Advertisement

ಗುಂಡಿ ಮುಚ್ಚದಿದ್ದರೆ ಅಪಘಾತ ಖಚಿತ

04:18 PM Apr 01, 2019 | pallavi |
ಭಾಲ್ಕಿ: ಪಟ್ಟಣದ ಹಲವು ಬಡಾವಣೆಗಳ ರಸ್ತೆಗಳಲ್ಲಿ ತಗ್ಗು ಗುಂಡಿಗಳು ನಿರ್ಮಾಣವಾಗಿ ಹದಗೆಟ್ಟಿದ್ದು, ಇಂತಹ ರಸ್ತೆಗಳಲ್ಲಿ ಸಾರ್ವಜನಿಕರು ಸಂಚರಿಸಲು ನಿತ್ಯ ಪ್ರಯಾಸ ಪಡಬೇಕಾಗಿದೆ.
ಪಟ್ಟಣದ ಹೃದಯ ಭಾಗ ಚನ್ನಬಸವಾಶ್ರಮದ ಹತ್ತಿರ ಹಳೆ ತಹಶೀಲ್ದಾರ್‌ ಕಚೇರಿ ಪ್ರದೇಶದ ಕೂಡು ರಸ್ತೆಯ ಮಧ್ಯಭಾಗದಲ್ಲಿ ದೊಡ್ಡ ಗುಂಡಿ ನಿರ್ಮಾಣವಾಗಿದ್ದು, ಈ ಗುಂಡಿ ಮೇಲೆ ಕಾರು, ಬೈಕ್‌ಗಳು ಹಲವಾರು ಸಲ ಬಿದ್ದು ಚಾಲಕರು ಆಸ್ಪತ್ರೆ ಸೇರಿದ ಘಟನೆಗಳು ನಡೆದಿವೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಇದರುವರೆಗೆ ಗುಂಡಿ ಮುಚ್ಚುವ ಗೋಜಿಗೆ ಹೋಗಿಲ್ಲ.
ಈ ರಸ್ತೆಯಲ್ಲಿ ಗುಂಡಿ ಸುಮಾರು 4 ವರ್ಷಗಳಿಂದ ಹಾಗೆಯೇ ಇದೆ. ಪ್ರತಿನಿತ್ಯ ಹೊಸದಾಗಿ ಬರುವ ವಾಹನ ಚಾಲಕರು ಈ ಗುಂಡಿಯಲ್ಲಿ ಬಿದ್ದು ಕೈ ಕಾಲು ಮುರಿದುಕೊಳ್ಳುತ್ತಾರೆ. ಆದರೆ ಯಾರೊಬ್ಬರೂ ಈ ಗುಂಡಿ ಮುಚ್ಚುವ ಕಡೆ ಗಮನ ಹರಿಸುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ಮಹೇಶ ವಾರದ. ಇಂತಹ ಗುಂಡಿಗಳು ಈ ಒಂದೇ ಸ್ಥಳದಲ್ಲಿ ಮಾತ್ರವಲ್ಲ ಪಟ್ಟಣದ ಹಲವಾರು ಕಡೆಗಳಲ್ಲಿ ಇವೆ. ಆದರೆ ಪುರಸಭೆ ಅಧಿಕಾರಿಗಳು ಈ ಗುಂಡಿಗಳನ್ನು ಮುಚ್ಚಿ ಸಾರ್ವಜನಿಕರಿಗೆ ಸಹಕರಿಸುವ ಕಾರ್ಯ ಮಾಡಬೇಕು ಎಂಬುದು ಜನರ ಆಗ್ರಹವಾಗಿದೆ.
ರಸ್ತೆ ಮಧ್ಯಭಾಗದಲ್ಲಿ ಯಾವುದೇ ತಗ್ಗು ಗುಂಡಿಗಳಿರಬಾರದು ಎನ್ನುವ ನಿಯಮವಿದೆ. ಅಂತಹ ಗುಂಡಿಗಳು ಕಂಡು ಬಂದರೆ ತಕ್ಷಣ ಮುಚ್ಚಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎನ್ನುವುದು ಸರ್ಕಾರದ ಮೂಲ ಉದ್ದೇಶ. ಆದರೆ ಸರ್ಕಾರದ ಅಧೀನದಲ್ಲಿ ಕಾರ್ಯಮಾಡುವ ಅಧಿಕಾರಿಗಳು ಮತ್ತು ಸಿಬ್ಬಂದಿ ಇತ್ತ ಗಮನ ಹರಿಸದೇ, ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಎಲ್ಲೆಂದರಲ್ಲಿ ತಗ್ಗು ಗುಂಡಿಗಳಿದ್ದರೂ ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ.
ಈ ಮೊದಲು ರಸ್ತೆ ಪಕ್ಕ ನೀರು ಸರಬರಾಜಿಗಾಗಿ ಪೈಪ್‌ಲೈನ್‌ ವ್ಯವಸ್ಥೆ ಮಾಡಲಾಗಿತ್ತು, ರಸ್ತೆ ಅಗಲೀಕರಣದ ನಂತರ ಪೈಪ್‌ಲೈನ್‌ನಲ್ಲಿರುವ ವಾಲ್‌ಗ‌ಳು ರಸ್ತೆಯ ನಡುವೆ ಬಂದಿವೆ. ಹೊಸದಾಗಿ ನಿರ್ಮಿಸಲಾಗುತ್ತಿರುವ ಪೈಪ್‌ಲೈನ್‌ ಜೋಡಣೆಯ ನಂತರ ಎಲ್ಲಾ ತಗ್ಗು ಗುಂಡಿಗಳನ್ನು ಮುಚ್ಚಲಾಗುವುದು ಎನ್ನುವುದು ಪುರಸಭೆ ಮುಖ್ಯಾ ಧಿಕಾರಿ ಶಿವಶರಣಯ್ನಾ ಸ್ವಾಮಿ ಅವರ ಮಾತು.
ಆದಷ್ಟು ಬೇಗ ರಸ್ತೆ ಮಧ್ಯದ ತಗ್ಗು ಗುಂಡಿಗಳನ್ನು ಮುಚ್ಚಿ, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಣಿವು ಮಾಡಿಕೊಡಬೇಕು ಎನ್ನುವುದು ಇಲ್ಲಿನ ನಾಗರಿಕರ ಒತ್ತಾಸೆಯಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next