ಸಕಲೇಶಪುರ: ತಾಲೂಕಿನ ಕೊಲ್ಲಹಳ್ಳಿ ನಂದಿ ದೇವಸ್ಥಾನ ತಿರುವಿನ ಸಮೀಪ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಓಮಿನಿ ಢಿಕ್ಕಿಯಾಗಿ ದಂಪತಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ(ಜೂ.17) ಸಂಜೆ ನಡೆದಿದೆ.
ತಾಲೂಕಿನ ಬ್ಯಾಕರವಳ್ಳಿ ಸಮೀಪದ ಕುಣಿಗಲ್ ಗ್ರಾಮದ ಚಂದ್ರಶೇಖರ್ ( 55) ಹಾಗೂ ಅವರ ಪತ್ನಿ ಶಾರದಾ (52) ಮೃತಪಟ್ಟ ದುರ್ದೈವಿಗಳು.
ತಾಲೂಕಿನ ಬಾಳ್ಳುಪೇಟೆ ಕಾಫಿ ತೋಟವೊಂದರಲ್ಲಿ ರೈಟರ್ ಆಗಿದ್ದ ಚಂದ್ರಶೇಖರ್ ಹಾಸನದ ಕಂದಲಿ ಗ್ರಾಮದಲ್ಲಿರುವ ಮಗಳ ಮನೆಯಲ್ಲಿ ಪೂಜಾ ಕಾರ್ಯಕ್ರಮ ಮುಗಿಸಿಕೊಂಡು ತಮ್ಮ ಪತ್ನಿಯ ಜತೆ ಓಮಿನಿಯಲ್ಲಿ ಸಕಲೇಶಪುರ ಕಡೆಗೆ ಬರುತ್ತಿರುವ ವೇಳೆ ಸಕಲೇಶಪುರ ಕಡೆಯಿಂದ ಹಾಸನದ ಕಡೆಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಡುವೆ ಢಿಕ್ಕಿಯಾಗಿದೆ. ಚಂದ್ರಶೇಖರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಅವರ ಪತ್ನಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಕೆ.ಎಸ್ ಈಶ್ವರಪ್ಪ ಸಂಬಂಧಿ ಮನೆಯಲ್ಲಿ ವಿದೇಶಿ ಡಾಲರ್, ಲಕ್ಷಾಂತರ ರೂ. ನಗ-ನಗದು ಕಳವು
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿರುವುದು ವಾಹನ ಸವಾರರಲ್ಲಿ ಆತಂಕ ಹುಟ್ಟುಹಾಕಿದೆ. ರಾಷ್ಟ್ರೀಯ ಹೆದ್ದಾರಿ 75 ಚತುಷ್ಪಥ ರಸ್ತೆ ಕಾಮಗಾರಿ ವಿಳಂಬವೇ ಈ ರೀತಿಯ ಘಟನೆಗಳಿಗೆ ಕಾರಣ ಎಂದು ತಾಲೂಕಿನ ನಾಗರಿಕರು ಆರೋಪಿಸಿದ್ದಾರೆ. ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.