ಭರಮಸಾಗರ: ಮುಂಗಾರು ಮಳೆಯ ಅಭಾವದ ನಡುವೆ ಕಡಿಮೆ ತೇವಾಂಶದ ಭೂಮಿಯಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದೆ.
ಮುಂಗಾರು ಮಳೆ ಒಂದು ತಿಂಗಳಿಂದ ಮರೀಚಿಕೆ ಆಗಿರುವ ಬೆನ್ನ ಹಿಂದೆ ಕಳೆದ ಒಂದೆರಡು ದಿನಗಳಿಂದ ಅಲ್ಲಲ್ಲಿ ಒಂದಷ್ಟು ಮಳೆ ಆಗುತ್ತಿದ್ದಂತೆ ಬಿತ್ತನೆ ಅವಧಿ ಮೀರುತ್ತಿದ್ದರೂ ರೈತರು ಮಳೆಯ ಮೇಲಿನ ವಿಶ್ವಾಸ ಕಳೆದುಕೊಳ್ಳದೆ ಬಿತ್ತನೆ ಶುರು ಮಾಡಿದ್ದಾರೆ.
ಪ್ರಮುಖವಾಗಿ ಮೆಕ್ಕೆಜೋಳ ಬಿತ್ತನೆ ಕಡೆ ಮುಖ ಮಾಡಿರುವ ರೈತರು ನಾಲ್ಕರಿಂದ ಐದು ತಿಂಗಳ ಅವಧಿಯ ಬೆಳೆಯಾದ ಮೆಕ್ಕೆಜೋಳ ಬಿತ್ತನೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ.
ಚಿತ್ರದುರ್ಗ ತಾಲೂಕಿನ ಹಲವು ಭಾಗಗಳಲ್ಲಿ ಮಳೆಯ ಅಸಮಾನ ಹಂಚಿಕೆಯಿಂದ ಇನ್ನೂ ಜಮೀನನ್ನು ಹದ ಮಾಡಿಕೊಳ್ಳದೆ ಮುಗಿಲು ನೋಡುತ್ತಿದ್ದರೆ ಕೆಲವೆಡೆ ಈಗಾಗಲೇ ಬಿತ್ತನೆ ಕಾರ್ಯ ಮುಗಿಸುವ ಹಂತದಲ್ಲಿ ಇದ್ದಾರೆ. ಇನ್ನೂ ಹಲವೆಡೆ ಬಿತ್ತನೆ ಮಾಡಲೋ ಬೇಡವೋ ಎಂಬ ಆತಂಕದಲ್ಲಿ ರೈತರು ಇದ್ದಾರೆ.
ಒಟ್ಟಾರೆ ಮಳೆಯೊಡನೆ ಜೂಜಾಟ ನಡೆಸುತ್ತಿರುವ ಅನ್ನದಾತರ ಪರಿಸ್ಥಿತಿ ಹೇಳತೀರದಾಗಿದೆ.