ಚೆನ್ನೈ: ಪ್ರಧಾನಿ ನರೇಂದ್ರ ಮೋದಿ, ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭೇಟಿಗಾಗಿ ಸಿದ್ಧಗೊಳ್ಳುತ್ತಿರುವ ಚೆನ್ನೈ ಬಳಿಯಲ್ಲಿನ ಮಮಲ್ಲಾಪುರಂ ಪಟ್ಟಣಕ್ಕೆ ಅ.13ರವರೆಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಈ ಮಹತ್ವದ ಭೇಟಿ ಅ. 12 ಹಾಗೂ 13ರಂದು ನಡೆಯಲಿದೆ. ಈಗಾಗಲೇ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿರುವ ಮಮಲ್ಲಾಪುರಂ ತೀರಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಸದ್ಯದಲ್ಲೇ, ಮಮಲ್ಲಾಪುರ ಪಟ್ಟಣ ಪ್ರವೇಶಕ್ಕೂ ಸಾರ್ವಜನಿಕರ ಪ್ರವೇಶವನ್ನು ಭದ್ರತೆ ಹಿನ್ನೆಲೆಯಲ್ಲಿ ನಿರಾಕರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ, ಎರಡೂ ದೇಶಗಳ ನಾಯಕರ ಸಮ್ಮೇಳನ ನಡೆಯಲಿರುವ ಜಾಗಕ್ಕೆ ಹತ್ತಿರದಲ್ಲಿರುವ ಹೊಟೇಲುಗಳಲ್ಲಿ ತಂಗಿರುವವರು ಬೇರೆಡೆ ಸ್ಥಳಾಂತರ ಗೊಳ್ಳಬೇಕೆಂದು ಪೊಲೀಸರು ಸೂಚನೆ ನೀಡಿದ್ದಾರೆ. ಇದೇ ತೀರದಲ್ಲಿ ಭಾರತೀಯ ಪ್ರಾಚ್ಯವಸ್ತು ಸಂಗ್ರಹಾಲ ಯದ ಉಸ್ತುವಾರಿಯಲ್ಲಿರುವ ಬೆಣ್ಣೆ ಮುದ್ದೆ ಕೃಷ್ಣ, ಕಲ್ಲು ಕೆತ್ತನೆಯ ಗಣಪ ಹಾಗೂ ಇನ್ನಿತರ ದೇವಾಲಯಗಳು, ಶಿಲ್ಪಕಲೆಗಳ ಚಿತ್ತಾರಗಳು ಇವೆ.