Advertisement

ನಿಯಮ ಉಲ್ಲಂಘನೆಯಿಂದ ಅಪಘಾತ ಹೆಚ್ಚಳ

04:10 PM Jun 29, 2019 | Team Udayavani |

ಚನ್ನಪಟ್ಟಣ: ಬೆಂಗಳೂರು- ಮೈಸೂರು ಹೆದ್ದಾರಿ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರ ಪಾಲಿಗೆ ಯಮಪುರಿಯ ರಹದಾರಿಯಾಗಿ ಪರಿಣಮಿಸಿದೆ. ಹೆದ್ದಾರಿಯಲ್ಲಿ ಪ್ರತಿನಿತ್ಯ ಅಪಘಾತ ಪ್ರಕರಣಗಳು ಘಟಿಸುವುದು ಸಾಮಾನ್ಯ ಸಂಗತಿ ಎಂಬಂತಾಗಿದ್ದು, ಕೆಲವರು ಗಾಯಗೊಂಡು ಆಸ್ಪತ್ರೆ ಪಾಲಾದರೆ, ಗಂಭೀರ ಗಾಯಗೊಂಡ ಅಮಾಯಕರು ಯಮನ ಪಾದ ಸೇರುತ್ತಿದ್ದಾರೆ.

Advertisement

ಹೌದು, ಹೆದ್ದಾರಿಯಲ್ಲಿ ದಿನನಿತ್ಯ ಬೈಕ್‌, ಕಾರು ಅಪಘಾತ, ಪಾದಚಾರಿಗಳಿಗೆ ಡಿಕ್ಕಿಯಂತಹ ಪ್ರಕರಣಗಳು ಸಂಭವಿಸುತ್ತಲೇ ಇದೆ. ಚಾಲಕರ ನಿರ್ಲಕ್ಷ್ಯ, ಸಂಚಾರ ನಿಯಮಗಳ ಉಲ್ಲಂಘನೆಯಿಂದಾಗಿ ಅಪಘಾತ ಪ್ರಮಾಣ ಮಿತಿ ಮೀರುತ್ತಿದೆ. ಹೆದ್ದಾರಿಯಲ್ಲಿ ಸಾಗುವ ವಾಹನಗಳ ಮಿತಿಮೀರಿದ ವೇಗ ಅಪಘಾತಗಳು ಸಂಭವಿಸಲು ಪ್ರಮುಖ ಕಾರಣವಾಗಿದೆ. ನಗರ ಹಾಗೂ ಗ್ರಾಮಾಂತರ ಪ್ರದೇಶ ವ್ಯಾಪ್ತಿಯಲ್ಲಿ ವೇಗಮಿತಿ ನಿಗದಿಗೊಳಿಸಿದ್ದರೂ ವಾಹನ ಚಾಲಕರ ಹಾಗೂ ನಿಯಂತ್ರಣ ಹೇರಬೇಕಾದವರ ಡೋಂಟ್ಕೇರ್‌ ಪ್ರವೃತ್ತಿಯಿಂದ ವೇಗಕ್ಕೆ ಮಿತಿಯೇ ಇಲ್ಲವಾಗಿದೆ.

ವೇಗ ನಿಯಂತ್ರಿಸದ ರಸ್ತೆ ಉಬ್ಬುಗಳು: ಹೆದ್ದಾರಿಯಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ ಅಲ್ಲಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಾಣ ಮಾಡಲಾಗಿದೆ. ಆದರೂ ಇವುಗಳಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಕೆಲವೆಡೆ ರಸ್ತೆ ಉಬ್ಬುಗಳು ಹೆಸರಿಗೆ ಮಾತ್ರ ಎಂಬಂತಾಗಿದ್ದು, ಭಾರೀ ವಾಹನ ಚಾಲಕರುಗಳ ಕಣ್ಣಿಗೆ ಇವು ಕಾಣಿಸುತ್ತಲೇ ಇಲ್ಲ.

ಇನ್ನು ಈ ಹಿಂದೆ ಆಯ್ದ ಸ್ಥಳಗಳಲ್ಲಿ ನಿಧಾನವಾಗಿ ಚಲಿಸಲೆಂದು ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಆದರೆ, ಅವುಗಳನ್ನು ಲೆಕ್ಕಿಸದೆ ಭಾರೀ ವಾಹನಗಳ ಚಾಲಕರು ಅವುಗಳಿಗೇ ಗುದ್ದಿಕೊಂಡು ಹೋಗಿದ್ದರಿಂದ ಬ್ಯಾರಿಕೇಡ್‌ಗಳು ಅಸ್ತಿತ್ವವನ್ನೇ ಕಳೆದುಕೊಂಡವು. ಹಾಗಾಗಿ ಆ ಸಹವಾಸಕ್ಕೆ ಮತ್ತೆ ಪೊಲೀಸರು ಹೋಗಿಲ್ಲ.

ಚಾಲಕರ ಆಟ ಪಾದಚಾರಿಗಳಿಗೆ ಪ್ರಾಣ ಸಂಕಟ: ಇನ್ನು ಹೆದ್ದಾರಿಯಲ್ಲಿ ಸಾಗುವ ಕಾರುಗಳ ಚಾಲಕರುಗಳ ಕಣ್ಣು ರಸ್ತೆಯ ಮೇಲಿಲ್ಲ ಎಂಬುದಕ್ಕೆ ಅಪಘಾತಗಳ ಸಂಖ್ಯೆಯೇ ಸಾಕ್ಷಿಯಾಗಿದೆ. ಬಹುತೇಕ ಪಾದಚಾರಿಗಳಿಗೆ ಈ ಕಾರುಗಳೇ ಯಮಪುರಿಯ ಹಾದಿ ತೋರಿಸಿದ್ದು, ಇನ್ನೂ ಕೆಲವೆಡೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೇ ಪೆಟ್ಟಾಗಿದೆ.

