Advertisement

ಕಟಪಾಡಿ: ಅಪಾಯಕಾರಿ ಅಚ್ಚಡ ಜಂಕ್ಷನ್‌ ತುರ್ತಾಗಿ ಬ್ಯಾರಿಕೇಡ್‌ ಅಳವಡಿಕೆ

01:00 AM Mar 19, 2019 | Harsha Rao |

ಕಟಪಾಡಿ: ಕಟಪಾಡಿ- ಶಿರ್ವ ಮೂಲಕ ಹಾದು ಹೋಗುವ ರಾಜ್ಯ ಹೆದ್ದಾರಿಯ ಕಟಪಾಡಿಯ ಅಚ್ಚಡ ಕ್ರಾಸ್‌ ಎಂಬಲ್ಲಿನ ಜಂಕ್ಷನ್‌ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುತ್ತಿರುವುದನ್ನು ಮನಗಂಡ ಉಡುಪಿ ಜಿಲ್ಲಾ ಪೊಲೀಸ್‌ ಇಲಾಖೆ ದಾನಿಗಳ ಸಹಕಾರದಿಂದ ಆಯಕಟ್ಟಿನ ಸ್ಥಳದಲ್ಲಿ ನಾಲ್ಕು ಬ್ಯಾರಿಕೇಡ್‌ಗಳನ್ನು ಸೋಮವಾರ ಮಧ್ಯಾಹ್ನವೇ ಅಳವಡಿಸಿದ್ದು, ಸಾರ್ವಜನಿಕವಾಗಿ ಶ್ಲಾಘನೆಗೆ ಪಾತ್ರವಾಗಿದೆ.

Advertisement

ಈ ಜಂಕ್ಷನ್‌ ಭಾಗವು ಅಪಘಾತದ ತಾಣವಾಗಿ ಪರಿವರ್ತಿತವಾಗಿದ್ದು, ಸಮರ್ಪಕ ಸೂಚನೆ ಇಲ್ಲದೆ ಅಚ್ಚಡಕ್ಕೆ ವಾಹನ ತಿರುಗಿಸುವ ಭರಾಟೆ ಮತ್ತು ಅಚ್ಚಡದಿಂದ ರಸ್ತೆಯಿಂದ ಬರುವ ವಾಹನಗಳು ನೇರವಾಗಿ ರಾಜ್ಯ ಹೆದ್ದಾರಿಗೆ  ಎಂಟ್ರಿ ಕೊಡುವುದರಿಂದ ಚಾಲಕರ ಕನ್‌ಫ್ಯೂಶನ್‌ ಮೂಲಕ ಅಪಘಾತ ತಾಣವಾಗಿ ಮಾರ್ಪಾಟಾಗಿತ್ತು.
ಇದೀಗ ದಾನಿ ಜ್ಯೇಷ್ಠಾ ಡೆವಲಪರ್ಸ್‌ನ ಯೋಗೀಶ್‌ ಕುಮಾರ್‌ ಮೂಲಕವಾಗಿ 4 ಬ್ಯಾರಿಕೇಡನ್ನು ರಾಜ್ಯ ಹೆದ್ದಾರಿಯಲ್ಲಿ ಅಳವಡಿಸಿ ವಾಹನಗಳ ವೇಗವನ್ನು ನಿಯಂತ್ರಿಸುವ ಮೂಲಕ ಅಪಘಾತಕ್ಕೆ ಕಡಿವಾಣ ಹಾಕಲು ಮುಂದಾಗಲಾಗಿದೆ.

ಮುಂದಕ್ಕೆ ಮೂಡಬೆಟ್ಟು -ಅಚ್ಚಡ-ಸರಕಾರಿ ಗುಡ್ಡೆ ರಸ್ತೆಯು ಸಂಧಿಸುವ ಸ್ಥಳದಲ್ಲಿ ಅಚ್ಚಡ ಕ್ರಾಸ್‌ ರಸ್ತೆಗೆ ಸೂಕ್ತವಾದ ಹಂಪ್ಸ್‌(ವೇಗತಡೆ) ನಿರ್ಮಿಸುವ ಮೂಲಕ ಸಂಭಾವ್ಯ ಅಪಘಾತವನ್ನು ಮತ್ತಷ್ಟು ಹತೋಟಿಗೆ ತರಬಹುದು ಎಂದು ಸ್ಥಳೀಯರು ಮಾಹಿತಿ ನೀಡುತ್ತಿದ್ದಾರೆ.

