಅಪಘಾತದ ಟೆನ್ಶನ್‌

01:03 AM Feb 07, 2022 | Team Udayavani |

ಪಡುಬಿದ್ರಿ: ಬೈಪಾಸ್‌ ಯೋಜನೆಯನ್ನು ಬದಲಿಸಿ ಹೆದ್ದಾರಿ ಚತುಷ್ಪಥ ಮಾರ್ಗವು ಪಡುಬಿದ್ರಿ ಪೇಟೆಯೊಳಗೆ ಹೋಗುವಂತಾಯಿತು. ಬೈಪಾಸ್‌ಗೆ ಭಾರೀ ವಿರೋಧ ವ್ಯಕ್ತವಾಗಿ ಕೇವಲ 45 ಮೀಟರ್‌ ಭೂ ಸ್ವಾಧೀನತೆ ಜಾರಿಗೆ ಬಂತು. ಪಡುಬಿದ್ರಿ ಪೇಟೆಯಲ್ಲೇ ಪೂರ್ವಕ್ಕೆ ರಾಜ್ಯ ಹೆದ್ದಾರಿ ನಂ. 1 ಕಾರ್ಕಳವನ್ನು ಸಂಪರ್ಕಿಸುತ್ತಿದೆ. ಭಾರೀ ಯೋಜನೆಗಳೆರಡು ಪಡುಬಿದ್ರಿ ಪರಿಸರದಲ್ಲಿದ್ದು ಇಲ್ಲಿಗೆ ಹೋಗಬೇಕಾದ ಘನ ವಾಹನಗಳೂ ಈ ಹೆದ್ದಾರಿಗಳನ್ನು ಬಳಸಿ ಸಾಗುತ್ತಿರಬೇಕು. ಹಾಗಾಗಿ ಪಡುಬಿದ್ರಿ – ಕಾರ್ಕಳ ಜಂಕ್ಷನ್‌ ಈಗಂತೂ ಬಹಳಷ್ಟು ಅಪಘಾತಗಳಿಗೆ ಕಾರಣವಾಗುತ್ತಿದೆ. ಸಾವು, ನೋವು, ಮೂಳೆ ಮುರಿತಗಳಿಗೆ ಜನರು ಅನುಭವಿಸುತ್ತಿದ್ದಾರೆ.

Advertisement

ಸಿಗ್ನಲ್‌ ಲೈಟ್‌ಗೆ ಜನರಿಂದ ಬಹಳಷ್ಟು ಬೇಡಿಕೆಗಳು ಬರುತ್ತಿದ್ದವು. ಬೆಳಗ್ಗಿನ ಹೊತ್ತು ಸಣ್ಣ ಸಣ್ಣ ಶಾಲಾ ಮಕ್ಕಳು ಹೆದ್ದಾರಿ ದಾಟುವುದೇ ಮಹಾನ್‌ ಕಾಯಕವಾಗುತ್ತದೆ. ಬಿರುಸಾಗಿ ಜೀವವನ್ನು ಕೈಯಲ್ಲಿ ಹಿಡಿದು ಬರುವ ರೀತಿ ಈ ಪುಟಾಣಿಗಳು ಸಾಗಬೇಕಾಗುತ್ತದೆ. ಆದರೀಗ ಗುತ್ತಿಗೆದಾರ ನವಯುಗ ನಿರ್ಮಾಣ ಕಂಪೆನಿಯು ತನ್ನ ನೀಲ ನಕಾಶೆಯಲ್ಲಿ ಇಲ್ಲ, ಕೇಂದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅನುಮೋದನೆಯಿಲ್ಲದೆ ಏನನ್ನೂ ನಿರ್ವಹಿಸಲಾಗದು ಎನ್ನುತ್ತಿದೆ. ಪೊಲೀಸ್‌ ಇಲಾಖೆಯೂ ಹೆದ್ದಾರಿಯಲ್ಲಿ ಸಿಗ್ನಲ್‌ ಅಳವಡಿಕೆಗೆ ಸೂಕ್ತ ಆದೇಶಗ ಳಾಗದೆ ಅವುಗಳನ್ನು ನಿರ್ವಹಿಸುವಂತಿಲ್ಲ ಎನ್ನುತ್ತಿದೆ. ಈ ಸಂಕಷ್ಟಕ್ಕೆ ಪರಿಹಾರವಾಗಿ ಹೆದ್ದಾರಿ ದಾಟುವ ಪಾದಚಾರಿಗಳಿಗೆ, ಶಾಲಾ ಪುಟಾಣಿಗಳಿಗೆ ಸೂಕ್ತ ಪರಿಹಾರದ ವ್ಯವಸ್ಥೆಯಾಗಬೇಕೆಂಬುದು ಸಾರ್ವಜನಿಕರ ಅಹವಾಲು.

