Advertisement

29ಕ್ಕೆ ಸಿಎಫ್ಟಿಆರ್‌ಐಗೆ ಪ್ರವೇಶ

11:36 AM Oct 26, 2018 | Team Udayavani |

ಮೈಸೂರು: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದಲ್ಲಿ ನಡೆದಿರುವ ಸಂಶೋಧನೆಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಅ.29 ಮತ್ತು 30ರಂದು ಸಿಎಫ್ಟಿಆರ್‌ಐ ಮುಕ್ತ ದಿನ ಆಚರಿಸುತ್ತಿದ್ದು, ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್‌.ಎಂ.ಎಸ್‌. ರಾಘವರಾವ್‌ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.29ರಂದು ಬೆಳಗ್ಗೆ 10.30ಕ್ಕೆ ಸಿಎಫ್ಟಿಆರ್‌ಐ ಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಿದ್ದು, ಸಂಸದ ಪ್ರತಾಪ್‌ ಸಿಂಹ ಮುಕ್ತ ದಿನ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಡಿಆರ್‌ಡಿಒ ಮತ್ತು ಡಿಎಫ್ಆರ್‌ಎಲ್‌ ಸಂಸ್ಥೆಯ ನಿರ್ದೇಶಕರಾದ ಡಾ. ಅನಿಲ್‌ ಡಿ.ಸೆಮಾಲ್‌ ಗೌರವ ಅತಿಥಿಗಳಾಗಿ ಭಾಗವಹಿಸುವರು.

ಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಉತ್ಕೃಷ್ಟ ಸೇವೆಸಲ್ಲಿಸಿದ ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಗುವುದು. ಸಂಸ್ಥೆಯ ಸೇವೆಯಿಂದ ಕಳೆದ ವರ್ಷ ನಿವೃತ್ತರಾದವರು ಹಾಗೂ ಸಂಸ್ಥೆಯಲ್ಲಿ 25ವರ್ಷ ಸೇವೆ ಸಲ್ಲಿಸಿದವರನ್ನು ಗೌರವಿಸಲಾಗುವುದು. ಇದೇ ಸಂದರ್ಭದಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸಂಸ್ಥೆಯ ಸಿಬ್ಬಂದಿ ಮಕ್ಕಳಿಗೆ ಬಹುಮಾನ ನೀಡಲಾಗುವುದು.

ಮುಕ್ತ ಅವಕಾಶ: ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಬಳಿಕ ಮಧ್ಯಾಹ್ನ 2ರಿಂದ ಸಂಜೆ 6.30ರವರೆಗೆ, ಅ.30ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 1ಗಂಟೆವರೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, 2ರಿಂದ ಸಂಜೆ6.30ರವರೆಗೆ ಸಾರ್ವಜನಿಕರಿಗೆ ಪ್ರವೇಶ ಅವಕಾಶ ಕಲ್ಪಿಸಲಾಗಿದೆ ಎಂದರು. 

ವಾಹನ ನಿಲುಗಡೆಯ ಅನುಕೂಲದ ದೃಷ್ಟಿಯಿಂದ ಮುಕ್ತ ದಿನಾಚರಣೆಯಂದು ಕೆಆರ್‌ಎಸ್‌ ರಸ್ತೆಯ ಚೆಲುವಾಂಬ ಪಾರ್ಕ್‌ನ ಉತ್ತರದ್ವಾರದಿಂದ ಮಾತ್ರ ಸಾರ್ವಜನಿಕರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗುವುದು. ಅಂದು ಸಂಸ್ಥೆಯ ವೀಕ್ಷಣೆಗೆ ಬರುವವರಿಗಾಗಿ ಉತ್ತರ ದ್ವಾರದ ಬಳಿ ಇರುವ ಪುಟ್ಬಾಲ್‌ ಕ್ರೀಡಾಂಣದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು. 

Advertisement

ಸ್ವಯಂ ಸೇವಕರಿಂದ ಮಾರ್ಗದರ್ಶನ: ಸುಮಾರು 100 ಜನ ಸ್ವಯಂ ಸೇವಕರು ಸಾರ್ವಜನಿಕರಿಗೆ ಮಾರ್ಗದರ್ಶನ ಮಾಡಲಿದ್ದಾರೆ. ಸಂಸ್ಥೆಯ ಎಲ್ಲಾ 16 ಸಂಶೋಧನಾ ವಿಭಾಗಗಳು ತಾವು ಕೈಗೊಂಡಿರುವ ಸಂಶೋಧನೆಗಳ ಬಗ್ಗೆ ಭಿತ್ತಿಪತ್ರಗಳು ಹಾಗೂ ಪ್ರಾತ್ಯಕ್ಷಿಕೆಗಳ ಮೂಲಕ ತಿಳಿಸಿಕೊಡಲಿವೆ.

