ಚನ್ನಪಟ್ಟಣ: ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಸಂಸ್ಥೆ ಬಸ್, ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ, ಬಸ್‌ನಲ್ಲಿದ್ದ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಪಟ್ಟಣದ ಸಾತನೂರು ರಸ್ತೆಯ ಅಂಬೇಡ್ಕರ್ ನಗರದ ಬಳಿ ನಡೆದಿದೆ.
ಸಾತನೂರು ಮಾರ್ಗದ ಸಾರಿಗೆ ಸಂಸ್ಥೆ ಬಸ್, ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಲಾರಿ ಪಲ್ಟಿಯಾಗಿದೆ. ಈ ಸಂದರ್ಭದಲ್ಲಿ ಚಾಲಕ, ನಿರ್ವಾಹಕ ಸೇರಿದಂತೆ ಬಸ್ ಮುಂಭಾಗ ಕುಳಿತಿದ್ದ 10ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ: ವಿರೂಪಸಂದ್ರ ಗ್ರಾಮದ ಲಕ್ಷ್ಮೀ, ಕೋಡಿಹೊಸಹಳ್ಳಿಯ ಗೀತಾ, ಬಿ.ವಿ.ಹಳ್ಳಿಯ ಹರ್ಷಿತಾ, ಭಾಗ್ಯ, ಅಮ್ಮಳ್ಳಿದೊಡ್ಡಿಯ ಶಾಂತಾ, ಬೈರಶೆಟ್ಟಿಹಳ್ಳಿ ಗ್ರಾಮದ ಪೂರ್ಣಿಮಾ, ಶಿವರಾಜು, ಅರುಣ್, ಜಗದೀಶ್, ಸತೀಶ್ ಅವರಿಗೆ ಗಾಯಗಳಾಗಿವೆ. ಚಾಲಕ ಲೋಕೇಶ್ ಕಾಲಿಗೆ ಪೆಟ್ಟಾದರೆ, ನಿರ್ವಾಹಕ ಸ್ವಾಮಿ ಕಣ್ಣಿನ ಬಳಿ ಗಾಯಗಳಾಗಿವೆ. ಗಾಯಗೊಂಡವರಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಕೆಟ್ಟು ರಸ್ತೆ ಬದಿ ನಿಂತಿದ್ದ ಲಾರಿ: ಲಾರಿ ಕೆಟ್ಟಿದ್ದರಿಂದ ರಸ್ತೆ ಬದಿಯಲ್ಲಿಯೇ ಇದ್ದ ಗ್ಯಾರೇಜ್‌ಗೆ ರಿಪೇರಿಗಾಗಿ ಬಿಡಲಾಗಿತ್ತು. ಸಾತನೂರು ಕಡೆಯಿಂದ ಬಂದ ಬಸ್‌ನ ಬ್ರೇಕ್ ವೈಫಲ್ಯವೇ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬ್ರೇಕ್ ಹಾಕಿದಾಗ ವೈಫಲ್ಯಗೊಂಡಿರುವುದು ಚಾಲಕನ ಗಮನಕ್ಕೆ ಬಂದು, ಹೆಚ್ಚಿನ ಅನಾಹುತ ತಪ್ಪಿಸಲು ಮುಂದೆ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆಸಿದ್ದಾನೆ ಎಂದು ಹೇಳಲಾಗಿದೆ.
ಗ್ರಾಮೀಣ ಭಾಗದಲ್ಲಿ ಹಳೆ ಬಸ್ ಸಂಚಾರ: ಗ್ರಾಮೀಣ ಭಾಗದಲ್ಲಿ ಸಂಚಾರ ಮಾಡುವ ಬಹುತೇಕ ಬಸ್‌ಗಳು ಹಳೆಯವಾಗಿದ್ದು, ಅವಧಿ ಮುಗಿದಿದ್ದರೂ ಕೆಲ ಬಸ್‌ಗಳು ಸಂಚಾರ ಮಾಡುತ್ತಿವೆ. ಸುಸ್ಥಿತಿಯಲ್ಲಿರದ ಬಸ್‌ಗಳನ್ನು ಓಡಿಸುತ್ತಿರುವುದು ಇಂತಹ ಘಟನೆಗಳಿಗೆ ಕಾರಣವಾಗುತ್ತಿವೆ ಎನ್ನುವುದು ಚಾಲಕ, ನಿರ್ವಾಹಕರ ಅಳಲಾಗಿದೆ. ಸ್ಥಳಕ್ಕೆ ಡಿಪೋ ವ್ಯವಸ್ಥಾಪಕ ರಾಘವೇಂದ್ರ, ಸಂಚಾರ ಠಾಣೆ ಎಸ್‌ಐ ಶಿವಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.