ಎರಡು ತಿಂಗಳುಗಳಲ್ಲಿ ಆರು ಅಪಘಾತಗಳು
ಡಿಸೆಂಬರ್‌- ಜನವರಿ ಎರಡು ತಿಂಗಳುಗಳಲ್ಲಿ 6 ಅಪಘಾತದ ಪ್ರಕರಣಗಳು ಸಂಭವಿಸಿವೆ. 4 ಪ್ರಕರಣಗಳು ಠಾಣೆಯಲ್ಲಿ ದಾಖಲಾಗಿದ್ದು ಎರಡು ಪ್ರಕರಣಗಳು ರಾಜಿಯಲ್ಲಿ ಕೊನೆಗೊಂಡಿವೆ. ದಾಖಲಾದ ನಾಲ್ಕೂ ಪ್ರಕರಣಗಳಲ್ಲಿ ಗಾಯಾಳುಗಳ ಮೂಳೆ ಮುರಿತಗಳು ಸಂಭವಿಸಿದೆ. ಇಲ್ಲಿನ ಜನ ನಿಬಿಡತೆ ಹಾಗೂ ವಾಹನದಟ್ಟಣೆಗಳನ್ನು ಕಡಿಮೆಗೊಳಿಸಲು ಫೂಟ್‌ ಓವರ್‌ ಬ್ರಿಡ್ಜ್ ಸೂಕ್ತ ಮಾರ್ಗವಾಗಿದೆ. ಅದೇ ರೀತಿ ಇಲ್ಲಿನ ರಿಕ್ಷಾ, ಟೆಂಪೋ, ಕಾರುಗಳ ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಉಡುಪಿ, ಮಂಗಳೂರು ಹಾಗೂ ಕಾರ್ಕಳದತ್ತ ತೆರಳುವ ಬಸ್‌ಗಳ ಸುಗಮ ಸಂಚಾರವನ್ನು ಸೂಕ್ತ ನಿಲ್ದಾಣಗಳ ವ್ಯವಸ್ಥೆಯೊಂದಿಗೆ ಕಲ್ಪಿಸಿದಾಗ ಪ್ರಮುಖವಾಗಿ ಪಡುಬಿದ್ರಿ ಪೇಟೆ, ಕಾರ್ಕಳ ಜಂಕ್ಷನ್‌ನ ದಟ್ಟಣೆಯು ಕಡಿಮೆಯಾಗಬಲ್ಲದು.
– ಅಶೋಕ ಕುಮಾರ್‌, ಪಿಎಸ್‌ಐ, ಪಡುಬಿದ್ರಿ ಪೊಲೀಸ್‌ ಠಾಣೆ

ಚೆಂಡು ಗ್ರಾ.ಪಂ. ಅಂಗಳದಲ್ಲಿ
ಈಚೆಗೆ ನವಯುಗ ಕಂಪೆನಿಯ ಅಧಿಕಾರಿಯೊಬ್ಬರು ಗ್ರಾ. ಪಂ.ನಲ್ಲಿ ನಡೆದಿದ್ದ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಬಳಿ ಕೇಂದ್ರೀಯ ಹೆದ್ದಾರಿ ಅನುದಾನವಿರುವುದರ ಬಗ್ಗೆ ಸುಳಿವಿತ್ತಿದ್ದಾರೆ. ಈಗ ಚೆಂಡು ಪಂಚಾಯತ್‌ ಅಂಗಣದಲ್ಲಿದೆ. ಅವಕಾಶಗಳನ್ನು ಗ್ರಾ. ಪಂ. ಸದಸ್ಯರು ಸದುಪಯೋಗಿಸಿಕೊಳ್ಳಬೇಕಿದೆ. ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಕಾರ್ಕಳ ಜಂಕ್ಷನ್‌ ಸಮೀಪ ಫೂಟ್‌ ಓವರ್‌ ಬ್ರಿಡ್ಜ್ಗೆ ಠರಾವನ್ನು ಮಂಡಿಸುವ ಚಿಂತನೆ ಇದೆ. ಬಳಿಕ ಇದನ್ನು ಸಂಸದರು, ಎನ್‌ಎಚ್‌ಎಐ, ಜಿಲ್ಲಾಧಿಕಾರಿಯವರಿಗೆ ಕಳುಹಿಸಿ ಪ್ರಾಧಿಕಾರದಲ್ಲಿನ ಅನುದಾನಗಳನ್ನು ಬಳಸಿಕೊಂಡು ಈ ಕಾಮಗಾರಿಗಳನ್ನು ಪೂರೈಸಬೇಕಿದೆ.

-ಆರಾಮ

Advertisement

 

Advertisement

Udayavani is now on Telegram. Click here to join our channel and stay updated with the latest news.

Next