Advertisement

ಅಚ್ಚಡ –ಚೊಕ್ಕಾಡಿ : ಹಲವು ವರ್ಷಗಳ ಸಮಸ್ಯೆಗೆ ಮುಕ್ತಿ

10:09 AM Apr 27, 2019 | Team Udayavani |

••ವಿಜಯ ಆಚಾರ್ಯ, ಉಚ್ಚಿಲ

Advertisement

ಕಟಪಾಡಿ,ಎ.26: ಅಚ್ಚಡ – ಚೊಕ್ಕಾಡಿ ಭಾಗದಲ್ಲಿ ನೀರು ಪೂರೈಕೆಗೆ ಇದ್ದ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿ ಇದೀಗ ಕುಡಿಯುವ ನೀರು ಮನೆಮನೆಗೆ ಸರಬರಾಜು ಆಗುತ್ತಿದೆ. ಇದರಿಂದ 29 ಕುಟುಂಬಗಳಿಗೆ ಪ್ರಯೋಜನವಾಗಿದೆ.

ಕಟಪಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಚೊಕ್ಕಾಡಿ ಭಾಗದ ಸುಮಾರು 19 ಮನೆಗಳಿಗೆ ಮತ್ತು ಅಚ್ಚಡ ಕ್ರಾಸ್‌ ಬಳಿಯ ಸುಮಾರು 10 ಮನೆಗಳಿಗೆ ಪೈಪು ಲೈನ್‌ ಮೂಲಕ ನೀರಿನ ಟ್ಯಾಂಕ್‌ ಅಳವಡಿಸಿ ಕುಡಿಯುವ ನೀರನ್ನು ಕೊಡಲಾಗುತ್ತಿದೆ.

ಬಾಕಿಯಾದ ಯೋಜನೆ:

ಚೊಕ್ಕಾಡಿ ಬಳಿ ಕಳೆದ 5 ವರ್ಷಗಳ ಹಿಂದೆಯೇ ಕುಡಿಯುವ ನೀರಿನ ಪೂರೈಕೆಗಾಗಿ ಅಂದಿನ ಜಿಲ್ಲಾ ಪಂಚಾಯತ್‌ ಆಡಳಿತಾವಧಿಯಲ್ಲಿ ಗೋಕುಲ್ ಕಂಪೌಂಡು ಬಳಿಯಲ್ಲಿ ಬೋರ್‌ವೆಲ್ ತೋಡಲಾಗಿತ್ತು. ಬೋರ್‌ವೆಲ್ ನೀರನ್ನು ಇತರೆಡೆಗಳಿಗೆ ಸರಬರಾಜು ಮಾಡಲು ಬಳಸುತ್ತಾರೆ ಎಂಬ ಬಗ್ಗೆ ಆ ಭಾಗದ ಸಾರ್ವಜನಿಕರಿಂದ ಆಕ್ಷೇಪಣೆ ವ್ಯಕ್ತವಾಗಿದ್ದು, ಇದರಿಂದ ಕುಡಿಯುವ ನೀರಿನ ಯೋಜನೆಯು ನನೆಗುದಿಗೆ ಬಿದ್ದಿತ್ತು. ಪ್ರಸ್ತುತ ಈ ಭಾಗದ ಜನರ ಕುಡಿಯುವ ನೀರಿನ ಬೇಡಿಕೆಯು ಹೆಚ್ಚಾಗಿದ್ದು, ಆದ್ದರಿಂದ ಜನರನ್ನು ವಿಶ್ವಾಸಕ್ಕೆ ಪಡೆದು ಸಮಸ್ಯೆ ಪರಿಹಾರಕ್ಕೆ ಸ್ಥಳೀಯಾಡಳಿತ ಮುಂದಾಗಿದೆ.

Advertisement

ಅನಂತರದಲ್ಲಿ ಗ್ರಾಮ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎನ್‌ಆರ್‌ಡಿ ಡಬ್ಲ್ಯೂಪಿ ಟಾಸ್ಕ್ ಫೋರ್ ಅಡಿ 2 ಲಕ್ಷ ರೂ. ಅನುದಾನ ಬಳಸಿಕೊಂಡು ಕೊಳವೆಬಾವಿ ಪಂಪು ಮತ್ತು ವಿದ್ಯುದೀಕರಣ ಮಾಡಿ ಪೈಪ್‌ ಲೈನ್‌ ಕಾಮಗಾರಿ ಮೂಲಕ ಚೊಕ್ಕಾಡಿ ಭಾಗದ ಜನತೆಗೆ ನೀರು ಪೂರೈಸಲಾಗಿದೆ. ಜತೆಗೆ ಕಟಪಾಡಿ ಗ್ರಾಮ ಪಂಚಾಯತ್‌ಮೂಲಕ 14ನೇ ಹಣಕಾಸು ಯೋಜನೆಯಡಿ 1 ಲಕ್ಷ ರೂ. ಅನುದಾನವನ್ನು ಬಳಸಿ ಪೈಪ್‌ಲೈನ್‌ ಮತ್ತು ನೀರಿನ ಟ್ಯಾಂಕ್‌ಗಳನ್ನು ಅಳವಡಿಸಿ ಸುಮಾರು 29 ಮನೆಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.

 

ಸಾರ್ವಜನಿಕ ಆಕ್ಷೇಪಣೆ ಇದ್ದುದರಿಂದ ಈ ಭಾಗದ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಸ್ವಲ್ಪ ಕಷ್ಟವಾಗಿತ್ತು. ಇದೀಗ ಸಮಸ್ಯೆ ಬಗೆಹರಿಸಲಾಗಿದೆ. ಪಂಚಾಯತ್‌ 14ನೇ ಹಣಕಾಸು ಮೂಲಕ ಒಂದು ಲಕ್ಷ ರೂ. ಅನುದಾನ ಬಳಸಿ ಪೈಪ್‌ಲೈನ್‌ ವಿಸ್ತರಣೆ ಕಾಮಗಾರಿ ಪೂರೈಸಿ, ಟ್ಯಾಂಕ್‌ಗಳನ್ನು ಅಳವಡಿಸಿ ನೀರು ಸರಬರಾಜು ಮಾಡಲಾಗುತ್ತಿದೆ.
– ಇನಾಯತುಲ್ಲಾ ಬೇಗ್‌,

ಪಿ.ಡಿ.ಒ., ಕಟಪಾಡಿ ಗ್ರಾಮ ಪಂಚಾಯತ್‌
ಏಣಗುಡ್ಡೆಯ ಗೋಕುಲ ಕಂಪೌಂಡ್‌ ಮತ್ತು ಅಚ್ಚಡ ಕ್ರಾಸ್‌ ನಿವಾಸಿಗಳು ನೀರಿಗಾಗಿ ಬಹಳಷ್ಟು ಕಷ್ಟ ಪಡಬೇಕಿತ್ತು. ಅದಕ್ಕಾಗಿ ಸ್ಥಳೀಯರ ಮನವೊಲಿಸಿ ಇದೀಗ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಮಾಡಲಾಗಿದೆ. ಜನರ ಸಹಕಾರಕ್ಕೆ ಋಣಿಯಾಗಿದ್ದೇನೆ.

ರಾಜೇಶ್‌ ಪೂಜಾರಿ,ಗ್ರಾ.ಪಂ. ಸದಸ್ಯ, ಕಟಪಾಡಿ
Advertisement

Udayavani is now on Telegram. Click here to join our channel and stay updated with the latest news.

Next