ಅರಂತೋಡು: ರಸ್ತೆ ಬದಿಯ ಮೋರಿಗೆ ಬೈಕ್ ಢಿಕ್ಕಿ ಹೊಡೆದು ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಡಗು ಸಂಪಾಜೆ ಅರಣ್ಯ ಇಲಾಖಾ ಕಛೇರಿ ಬಳಿ ರವಿವಾರ ರಾತ್ರಿ ಸಂಭವಿಸಿದೆ.
ಮೈಸೂರಿನಿಂದ ಧರ್ಮಸ್ಥಳಕ್ಕೆ ಬುಲೆಟ್ ಬೈಕ್‌ನಲ್ಲಿ ತೆರಳುತ್ತಿದ್ದ ಮೈಸೂರು ಮೂಲದ ಯುವಕರಾದ ಪವನ್ ಮತ್ತು ಮನೋಜ್ ರವಿವಾರ ರಾತ್ರಿ ವೇಳೆ ಕೊಯಾನಾಡಿನ ಫಾರೆಸ್ಟ್ ಐ. ಬಿ. ಬಳಿ ಮುಖ್ಯರಸ್ತೆ ಬದಿಯಲ್ಲಿದ್ದ ಮೋರಿಗೆ ಢಿಕ್ಕಿ ಹೊಡೆದಿದ್ದು, ಇಬ್ಬರೂ ಪಕ್ಕದ ಚರಂಡಿಗೆ ಎಸೆಯಲ್ಪಟ್ಟು ಮೃತಪಟ್ಟಿದ್ದಾರೆ. ರಾತ್ರಿ ಸುಮಾರು 9ರಿಂದ 10 ಗಂಟೆಯ ನಡುವೆ ಅಪಘಾತ ಸಂಭವಿಸಿರುವ ಸಾಧ್ಯತೆಯಿದ್ದು, ಸೋಮವಾರ ಬೆಳಗ್ಗೆ ಸ್ಥಳೀಯರ ಗಮನಕ್ಕೆ ಬಂದಿದೆ.
ಯುವಕರಿಬ್ಬರು ಚರಂಡಿಯಲ್ಲಿ ಬಿದ್ದಿರುವುದನ್ನು ಸ್ಥಳೀಯ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಬೆಳಗ್ಗೆ ಎಸ್.ಪಿ.ಹನೀಫ್ ಕೊಯನಾಡು ಅವರಿಗೆ ವಿಷಯ ತಿಳಿಸಿದ್ದರು. ಕೂಡಲೇ ಹನೀಫ್ ಸಂಪಾಜೆ ಪೊಲೀಸರಿಗೆ ವಿಷಯ ತಿಳಿಸಿದ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮಡಿಕೇರಿ ಎಸ್‌ಐ ಹಾಗೂ ಕೊಡಗು ಜಿಲ್ಲಾ ಡಿವೈಎಸ್‌ಪಿ ಅವರಿಗೆ ವಿಷಯ ತಿಳಿಸಿದರು.
ಮೈಸೂರು ಮೂಲದ ಮನೋಜ್ ಮತ್ತು ಪವನ್ ತಮ್ಮ ಬಾಲ್ಯದಿಂದಲೇ ಸ್ನೇಹಿತರಾಗಿದ್ದು, ಯಾವಾಗಲೂ ಜತೆಯಾಗಿಯೇ ತೆರಳುತ್ತಿದ್ದರು. ಪೊಲೀಸರು ಮನೆಯವರಿಗೆ ವಿಷಯ ತಿಳಿಸಿದ ಮೇರೆಗೆ ಮೈಸೂರಿನಿಂದ ಮೃತರ ಮನೆಯವರು ಮತ್ತು ಸಂಬಂಧಿಕರು ಸಂಪಾಜೆಗೆ ಆಗಮಿಸಿ ಸೋಮವಾರ ಮಧ್ಯಾಹ್ನ ಎರಡು ಮೃತದೇಹಗಳನ್ನು ಪ್ರತ್ಯೇಕ ಪ್ರತ್ಯೇಕ ಆ್ಯಂಬುಲೆನ್ಸ್ ಮೂಲಕ ಮಡಿಕೇರಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದು, ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೈಸೂರಿಗೆ ಕೊಂಡಯ್ಯಲಾಗಿದೆ.
ಅಪಘಾತ ನಡೆದ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಇಬ್ಬರ ಹೆಲ್ಮೆಟ್‌ಗಳು ಚರಂಡಿಯಲ್ಲಿ ಬಿದ್ದಿದ್ದವು. ಇಬ್ಬರ ತಲೆ ಹಾಗೂ ಮುಖಕ್ಕೆ ಗಂಭೀರ ಗಾಯವಾಗಿತ್ತು. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.