Advertisement
ದೇವನಹಳ್ಳಿ ತಾಲೂಕಿನ ಸಾದಹಳ್ಳಿ ಗ್ರಾಮದಲ್ಲಿರುವ ಖಾಸಗಿ ರೆಸಾರ್ಟಿನ ಸಭಾಂಗಣದಲ್ಲಿ ನಡೆದ ನವ ಸಂಕಲ್ಪ ಶಿಬಿರದಲ್ಲಿ ಮಾತನಾಡಿದ ಅವರು, ನಾವು ಅಧಿಕಾರಕ್ಕೆ ಬರಬೇಕು ಎನ್ನುವ ಕಾರಣಕ್ಕೆ ಚುನಾವಣೆ ಗೆಲ್ಲುವುದಲ್ಲ, ರಾಜ್ಯ ಮತ್ತು ಇಲ್ಲಿನ ಜನ ಉಳಿಯಬೇಕು ಎಂಬ ಕಾರಣಕ್ಕೆ ನಾವು ಗೆಲ್ಲಬೇಕಾಗಿದೆ. ಆದ್ದರಿಂದ ನಾವು ಈ ಸವಾಲು ಸ್ವೀಕಾರ ಮಾಡಬೇಕು ಎಂದು ತಿಳಿಸಿದ ಅವರು, ಬಿಜೆಪಿಯವರು ವಾಮ- ಮಾರ್ಗದಿಂದ ಅಧಿಕಾರಕ್ಕೆ ಬಂದು ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿದ್ದಾರೆ. ನಾವು ಜನರ ಸಮಸ್ಯೆಗಳನ್ನು ಗಮನದಲ್ಲಿ ಇಟ್ಟುಕೊಂಡು ಹೋರಾಟಗಳನ್ನು ರೂಪಿಸಬೇಕಾಗುತ್ತದೆ.ನಾವೆಲ್ಲರೂ ಒಂದು ಗೂಡಿ ಈ ದಿಸೆಯಲ್ಲಿ ಹೋರಾಟ ನಡೆಸೋಣ ಎಂದರು.
Related Articles
Advertisement
ನಂಬಿಕಾರ್ಹ ಮಾಹಿತಿ ಇರಬೇಕು: ಪಕ್ಷವನ್ನು ಬಲಪಡಿಸಲು ಅನೇಕ ಕ್ರಮಗಳನ್ನು ಎಐಸಿಸಿ ಹಾಗೂ ಕೆಪಿಸಿಸಿ ತೆಗೆದುಕೊಳ್ಳಲು ಆರಂಭ ಮಾಡಿದೆ. ಅದರ ಭಾಗವಾಗಿ ಈ ಸಭೆಯೂ ನಡೆಯುತ್ತಿದೆ. ತಾಲೂಕು ಹಾಗೂ ಜಿಲ್ಲಾ ಪಂಚಾಯತಿಗಳಿಗೆ ಚುನಾವಣೆ ನಡೆಸಬೇಕು ಎಂಬ ಆದೇಶವಾಗಿದೆ. ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ಸರ್ಕಾರದ ಮೀಸಲಾತಿ ಬಗ್ಗೆ ಒಂದು ತೀರ್ಪನ್ನು ನೀಡಿದೆ.
ತೀರ್ಪಿನ ಪ್ರಕಾರ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡುವಾಗ ಒಂದು ನಂಬಿಕಾರ್ಹ ಮಾಹಿತಿ ಇರಬೇಕು ಮತ್ತು ಮೀಸಲಾತಿ ಪ್ರಮಾಣ 50% ಮೀರಬಾರದು ಎಂದು ಹೇಳಿದೆ. ಇದು 2021 ಏಪ್ರಿಲ್ ನಲ್ಲಿ ನೀಡಿದ ತೀರ್ಪಾಗಿದೆ. ಆದರೆ ರಾಜ್ಯ ಬಿಜೆಪಿ ಸರ್ಕಾರ ಈ ತೀರ್ಪು ಬಂದ ಮೇಲೆ ಯಾವ ಕ್ರಮ ಕೈಗೊಂಡಿಲ್ಲ, ಇತ್ತೀಚೆಗೆ ಭಕ್ತವತ್ಸಲಂ ಅವರ ಸಮಿತಿ ರಚನೆ ಮಾಡಿದೆ, ಆ ಸಮಿತಿ ಇನ್ನು ವರದಿ ನೀಡಿಲ್ಲ. ಹತ್ತು ವಾರದಲ್ಲಿ ಚುನಾವಣೆ ನಡೆಸಬೇಕು ಎಂದು ಕೋರ್ಟ್ ಹೇಳಿದೆ ಎಂದರು.