Advertisement

ಮಿತಿಮೀರಿದ ವೇಗದಿಂದ ಚಲಿಸುವ ಈ ಕಾರುಗಳ ಚಾಲಕರು ಸಂಚಾರ ನಿಯಮಗಳನ್ನು ಉಲ್ಲಂಘಿಸಿ, ತಮ್ಮಿಷ್ಟ ಬಂದಂತೆ ಚಾಲನೆ ಮಾಡುತ್ತಿದ್ದಾರೆ. ತಿರುವು ಪಡೆದುಕೊಳ್ಳುವ ಕಡೆಗಳಲ್ಲಿ ಹಾಗೂ ಗ್ರಾಮಾಂತರ ಪ್ರದೇಶಗಳ ವ್ಯಾಪ್ತಿಯಲ್ಲಿ ಹೆದ್ದಾರಿ ದಾಟುವ ನಾಗರಿಕರ ರೋಧನೆ ಹೇಳತೀರದಾಗಿದೆ.

ಹೆದ್ದಾರಿ ದಾಟಲು ಹರಸಾಹಸ: ಗ್ರಾಮಾಂತರ ಭಾಗದಲ್ಲಿ ಹೆದ್ದಾರಿ ದಾಟಲು ನಾಗರಿಕರು ಹರಸಾಹಸಪಡುವಂತಾಗಿದೆ. ಸಾಲುಗಟ್ಟಿ ವೇಗವಾಗಿ ಬರುವ ವಾಹನಗಳಿಂದಾಗಿ ರಸ್ತೆ ದಾಟಲು ಪ್ರಾಯಾಸಪಡುವಂತಾಗಿದೆ. ರಜಾ ದಿನಗಳಲ್ಲಂತೂ ಹೆದ್ದಾರಿಯ ಒಂದು ಬದಿಯಿಂದ ಇನ್ನೊಂದು ಬದಿಗೆ ಹೋಗಲು ಅರ್ಧ ಗಂಟೆಗೂ ಹೆಚ್ಚು ಕಾಲ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.

ಫುಟ್ಪಾತ್‌ ಇಲ್ಲ: ಹೆದ್ದಾರಿಯ ಎರಡೂ ಬದಿಯಲ್ಲಿ ಪಾದಚಾರಿ ರಸ್ತೆ ಅಥವಾ ಸರ್ವೀಸ್‌ ರಸ್ತೆ ಇಲ್ಲದಿರುವುದು ಪಾದಚಾರಿಗಳ ಅಪಘಾತಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಗ್ರಾಮಾಂತರ ಪ್ರದೇಶ ವ್ಯಾಪ್ತಿಯಲ್ಲಿ ಹೆದ್ದಾರಿಯ ಬದಿಗಳಲ್ಲಿ ಮಣ್ಣಿನ ರಸ್ತೆ ಇದೆ. ಆದರೂ ಪಟ್ಟಣ ವ್ಯಾಪ್ತಿಯಲ್ಲಿ ಇದ್ದರೂ ಅದೂ ಬಳಸಲಾಗದ ಸ್ಥಿತಿಯಲ್ಲಿದೆ. ಪಾದಚಾರಿ ರಸ್ತೆಯಲ್ಲೇ ವಾಹನಗಳ ಪಾರ್ಕಿಂಗ್‌ ಮಾಡುತ್ತಿರುವುದರಿಂದ ಪಾದಚಾರಿಗಳು ಫುಟ್ಪಾತ್‌ ಬಿಟ್ಟು ಹೆದ್ದಾರಿಯಲ್ಲಿ ಚಲಿಸುತ್ತಿದ್ದು, ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ವಾಹನ ಅವರಿಗೆ ಡಿಕ್ಕಿ ಹೊಡೆದು ಬದುಕಿಗೆ ಫುಲ್ಸ್ಟಾಪ್‌ ಹಾಕುತ್ತಿವೆ.

ವೇಗಮಿತಿ ಫಲಕ ಅಳವಡಿಸಿ: ಹೆದ್ದಾರಿಯಲ್ಲಿ ವೇಗಮಿತಿ ಫಲಕಗಳನ್ನು ಅಲ್ಲಲ್ಲಿ ಸ್ಥಾಪಿಸಿದರೆ ವಾಹನ ಚಾಲಕರಿಗೂ ಇದರ ಬಗ್ಗೆ ತಿಳಿಯುತ್ತದೆ. ಆದ್ದರಿಂದ ವೇಗ ನಿಯಂತ್ರಣವಾಗಬಹುದು ಎಂಬುದು ಹೆದ್ದಾರಿ ಬದಿಯ ಗ್ರಾಮವಾಸಿಗಳ ಅಭಿಪ್ರಾಯವಾಗಿದೆ.

ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ, ಹೆದ್ದಾರಿ ಸಾಗಿರುವ ಗ್ರಾಮೀಣ ಭಾಗದಲ್ಲಿ ಇಂಥಹ ಫಲಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕಾಗಿದೆ.

 

● ಎಂ.ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next