ಇದಲ್ಲದೆ, ಸಂಸ್ಥೆಯು ವಿನ್ಯಾಸ ಮಾಡಿರುವ ಯಂತ್ರೋಪಕರಣಗಳು, ಸಂಸ್ಕರಿಸಿದ ಉತ್ಪನ್ನಗಳು ಹಾಗೂ ಆಹಾರ ಸಂಸ್ಕರಣೆಯಲ್ಲಿ ಬಳಸುವ ಕೆಲವು ಸರಳ ಪರೀಕ್ಷಣಾ ವಿಧಾನಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸಲಾಗುವುದು ಎಂದರು. ಸಿಎಫ್ಟಿಆರ್‌ಐ ಮುಕ್ತ ದಿನಾಚರಣೆ ಸಮಿತಿಯ ಮುಖ್ಯಸ್ಥ ಜಿ.ವೆಂಕಟೇಶ್ವರನ್‌ ಸುದ್ದಿಗೋಷ್ಠಿಯಲ್ಲಿದ್ದರು. 

ರಾಗಿಮುದ್ದೆ ತಯಾರಿಸುವ ಯಂತ್ರ: ಸಿಎಫ್ಟಿಆರ್‌ಐ ಆವಿಷ್ಕರಿಸಿರುವ ರಾಗಿ ಮುದ್ದೆ ಮಾಡುವ ಯಂತ್ರ ಹಾಗೂ ಹಣ್ಣಿನ ಪೌಷ್ಟಿಕತೆಯನ್ನೂ ಒಳಗೊಂಡಿರುವ ಕಾರ್ಬನೇಟೆಡ್‌ ಪೇಯಗಳು ಮುಕ್ತ ದಿನಾಚರಣೆಯ ವಿಶೇಷ ಆಕರ್ಷಣೆಗಳಾಗಿವೆ. ಪ್ರತಿ ಗಂಟೆಗೆ 300 ರಾಗಿ ಮುದ್ದೆ ಮಾಡುವ ಯಂತ್ರವನ್ನು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಲೋಕಾರ್ಪಣೆ ಮಾಡಿದ್ದರು. ಯಂತ್ರದ ಸಾಮರ್ಥ್ಯವನ್ನು ಗಂಟೆಗೆ ಒಂದು ಸಾವಿರ ಮಾಡುವಂತೆ ಮೇಲ್ದರ್ಜೆಗೇರಿಸಲಾಗುತ್ತಿದೆ. ಸದ್ಯ 15 ಯಂತ್ರಗಳಿಗೆ ಬೇಡಿಕೆ ಇದೆ. 

ಜೊತೆಗೆ ಕಾರ್ಬನೇಟೆಡ್‌ ಪೇಯಗಳಾದ ದ್ರಾಕ್ಷಿ, ಮಾವು, ದಾಳಿಂಬೆ, ನಿಂಬೆ ಪೇಯಗಳಲ್ಲಿ ಅವುಗಳ ಪಲ್ಪ್ ದೊರೆಯಲಿದೆ. ಗಂಟೆಗೆ 400 ಪೂರಿ ಮಾಡುವ ಯಂತ್ರಕ್ಕೆ ಬೇಡಿಕೆ ಹೆಚ್ಚಿದೆ. ಹೆಚ್ಚು ಭಕ್ತರು ಭೇಟಿ ನೀಡುವ ಶಿರಡಿ, ಶಬರಿಮಲೆ, ಚಾಮುಂಡೇಶ್ವರಿ ದೇವಸ್ಥಾನಳಿಗೂ ಈ ಯಂತ್ರಗಳನ್ನು ನೀಡಲಾಗಿದೆ. ಕೈಯಿಂದ ಮಾಡುವ ಪೂರಿಗೂ ಈ ಯಂತ್ರದಿಂದ ಮಾಡುವ ಪೂರಿಗೂ ಶೇ.30ರಷ್ಟು ಕೊಬ್ಬಿನಾಂಶ ಕಡಿಮೆ ಇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next