ಚಿಂತಾಮಣಿ: ನಿರುದ್ಯೋಗ ಮತ್ತು ಬಡತನ ಎರಡನ್ನು ಸವಾಲಾಗಿ ಸ್ವೀಕರಿಸಿ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕು ಎಂದು ಚಿಂತಾಮಣಿ ತಾಲೂಕಿನ ಆರಕ್ಷಕ ಉಪಾಧಿಕ್ಷಕ ಶ್ರೀನಿವಾಸ್ ಹೇಳಿದರು.
ನಗರಸಭೆ ಸಭಾಂಗಣದಲ್ಲಿ ಭಾನುವಾರ ಪೋಲಿಸ್ ಇಲಾಖೆಯಿಂದ ಏರ್ಪಡಿಸಿದ್ದ ದಲಿತರ ಕುಂದುಕೊರತೆಗಳ ಸಭೆ ಉದ್ದೇಶಿಸಿ ಮಾತನಾಡಿದ ಅವರು, ನಗರ ಭಾಗದಲ್ಲಿನ ಮಕ್ಕಳು ಶಾಲೆಗೆ ಹೋಗದೇ ಮನೆಯಲ್ಲಿಯೇ ಉಳಿದಿರುವ ಮಕ್ಕಳಿಗೆ ಮರಳಿ ಶಾಲೆಗೆ ಕಳುಹಿಸಬೇಕು. ಸರ್ಕಾರದ ಹತ್ತಾರು ಯೋಜನೆಗಳ ಬಗೆ ದಲಿತರಿಗೆ ವಿದ್ಯಾವಂತ ಯುವಕರು ಮಾಹಿತಿ ನೀಡಬೇಕು ಎಂದರು.
ನಗರ ಪ್ರದೇಶದಲ್ಲಿ ಓಡಾಡುವ ಅಪರಿಚಿತ ವ್ಯಕ್ತಿಗಳ ಬಗ್ಗೆ ಪ್ರತಿಯೊಬ್ಬ ನಾಗರಿಕರು ನಿಗಾ ಇಡಬೇಕು. ದಲಿತ ಕಾಲೋನಿಗಳಲ್ಲಿ ಮದ್ಯಪಾನ ಮಾರಾಟ ಮತ್ತು ಜೂಜು ಆಡುತ್ತಿರುವುದು ಕಂಡುಬಂದರೆ ಪೊಲೀಸ್ ಠಾಣೆಗೆ ದೂರು ನೀಡಿ ಸಹಕಾರ ನೀಡಬೇಕು ಎಂದು ಹೇಳಿದರು.
ದಲಿತ ಸಂಘದ ಮುಖಂಡ ಕಾವಾಲಿ ವೆಂಕಟರವಣಪ್ಪ ಮಾತನಾಡಿ, ದಲಿತರ ಕಾಲೋನಿಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದೆ. ಅಕ್ರಮವಾಗಿ ಗ್ರಾಮಗಳಿಗೆ ಸರಬರಾಜು ಮಾಡುವ ವೈನ್ಸ್ ಮಾಲೀಕರ ವಿರುದ್ಧವೂ ಕ್ರಮ ಕೈಗೂಳ್ಳಬೇಕು. ಮದ್ಯದ ಅಂಗಡಿಯಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ದರ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ನಗರದ ಜೆ.ಜೆ ಕಾಲೋನಿಯ ಬಳಿ ನಿರ್ಮಾಣ ಮಾಡಿರುವ ಪೊಲೀಸ್ ಚೌಕಿಯಲ್ಲಿ ಹಗಲು, ರಾತ್ರಿ ವೇಳೆಯಲ್ಲೂ ಒಬ್ಬ ಪೇದೆಯನ್ನು ಒಪಿಡಿಯಲ್ಲಿಡಬೇಕು ಎಂದು ಆಗ್ರಹಿಸಿದರು.
ಗ್ರಾಮಾಂತರ ಆರಕ್ಷಕ ನೀರಿಕ್ಷಕ ಜಗದೀಶ್, ನಗರ ನಿರೀಕ್ಷಕ ಅಶೋಕ್ ಕುಮಾರ್, ನಗರಸಭೆ ಸದಸ್ಯ ಬ್ಲಿಡ್ ಮಂಜುನಾಥ್, ಹಮಾಲಿ ಯುವಕರ ಸಂಘದ ಸುಬ್ರಹ್ಮಣಿ, ಡಿಎಸ್‌ಎಸ್ ಮುಖಂಡರಾದ ಕವಾಲಿ ವೆಂಕಟರಣಪ್ಪ, ಲಕ್ಷ್ಮೀ ನಾರಾಯಣ,ಬಾಬು, ಛಲಪತಿ,ದೇವಾರಾಜು ಇದ್ದರು.