ಜನರಿಗೆ ಮನವರಿಕೆ ಮಾಡಿ: ನಮ್ಮ ಪಕ್ಷವು ಸರ್ವ ಪಕ್ಷ ಸಭೆಯಲ್ಲಿ ಬಹಳ ಸ್ಪಷ್ಟವಾಗಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಇಲ್ಲದೆ ಚುನಾವಣೆ ನಡೆಸಬಾರದು ಎಂದು ಹೇಳಿದೆ. ಹಿಂದುಳಿದ ಜಾತಿಗಳಿಗೆ, ಮಹಿಳೆಯರಿಗೆ ಮೀಸಲಾತಿ ನೀಡಿದ್ದು ರಾಜೀವ್ ಗಾಂಧಿ ಅವರು ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿ ಮಾಡಿದ ನಂತರ. ಮಹಿಳೆಯರಿಗೆ ಶೇ.50 ಹಿಂದುಳಿದ ಜಾತಿಗಳಿಗೆ ಶೇ.33ಮೀಸಲಾತಿ ನೀಡಿದ್ದು. ಇದರಲ್ಲಿ ಅಲ್ಪಸಂಖ್ಯಾತರು ಹಾಗೂ ಇನ್ನಿತರೆ ಜಾತಿಗಳು ಸೇರುತ್ತವೆ. ಕಾಂಗ್ರೆಸ್ ಪಕ್ಷ ರಾಜಕೀಯ ಮೀಸಲಾತಿ ನೀಡಿದ್ದು ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಮೀಸಲಾತಿ ನೀಡಲು ಒಲವಿಲ್ಲ: ನನಗಿರುವ ಮಾಹಿತಿ ಪ್ರಕಾರ ರಾಜ್ಯ ಸರ್ಕಾರಕ್ಕೆ ಈ ಚುನಾವಣೆಯನ್ನು ನಡೆಸಲಾಗಲೀ ಅಥವಾ ಮಹಿಳೆಯರಿಗೆ, ಹಿಂದುಳಿ ದವರಿಗೆ ಮೀಸಲಾತಿ ನೀಡಲು ಒಲವಿಲ್ಲ. ಕಾಂಗ್ರೆಸ್ ಗೆ ಮಾತ್ರ ಈ ಬದ್ಧತೆ ಇರುವುದು. ಬಿಜೆಪಿಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಲ್ಲ ಎಂದು ದೂರಿದರು.
ಇಂದು ರಾಜ್ಯ ಮತ್ತು ದೇಶ ಸಾಲದ ಸುಳಿಯಲ್ಲಿ ಸಿಕ್ಕಿಕೊಂಡಿದೆ. 2014-15ರಲ್ಲಿ ಈ ದೇಶದ ಮೇಲಿದ್ದ ಒಟ್ಟು ಸಾಲ 53 ಲಕ್ಷ ಕೋಟಿ ರೂಪಾಯಿ. ಇಂದು ಈ ಸಾಲ 155 ಲಕ್ಷ ಕೋಟಿ ರೂಪಾಯಿ ಆಗಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 8 ವರ್ಷಗಳು ಆಯಿತು, ಅವರ ತಮ್ಮ 8 ವರ್ಷಗಳ ಆಡಳಿತದಲ್ಲಿ 100 ಲಕ್ಷ ಕೋಟಿ ರೂ.ಗೂ ಅಧಿಕ ಸಾಲವನ್ನು ಮಾಡಿದ್ದಾರೆ. ದೇಶದ ಪ್ರತಿಯೊಬ್ಬನ ಮೇಲೆ 1.70 ಲಕ್ಷ ರೂ. ಇದೆ.ಮಾರ್ಚ್ 2018 ರಲ್ಲಿ ಕರ್ನಾಟಕದ ಸಾಲ 2.42 ಲಕ್ಷ ಕೋಟಿ ರೂ. ಇತ್ತು. 2023 ಮಾರ್ಚ್ ಗೆ 5.40 ಲಕ್ಷ ಕೋಟಿ ಸಾಲ ಆಗುತ್ತದೆ ಎಂದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ, ರಾಜ್ಯಸಭಾ ಚುನಾವಣಾ ಅಭ್ಯರ್ಥಿ ಜಯರಾಮ್ ರಮೇಶ್, ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ, ಧ್ರುವನಾರಾಯಣ್, ಸಲೀಂ ಅಹಮದ್, ಸತೀಶ್ ಜಾರಕಿಹೊಳಿ, ಈಶ್ವರ್‌ಖಂಡ್ರೆ, ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರಿದ್ದರು.
