Advertisement

ಜನರ ತೀರ್ಪು ಒಪ್ಪುತ್ತೇವೆ.. ಆದರೆ, ಬಿಜೆಪಿ ಹೇಳಿಕೊಂಡಷ್ಟು ಸಾಧನೆ ಮಾಡಿಲ್ಲ- ಸಿದ್ದರಾಮಯ್ಯ

09:21 PM May 02, 2021 | Team Udayavani |

ಬೆಂಗಳೂರು: ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆ ಹಾಗೂ ಐದು ರಾಜ್ಯಗಳ ಫಲಿತಾಂಶ ಕುರಿತು ಜನರ ತೀರ್ಪು ಒಪ್ಪುತ್ತೇವೆ. ಆದರೆ, ಬಿಜೆಪಿ ಹೇಳಿಕೊಂಡಷ್ಟು ಸಾಧನೆ , ಮಾಡಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ದೇಶ ಹಾಗೂ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇರುವುದು ಫಲಿತಾಂಶದಿಂದ ಸಾಬೀತಾಗಿದೆ. ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ಫಲಿತಾಂಶ ಬಿಜೆಪಿ ಯನ್ನು ಜನ ಒಪ್ಪಿಲ್ಲ ಎಂಬುದಕ್ಕೆ ಸಾಕ್ಷಿ ಎಂದು ಹೇಳಿದರು.

ದೇಶದಲ್ಲಿ ಬಿಜೆಪಿಯ ಅವನತಿಯ ಪರ್ವ ಶುರುವಾಗಿದೆ. ಪಶ್ಚಿಮ ಬಂಗಾಳದಲ್ಲಿ ದುಡ್ಡು, ಅಧಿಕಾರ ಮತ್ತು ತೋಳ್ಬಲದ ವಾಮಮಾರ್ಗದ ಮೂಲಕ ಸ್ವಲ್ಪಮಟ್ಟಿಗೆ ಬಲವನ್ನು ಹೆಚ್ಚಿಸಿಕೊಂಡರೂ ಗೆಲುವಿನ ದಡದ ಸಮೀಪಕ್ಕೆ ಬರಲಾಗದೆ ಮುಖ ಭಂಗ ಅನುಭವಿಸಿದೆ . ಸೋಲಿನ ಹೊಣೆಯ ಜೊತೆ ಕೊರೊನಾದಿಂದ ಪ್ರಾಣ ಕಳೆದುಕೊಂಡ ಅಮಾಯಕ ಜನರ ಸಾವಿನ ಹೊಣೆಯನ್ನೂ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಹೊರಬೇಕಾಗುತ್ತದೆ ಎಂದು ಹೇಳಿದರು.

ಪಶ್ಚಿಮ ಬಂಗಾಳದ ಗೆಲುವಿನ ರೂವಾರಿ ಮಮತಾ ಬ್ಯಾನರ್ಜಿ ಅವರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದ ಅವರು, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಮತದಾರರು ಬಿಜೆಪಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಕೂಟ ಮತ್ತು ಕೇರಳದಲ್ಲಿ ಎಲ್‌ಡಿಎಫ್‌ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಅಲ್ಲಿನ ಗೆಲುವಿನ ರೂವಾರಿಗಳಾದ ಎಂ.ಕೆ.ಸ್ಟಾಲಿನ್‌ ಮತ್ತು ಪಿಣರಾಯ್‌ ವಿಜಯನ್‌ ಅವರಿಗೂ ನನ್ನ ಅಭಿನಂದನೆಗಳು ಎಂದು ಹೇಳಿದರು.

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಿಂದ ಹಿಡಿದು ಇತ್ತೀಚೆಗೆ ನಮ್ಮ ರಾಜ್ಯದಲ್ಲಿ ನಡೆದ ಗ್ರಾಮ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯ ವರೆಗೆ ಎಲ್ಲ ಕಡೆ ಜನ ಬಿಜೆಪಿಯನ್ನು ತಿರಸ್ಕರಿಸುತ್ತಿರುವುದು ಮುಂದಿನ ರಾಜಕೀಯ ಬೆಳವಣಿಗೆಯ ದಿಕ್ಸೂಚಿಯಾಗಿದೆ ಎಂದು ತಿಳಿಸಿದರು.

Advertisement

ಇದನ್ನೂ ಓದಿ:ನಮಗೆ ಮಾಡೆಲ್ ಆಗುವ ಅಧಿಕಾರಿ ಬೇಕು “ಮಾಡೆಲ್” ಅಲ್ಲ : ಶಾಸಕ ಸಾರಾ ಮಹೇಶ್

ಮಸ್ಕಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭೂತಪೂರ್ವ ಗೆಲುವು ಸಾಧಿಸಿದೆ. ಆಪರೇಷನ್‌ ಕಮಲಕ್ಕೆ ಈ ಮೂಲಕ ಅಲ್ಲಿಯ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಜೊತೆಗೆ ಚುನಾವಣಾ ಚಾಣಕ್ಯ ಎಂದು ಮಾಧ್ಯಮಮಗಳ ಮೂಲಕ ಹೊಗಳಿಸಿಕೊಂಡಿದ್ದ ವಿಜಯೇಂದ್ರ ಮತ್ತವರ ಹಣದ ಥೈಲಿಗೆ ಮತದಾರರು ಮಣೆ ಹಾಕಿಲ್ಲ ಎಂಬುದು ಸಾಬೀತಾಗಿದೆ. ಮಸ್ಕಿ ಕ್ಷೇತ್ರದ ಮತದಾರರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು ಎಂದರು.
ಬಸವಕಲ್ಯಾಣ ಕ್ಷೇತ್ರದಲ್ಲಿ ಜೆಡಿಎಸ್‌ ತನ್ನ ಅಭ್ಯರ್ಥಿ ಕಣಕ್ಕಿಳಿಸಿದ್ದರಿಂದ, ಈಶ್ವರ ಖಂಡ್ರೆ ಅವರು ಕೊರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆ ಸೇರಿದ್ದು ಸೇರಿ ಹಲವು ಕಾರಣಗಳಿಂದ ಸೋಲಾಯಿತು ಎಂದು ಹೇಳಿದರು.
ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ 4 ಲಕ್ಷ ಮತಗಳಿಂದ ಸೋತಿತ್ತು. ಈ ಚುನಾವಣೆಯಲ್ಲಿ ಸತೀಶ್‌ ಜಾರಕಿಹೊಳಿ ಅವರು ಗೆಲ್ಲುವ ವಿಶ್ವಾಸ ಇತ್ತು. ಆದರೂ ಅವರು ಹೋರಾಟ ನೀಡಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಿರುವ ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಕ್ಷೇತ್ರ ಹಾಗೂ ಬೆಳಗಾವಿ ಲೋಕಸಭೆ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮಸ್ಕಿ ಅಭ್ಯರ್ಥಿ ಬಸವನಗೌಡ ತುರುವೀಹಾಳ ಅವರಿಗೆ ನನ್ನ ಅಭಿನಂದನೆಗಳು ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next