Advertisement

ಹಬ್ಬದ ಸಂಭ್ರಮಕ್ಕೆ ಸೂತಕದ ಛಾಯೆ: ಕೆರೆಗೆ ಕಾರು ಬಿದ್ದು ನಾಲ್ವರು ದುರ್ಮರಣ

09:36 AM Sep 03, 2019 | Mithun PG |

ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಬಿದ್ದು ನಾಲ್ವರು ಸಾವಿಗೀಡಾದ ದುರ್ಘಟನೆ ದಕ್ಷಿಣ ಕನ್ನಡ ಜಿಲ್ಲೆಯ  ಪುತ್ತೂರಿನ ಕಾವು ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.

Advertisement

ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಕೌಡಿಚ್ಚಾರ್ ಸಮೀಪದ ಮಡ್ಯಂಗಲ ಎಂಬಲ್ಲಿ ರಸ್ತೆ ಬದಿಯಲ್ಲಿರುವ 20 ಅಡಿ ಆಳದ  ಕೆರೆಯೊಂದಕ್ಕೆ ಮಾರುತಿ ಆಲ್ಟೋ ಕಾರು(ಕೆ.ಎ.05 ಎಮ್‌ಎಫ್ 9794) ಬಿದ್ದು ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

ಘಟನೆಯಲ್ಲಿ ದಂಪತಿ ಮತ್ತು ಇಬ್ಬರು ಮಕ್ಕಳು  ಜಲಸಮಾಧಿಯಾಗಿದ್ದಾರೆ. ಮೃತರನ್ನು ಅಶೋಕ್, ಸುಮಲತಾ, ಯಶಸ್, ವರ್ಷಾ ಕುಮಾರಿ ಎಂದು ಗುರುತಿಸಲಾಗಿದೆ.

ಮಡಿಕೇರಿ ಸುಂಟಿಗೊಪ್ಪ ನಿವಾಸಿಗಳೆನ್ನಲಾದ ನಾಲ್ಕು ಮಂದಿ ಕಾರಿನೊಳಗಿದ್ದು, ಕಾರು ಕೆರೆಯಲ್ಲಿ ಮುಳುಗಿದ ಪರಿಣಾಮ ಕಾರಿನಿಂದ ಹೊರಬರಲಾರದೆ ಅವರೆಲ್ಲಾ ಅಸುನೀಗಿದ್ದಾರೆ. ಘಟನಾ ಸ್ಥಳಕ್ಕೆ ಸಂಪ್ಯ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ತೆರಳಿ ಕಾರನ್ನು ಮೇಲಕ್ಕೆತ್ತಿ ಮೃತ ದೇಹವನ್ನು ಹೊರ ತೆಗೆದಿದ್ದಾರೆ. ಮೃತ ನಾಲ್ವರ ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಗಾರ ಕೊಠಡಿಯಲ್ಲಿ ಇರಿಸಲಾಗಿದೆ. ಪುತ್ತೂರು ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಎಚ್ಚರಿಸಿತ್ತು ಉದಯವಾಣಿ
ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿರುವ ಮಾಣಿ – ಮೈಸೂರು ಹೆದ್ದಾರಿಯ ಕುಂಬ್ರ – ಕೌಡಿಚ್ಚಾರ್ ಮಧ್ಯೆ ಇರುವ ಎರಡೂವರೆ ಕಿಲೋ ಮೀಟರ್ ಅಂತರದಲ್ಲಿ ಸಂಚಾರಕ್ಕೆ ಅಪಾಯಕಾರಿಯಾಗಿರುವ ರಸ್ತೆ ಕುಸಿತವನ್ನು ಸರಿಪಡಿಸಲು ಜನಪ್ರತಿನಿಧಿಗಳು ತತ್ ಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಪತ್ರಿಕೆ ತನ್ನ ಲೇಖನದಲ್ಲಿ ಆಗ್ರಹಿಸಿತ್ತು. ಮಾತ್ರವಲ್ಲದೇ ಈ ರಸ್ತೆಗೆ ಹೊಂದಿಕೊಂಡಂತೆ ಅಪಾಯಕಾರಿ ತೆರೆದ ಬಾವಿ ಇದ್ದು ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಲಿದೆ ಎಂದು ಪತ್ರಿಕೆ ಎಚ್ಚರಿಸಿತ್ತು.

Advertisement

ಆದರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸದೇ ಇದ್ದ ಕಾರಣದಿಂದಲೇ ಇಂದು ನಾಲ್ಕು ಅಮಾಯಕ ಜೀವಗಳು ಬಲಿಯಾಗಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next