ತುಮಕೂರು: ರಸ್ತೆ ಬದಿ ನಿಂತಿದ್ದ ಲಾರಿಗೆ ಅತಿ ವೇಗವಾಗಿ ಬಂದ ಕಾರು ಅಪ್ಪಳಿಸಿದ್ದರಿಂದ ಮೂವರು ಮೃತಪಟ್ಟು, ಮಗುವೊಂದು ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರು ತಾಲ್ಲೂಕಿನ ಕೋರಾ ಪೊಲೀಸ್ ಠಾಣೆ ಸರಹದ್ದಿನ ನಗರದ ಹೊರವಲಯದ ಕಟ್ಟಿಗೇನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಪೂನಾ ಕಡೆ ತೆರಳಲು ಲಾರಿಯೊಂದು ನಿಂತಿತ್ತು. ಬೆಂಗಳೂರು ಕಡೆಯಿಂದ ವೇಗವಾಗಿ ಬಂದಿರುವ ಕಾರು ನಿಂತಿರುವ ಲಾರಿಯ ಹಿಂಭಾಗಕ್ಕೆ ವೇಗವಾಗಿ ಢಿಕ್ಕಿ ಹೊಡೆದಿದ್ದರಿಂದ ಕಾರಿನಲ್ಲಿದ್ದವರ ಪೈಕಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದು, ಮತ್ತೋರ್ವ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಗಾಯಗೊಂಡಿರುವ ಮಗುವಿನ ಸ್ಥಿತಿ ಚಿಂತನಾಜನಕವಾಗಿದ್ದು, ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಈ ಭೀಕರ ಅಪಘಾತದಲ್ಲಿ ಮೃತಪಟ್ಟಿರುವವರನ್ನು ಬೆಂಗಳೂರಿನ ಅನ್ನಪೂರ್ಣ (55), ಅದಿತಿ (32) ಹಾಗೂ ಆರತಿ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಮಣಿಪಾಲದಲ್ಲಿ ಸರಣಿ ಅಪಘಾತ: ಕಾರು, ಬೈಕ್ ಸೇರಿ ಮೂರು ವಾಹನಗಳಿಗೆ ಹಾನಿ
ಬೆಂಗಳೂರು ಕಡೆಯಿಂದ ಸಿರಾ ಕಡೆಗೆ ತೆರಳುತ್ತಿದ್ದ ಕಾರು ಕಟ್ಟಿಗೇನಹಳ್ಳಿ ಬಳಿ ರಸ್ತೆ ಬದಿಯಲ್ಲಿ ಪೂನಾ ಕಡೆಗೆ ತೆರಳುತ್ತಿದ್ದ ಲಾರಿಯೊಂದು ನಿಂತಿತ್ತು. ಈ ಲಾರಿಯನ್ನು ಗಮನಿಸದ ಕಾರಿನ ಚಾಲಕ ಲಾರಿಯ ಹಿಂಭಾಗಕ್ಕೆ ಕಾರನ್ನು ಅಪ್ಪಳಿಸಿದ್ದರಿಂದ ಕಾರಿನ ಚಾಲಕ ಹಾಗೂ ಮುಂಭಾದಲ್ಲಿ ಕುಳಿತಿದ್ದವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಲಾರಿಗೆ ಢಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಕಾರಿನಲ್ಲಿದ್ದವರ ಪೈಕಿ ಇನ್ನು ಮೂವರು ಮಕ್ಕಳಿಗೆ ಯಾವುದೇ ರೀತಿಯ ತೊಂದರೆಗಳಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಘಟನೆಯ ಸುದ್ದಿ ತಿಳಿದ ಕೂಡಲೇ ಕೋರಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.