ಜನರ ಕಷ್ಟಗಳಿಗೆ ಸ್ಪಂದಿಸಿರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವಾಗದೆ, ಅಭಿವೃದ್ಧಿ ವಿಚಾರವನ್ನು ತೆಗೆಯಬಾರದೆಂಬ ಉದ್ದೇಶದಿಂದ ಧರ್ಮ, ಜಾತಿ ಎಂಬ ಹೆಸರಿನಲ್ಲಿ ಹೊಲಸು ರಾಜಕೀಯವನ್ನು ಮಾಡುವ ಸಂಪ್ರದಾಯವು ಬಿಜೆಪಿಯದ್ದಾಗಿದೆ. ಕಾರ್ಯ ಕರ್ತರು, ಮುಖಂಡರು ಪ್ರತಿ ಹಳ್ಳಿಗಳಿಗೆ ಹೋಗಿ ಅಲ್ಲಿನ ಜನರ ಕಷ್ಟಗಳಿಗೆ ಸ್ಪಂದಿಸುವಂತಾಗಬೇಕು. ಮುಂದಿನ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಎದುರಿಸಿ ಪಕ್ಷವನ್ನು ಸದೃಢಗೊಳಿಸಿ ಅಧಿಕಾರಕ್ಕೆ ತರುವ ಜವಾಬ್ದಾರಿಯನ್ನು ಹೊಂದಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ ಹೇಳಿದರು. ನೋಂದಣಿಗೆ ಮತ್ತೆ ಅವಕಾಶ: ಡಿ.ಕೆ.ಶಿವಕುಮಾರ್
ಕಾಂಗ್ರೆಸ್ ಪಕ್ಷವು ಇತ್ತೀಚೆಗಿನ ದಿನಗಳಲ್ಲಿ ನಡೆದ ಸದಸ್ಯತ್ವ ನೊಂದಣಿ ಅಭಿಯಾನದಲ್ಲಿ 78 ಲಕ್ಷ ಮಂದಿ ನೋಂದಣಿ ಮಾಡಿದ್ದಾರೆ. ಅದರಲ್ಲಿ ಶೇ.46ರಷ್ಟು 35 ವರ್ಷದೊಳಗಿನವರಿದ್ದಾರೆ. ಶೇ.42ರಷ್ಟು ಮಹಿಳಾ ಸದಸ್ಯರಿದ್ದಾರೆ. ಸಾಂಸ್ಥಿಕ ಚುನಾವಣೆಯಲ್ಲಿ ಇವರೆಲ್ಲರಿಗೂ ಅವಕಾಶ ದೊರೆಯಲಿದೆ. ಸದಸ್ಯತ್ವ ನೋಂದಣಿಗೆ ಮತ್ತೇ ಅವಕಾಶ ನೀಡಲಾಗಿದೆ. ನವಸಂಕಲ್ಪ ಶಿಬಿರದಲ್ಲಿ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು, ಹಿಂದಿನ ಚುನಾವಣಾ ಅಭ್ಯರ್ಥಿಗಳು, ಕೆಪಿಸಿಸಿ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ಹಿರಿಯ ನಾಯಕರು ಭಾಗವಹಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.