ಈಗಾಗಲೇ ಹಲವಾರು ಅಪಘಾತಗಳು ಸಂಭವಿಸಿದ್ದು, ಮಾನವೀಯತೆ ನೆಲೆಯಲ್ಲಿ ಪೊಲೀಸರು ಸ್ವಲ್ಪ ಹೆಚ್ಚಿನ ನಿಗಾ ವಹಿಸಿ  ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದ್ದು, ಪೊಲೀಸರ ಈ ಜನಪರ ಕಾಳಜಿಗೆ ಜನ ಮೆಚ್ಚುಗೆ ಸೂಚಿಸಿರುತ್ತಾರೆ.

ಈ ಸಂದರ್ಭ ಕಟಪಾಡಿ ಪೊಲೀಸ್‌ ಹೊರಠಾಣೆಯ  ಸಿಬಂದಿಗಳಾದ ರುಕ್ಮಯ, ಮೋಹನ್‌ಚಂದ್ರ, ಜ್ಯೇಷ್ಠಾ ಡೆವಲಪರ್ಸ್‌ನ ಯೋಗೀಶ್‌ ಕುಮಾರ್‌, ಸ್ಥಳೀಯರಾದ  ಶ್ರೀಕರ್‌ ಅಂಚನ್‌, ಮಹೇಶ್‌ ಅಂಚನ್‌, ನಾಗರಾಜ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Advertisement

ಅಪಘಾತ ನಿಯಂತ್ರಣಕ್ಕೆ ತುರ್ತು ಕ್ರಮ
ಅಪಘಾತದ ನಿಯಂತ್ರಣಕ್ಕಾಗಿ  ಸದ್ಯದ ತುರ್ತು ಕ್ರಮವಾಗಿ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಹಂಪ್ಸ್‌ ರಚಿಸುವ ಬಗ್ಗೆ  ಮುಂದಕ್ಕೆ ಆಗುವಂತೆ ಗಮನ ಹರಿಸಲಾಗುತ್ತದೆ.
 -ನವೀನ್‌ ಎಸ್‌ ನಾಯಕ್‌, ಪಿಎಸ್‌ಐ, ಕಾಪು

ಫೈಬರ್‌  ಹಂಪ್ಸ್‌ ಅಳವಡಿಕೆ
ಅಚ್ಚಡ ಜಂಕ್ಷನ್‌ನಲ್ಲಿ ನಿರಂತರ ಅಪಘಾತ ಘಟಿಸುತ್ತಿತ್ತು. ಈ ಬಗ್ಗೆ ಜನರ ಸುರಕ್ಷತೆಗಾಗಿ ಸುಮಾರು 40 ಸಾವಿರ ರೂ. ಮೌಲ್ಯದಲ್ಲಿ 4 ಬ್ಯಾರಿಕೇಡ್‌ಗಳನ್ನು ಇಲಾಖೆಯ ಮೂಲಕ ಅಳವಡಿಸಲು ಸಹಕಾರ ನೀಡಿದ್ದು, ಅಚ್ಚಡ ರಸ್ತೆಯ ಭಾಗದಲ್ಲಿ ಫೈಬರ್‌ ಹಂಪ್ಸ್‌ ಅಳವಡಿಕೆಗೆ ಪ್ರಯತ್ನಿಸಲಾಗುತ್ತದೆ.
-ಯೋಗೀಶ್‌ ಕುಮಾರ,  ಜ್ಯೇಷ್ಠಾ ಡೆವಲಪರ್ಸ್‌, ಕಟಪಾಡಿ

Advertisement

Udayavani is now on Telegram. Click here to join our channel and stay updated with the latest news.

Next