ಧಾರವಾಡ: ಕಾರುಗಳ ನಡುವೆ ಮುಖಾಮುಖೀ ಡಿಕ್ಕಿ ಸಂಭವಿಸಿ ಕುಂದಗೋಳದ ಶಿವಾನಂದ ಮಠದ ಶ್ರೀ ಬಸವೇಶ್ವರ ಸ್ವಾಮೀಜಿ ಸೇರಿ ನಾಲ್ವರು ಮೃತಪಟ್ಟ ಘಟನೆ ಹುಬ್ಬಳ್ಳಿ-ಧಾರವಾಡ ಬೈಪಾಸ್‌ನ ಯರಿಕೊಪ್ಪ ಬಳಿ ಭಾನುವಾರ ಸಂಭವಿಸಿದೆ.
ಕುಂದಗೋಳದ ಶಿವಾನಂದ ಮಠದ ಶ್ರೀ ಬಸವೇಶ್ವರ ಸ್ವಾಮೀಜಿ (55) ಹಾಗೂ ಕಾರು ಚಾಲಕ ಶಂಕರಗೌಡ ಪಾಟೀಲ (67), ಇನ್ನೊಂದು ಕಾರಿನಲ್ಲಿದ್ದ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಸಮೀಪದ ಕಬ್ಬೂರಿನ ನಿವಾಸಿಗಳಾದ ಮಹಾದೇಶ ಕಾಡೇಶಗೋಳ (56), ಮಾರುತಿ ಕಾಕನೂರ (30) ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಇನ್ನೂ ಮೂವರು ಗಾಯಗೊಂಡಿದ್ದಾರೆ.
ಸ್ವಾಮೀಜಿ ಅವರು ಕುಂದಗೋಳದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತರ ಮನೆಗೆ ತೆರಳುತ್ತಿದ್ದರು. ಚಾಲಕರ ವೇಗದ ಚಾಲನೆ ಮತ್ತು ಪಕ್ಕದಲ್ಲಿದ್ದ ಲಾರಿ ಹಿಂದಿಕ್ಕಲು ಹೋಗಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಕ್ತರ ದಂಡು ಭೇಟಿ: ಬಸವೇಶ್ವರ ಸ್ವಾಮೀಜಿ ಅಪಘಾತದಲ್ಲಿ ಮೃತಪಟ್ಟ ಸುದ್ದಿ ಹರಡುತ್ತಿದ್ದಂತೆ ಕುಂದಗೋಳದಿಂದ ಮಠದ ಭಕ್ತರ ದಂಡೇ ಅಪಘಾತವಾದ ಸ್ಥಳಕ್ಕೆ ಭೇಟಿ ನೀಡಿತ್ತು. ಭಕ್ತರ ದುಃಖ ಮುಗಿಲು ಮುಟ್ಟಿತ್ತು. ಸ್ವಾಮೀಜಿ ಅವರು ಉತ್ತಮ ಕಾರ್ಯ ಮಾಡುತ್ತ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಗುಣ ಹೊಂದಿದ್ದರು. ಅವರನ್ನು ಕಳೆದುಕೊಂಡ ನಾವು ತಬ್ಬಲಿಗಳಾದೆವು ಎಂದು ಭಕ್ತರು ಕಣ್ಣೀರಿಟ್ಟರು.
ಸಾಂತ್ವನ: ಮಾಜಿ ಸಚಿವ ವಿನಯ್ ಕುಲಕರ್ಣಿ, ಬಸವರಾಜ ಹೊರಟ್ಟಿ, ಶಾಸಕ ಅಮೃತ ದೇಸಾಯಿ, ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಧಾರವಾಡ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಬಸವೇಶ್ವರ ಸ್ವಾಮೀಜಿಗಳ ಅಂತಿಮ ದರ್ಶನ ಪಡೆದು ದುಃಖದಲ್ಲಿದ್ದ ಭಕ್ತರಿಗೆ ಸಾಂತ್ವನ ಹೇಳಿದರು.
ಸಾವಿನ ಹೆದ್ದಾರಿ: ಹುಬ್ಬಳ್ಳಿ- ಧಾರವಾಡ ಬೈಪಾಸ್ ಸಾವಿನ ಹೆದ್ದಾರಿ ಎಂದೇ ಕುಖ್ಯಾತಿ ಗಳಿಸಿದೆ. ಯರಿಕೊಪ್ಪ ಬಳಿ ಮಗು ಸೇರಿ ನಾಲ್ವರು ಕಾರು ಅಪಘಾತದಲ್ಲಿ ಮೃತಪಟ್ಟ ವಾರದಲ್ಲೇ ಅದೇ ಅಪಘಾತ ಸಂಭವಿಸಿ ನಾಲ್ವರು ದಾರುಣ ಅಂತ್ಯ ಕಂಡಿದ್ದಾರೆ.