ಬೆಂಗಳೂರು: ನಿಯಂತ್ರಣ ಕಳೆದುಕೊಂಡ ವಿದ್ಯಾರ್ಥಿಯೊಬ್ಬ ಜೀಪನ್ನು ಅಡ್ಡಾದಿಡ್ಡಿ ಚಾಲನೆ ಮಾಡಿ ಸರಣಿ ಅಪಘಾತ ಎಸಗಿದ ಪರಿಣಾಮ ಮಹಿಳೆ, ಅಪ್ರಾಪ್ತ ವಿದ್ಯಾರ್ಥಿನಿ ಸೇರಿ ನಾಲ್ವರು ಗಾಯಗೊಂಡ ಘಟನೆ ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ವ್ಯಾಪ್ತಿಯ ಅನ್ನಪೂರ್ಣೇಶ್ವರಿನಗರದ 2ನೇ ಮುಖ್ಯರಸ್ತೆಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಕೃತ್ಯ ಎಸಗಿದ ಕಾಮಾಕ್ಷಿಪಾಳ್ಯ ನಿವಾಸಿ ಅಭಿಲಾಷ್ (20) ಎಂಬಾತನನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಸ್ಥಳೀಯ ನಿವಾಸಿ, ಪದ್ಮಾ ಎಂಬವರ ಕಾಲು ಮುರಿದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಯಿಸ್ನೇಹ (11) ಎಂಬ ವಿದ್ಯಾರ್ಥಿನಿಗೂ ಗಾಯಗಳಾಗಿವೆ. ಇತರೆ ಇಬ್ಬರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.
ಅಭಿಲಾಶ್ ಹಾಗೂ ಇತರೆ ಸ್ನೇಹಿತರು ಅನ್ನಪೂರ್ಣೇಶ್ವರಿನಗರದಲ್ಲಿ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಅಪ್ರಾಪ್ತ ಯುವಕನೊಬ್ಬ ಮಹೇಂದ್ರ ಕಂಪನಿಯ ಜೀಪನ್ನು ಕ್ರಿಕೆಟ್ ಮೈದಾನಕ್ಕೆ ತಂದಿದ್ದಾನೆ. ನಂತರ ಆತನಿಂದ ಜೀಪ್‌ನ ಕೀ ಪಡೆದ ಅಭಿಲಾಷ್, ಸಮೀಪದ ರಸ್ತೆಗಳಲ್ಲಿ ಸುತ್ತಾಡುತ್ತಿದ್ದ.
ಈ ವೇಳೆ ಅನ್ನಪೂರ್ಣೇಶ್ವರಿನಗರದ 2ನೇ ಮುಖ್ಯರಸ್ತೆಯಲ್ಲಿ ಹೋಗುವಾಗ ನಿಯಂತ್ರಣ ಕಳೆದುಕೊಂಡ ಆತ, ಎದುರು ಬರುತ್ತಿದ್ದ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ರಸ್ತೆ ಬದಿ ನಿಂದಿದ್ದ ದ್ವಿಚಕ್ರ ವಾಹನಕ್ಕೆ ಗುದ್ದಿದ್ದಾನೆ. ನಂತರ ಪಾದಚಾರಿ ಮಾರ್ಗದಲ್ಲಿ ಹೋಗುತ್ತಿದ್ದ ಪದ್ಮಾ ಅವರಿಗೆ ಡಿಕ್ಕಿ ಹೊಡೆದು, ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಜೀಪ್ ನಿಂತಿದೆ.
ದ್ವಿಚಕ್ರ ವಾಹನ ನಜ್ಜುಗುಜ್ಜು: ಜೀಪು ಗುದ್ದಿದ ರಭಸಕ್ಕೆ ದ್ವಿಚಕ್ರ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಜೀಪ್‌ನ ಅಡಿಯಲ್ಲಿ ಸಿಲುಕಿಕೊಂಡಿದೆ. ಕೂಡಲೇ ಸ್ಥಳೀಯರು ಅಭಿಲಾಷ್‌ನನ್ನು ಹಿಡಿದುಕೊಂಡಿದ್ದರು. ಅದರಿಂದ ಘಟನಾ ಸ್ಥಳದಲ್ಲಿ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದರು. ನಂತರ ಅಭಿಲಾಷ್‌ನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಜೀಪ್ ಅಭಿಲಾಷ್‌ದಲ್ಲ ಎಂಬುದು ತಿಳಿದು ಬಂದಿದ್ದು, ಜೀಪ್ ಮಾಲೀಕರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಗಾಯಗೊಂಡಿರುವ ವಿದ್ಯಾರ್ಥಿನಿ ಸಾಯಿಸ್ನೇಹ ರಾಷ್ಟ್ರೀಯ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಲು ಸಿದ್ಧತೆ ನಡೆಸಿದ್ದು, ಶನಿವಾರ ತಂದೆಯೊಂದಿಗೆ ಶೂ ಹಾಗೂ ಇತರೆ ಕ್ರೀಡಾ ಪರಿಕರ ಖರೀದಿಸಲು ಹೋಗುವಾಗ ಅಪಘಾತ ನಡೆದಿದೆ. ಅದೃಷ್ಟವಶಾತ್ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ವಿದ್ಯಾರ್ಥಿನಿ ಆರೋಗ್ಯವಾಗಿದ್ದಾಳೆ. ಭಾನುವಾರ ಠಾಣೆಗೆ ಬರುವುದಾಗಿ ಆಕೆಯ ಪೋಷಕರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದರು. ಪ್ರಕರಣ ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯಲ್ಲಿ ದಾಖಲಾಗಿದೆ.