ಹುಬ್ಬಳ್ಳಿ: ದಾಜಿಬಾನ ಪೇಟೆ ಹಾಗೂ ಸುತ್ತಲಿನ ಮಾರುಕಟ್ಟೆ ಪ್ರದೇಶದಲ್ಲಿ ಸ್ಮಾರ್ಟ್‌ಸಿಟಿ ಮೂಲಕ ನಡೆಯುತ್ತಿರುವ ರಸ್ತೆ ಕಾಮಗಾರಿಗಳು ಸಾಕಷ್ಟು ವಿಳಂಬವಾಗುತ್ತಿದ್ದು, ಸಾಕಷ್ಟು ಮನವಿ ಮಾಡಿದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎಂದು ಬೇಸತ್ತ ವ್ಯಾಪಾರಿಗಳು ಸೋಮವಾರ ದಿಢೀರ್ ಪ್ರತಿಭಟನೆ ನಡೆಸಿದರು.ಕೆಲ ಕಾಲ ರಸ್ತೆ ತಡೆದು ಆಕ್ರೋಶ ಹೊರ ಹಾಕಿದರು. ಸ್ಮಾರ್ಟ್‌ಸಿಟಿ ಕಾಮಗಾರಿಗಳು ಸಕಾಲಕ್ಕೆ ಪೂರ್ಣಗೊಳ್ಳುತ್ತಿಲ್ಲ.
ಯಾವುದೇ ಕಾಮಗಾರಿಗಳನ್ನು ಪೂರ್ಣ ಮುಗಿಸುತ್ತಿಲ್ಲ. ರಸ್ತೆ, ಗಟಾರುಗಳನ್ನು ಅಡ್ಡಾದಿಡ್ಡಿಯಾಗಿ ಅಗೆದು ಹಾಕಿದ್ದಾರೆ. ರಾತ್ರಿ ಬಂದು ತಮಗೆ ಬೇಕಾದಂತೆ ಅಗೆದು ವಾರಗಟ್ಟಲೆ ಕಾಮಗಾರಿ ಆರಂಭಿಸಲ್ಲ. ಇದರಿಂದ ದಾಜಿಬಾನ ಪೇಟೆಯ ಭಾಗದ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿ ವ್ಯಾಪಾರ ಸಂಪೂರ್ಣ ಕಡಿಮೆಯಾಗಿದೆ. ಕಾಮಗಾರಿಗಳನ್ನು ಸಕಾಲಕ್ಕೆ ಪೂರ್ಣಗೊಳಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸ್ಮಾರ್ಟ್‌ಸಿಟಿ ಅಧಿಕಾರಿಗಳು ವ್ಯಾಪಾರಿಗಳ ಮಾತಿಗೆ ಬೆಲೆ ಇಲ್ಲದಂತೆ ನಡೆದುಕೊಳ್ಳುತ್ತಿದ್ದಾರೆಂದು ದೂರಿದರು.
ವ್ಯಾಪಾರಿ ಪ್ರಕಾಶ ಲದ್ವಾ ಮಾತನಾಡಿ, ದಾಜಿಬಾನಪೇಟೆ ಸೇರಿದಂತೆ ಸುತ್ತಮುತ್ತಲಿನ ಎಲ್ಲಾ ರಸ್ತೆಗಳನ್ನು ಅಗೆದಿದ್ದಾರೆ. ಒಂದು ರಸ್ತೆಯನ್ನೂ ಇವರು ಪೂರ್ಣಗೊಳಿಸಿಲ್ಲ. ಸ್ಮಾರ್ಟ್‌ಸಿಟಿ ಕಂಪನಿಯಲ್ಲಿ ನುರಿತ ಹಾಗೂ ಅನುಭವಿ ಎಂಜಿನಿಯರ್‌ಗಳಿದ್ದರೆ ಹಂತ ಹಂತವಾಗಿ ರಸ್ತೆ ನಿರ್ಮಾಣಕ್ಕೆ ಮುಂದಾಗುತ್ತಿದ್ದರು. ಆದರೆ ಅವೈಜ್ಞಾನಿಕ ಕಾಮಗಾರಿಗಳಿಂದ ವ್ಯಾಪಾರಿಗಳು, ಗ್ರಾಹಕರು ಸಂಕಷ್ಟ ಅನುಭವಿಸುವಂತಾಗಿದೆ. ತೆಗೆದುಕೊಂಡ ಕಾಮಗಾರಿ ಸಕಾಲಕ್ಕೆ ಪೂರ್ಣಗೊಳಿಸುತ್ತಿಲ್ಲ. ಕೋವಿಡ್‌ನಿಂದ ಸಾಕಷ್ಟು ನಷ್ಟದಲ್ಲಿರುವಾಗ ಈ ಭಾಗದ ವ್ಯಾಪಾರಿಗಳು ಸ್ಮಾರ್ಟ್‌ಸಿಟಿ ಕಾಮಗಾರಿಯಿಂದ ಮತ್ತಷ್ಟು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕಾಗಮಿಸಿದ ಪೊಲೀಸರು ಪ್ರತಿಭಟನೆ ನಡೆಸದಂತೆ ಮನವಿ ಮಾಡಿದರು. ಸ್ಥಳಕ್ಕೆ ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಸುವುದಾಗಿ ಭರವಸೆ ನೀಡಿದ ನಂತರ ವಾಪಸ್ ಪಡೆದರು. ಸ್ಥಳಕ್ಕೆ ಗುತ್ತಿಗೆದಾರರನ್ನು ಕರೆಸುತ್ತಿದ್ದಂತೆ ತರಾಟೆಗೆ ತೆಗೆದುಕೊಂಡರು. ಕಾರ್ಮಿಕರ ಸಮಸ್ಯೆಯಿಂದ ಕಾಮಗಾರಿಗಳನ್ನು ಪೂರ್ಣಗೊಳಿಸಲು ವಿಳಂಬವಾಗುತ್ತಿದೆ. ನಾಲ್ಕೈದು ದಿನಗಳಲ್ಲಿ ನನ್ನ ವ್ಯಾಪ್ತಿಗೆ ಬರುವ ರಸ್ತೆಯನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು. ನೀಡಿದ ಭರವಸೆ ಈಡೇರದಿದ್ದರೆ ಸ್ಮಾರ್ಟ್‌ಸಿಟಿ ಕಚೇರಿ ಮುಂಭಾಗ ಪ್ರತಿಭಟಿಸುವುದಾಗಿ ವರ್ತಕರು ಎಚ್ಚರಿಕೆ ನೀಡಿದರು.
ವ್ಯಾಪಾರಿ ರಾಜು ಪೂಜಾರಿ ಮಾತನಾಡಿ, ರಾತ್ರಿ ವೇಳೆ ಬಂದು ತಮಗೆ ಬೇಕಾದ ರೀತಿಯಲ್ಲಿ ಅಂಗಡಿ ಮುಂದೆ ಅಗೆಯುತ್ತಾರೆ. ಆದರೆ ಅಲ್ಲಿ ಕಾಮಗಾರಿ ಪೂರ್ಣಗೊಳ್ಳಲು ತಿಂಗಳುಗಟ್ಟಲೇ ತೆಗೆದುಕೊಳ್ಳುತ್ತಿದ್ದಾರೆ. ಸತತವಾಗಿ ಮಳೆಯಾಗುತ್ತಿರುವ ಕಾರಣ ಈ ಭಾಗಕ್ಕೆ ಬರುವುದೇ ಬೇಡ ಎನ್ನುವಂತಾಗಿದೆ. ಇನ್ನು ಕೋರ್ಟ್ ವೃತ್ತದಲ್ಲಿ ಮಲ್ಟಿ ಪಾರ್ಕಿಂಗ್ ಕಾಮಗಾರಿ ವಿಳಂಬ ಹಾಗೂ ಅವೈಜ್ಞಾನಿಕ ಪರಿಣಾಮವಾಗಿ ರಸ್ತೆಯನ್ನು ಬಂದ್ ಮಾಡಿದ್ದಾರೆ. ಇದರಿಂದ ಗ್ರಾಹಕರು ದಾಜಿಬಾನ ಪೇಟೆಯತ್ತ ಬಾರದಂತೆ ಆಗಿದೆ. ಗುತ್ತಿಗೆದಾರ, ಅಧಿಕಾರಿಗಳು ಮಾಡುತ್ತಿರುವ ಎಡವಟ್ಟಿನಿಂದ ವ್ಯಾಪಾರಿಗಳು, ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ದೂರಿದರು.
ಪಾಲಿಕೆ ಸದಸ್ಯೆ ಸುನಿತಾ ಬುರಬುರೆ ಮಾತನಾಡಿ, ಅಭಿವೃದ್ಧಿ ಕಾಮಗಾರಿಗಳು ಜನರಿಗೆ ಅನುಕೂಲವಾಗುವ ಬದಲು ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡಿವೆ. ವ್ಯಾಪಾರಿಗಳಿಗೆ ಹಾಗೂ ಜನರಿಗೆ ಸಮಸ್ಯೆಯಾಗದಂತೆ ಕಾಮಗಾರಿ ನಡೆಸದಿರುವುದು ಈ ಸಮಸ್ಯೆಗೆ ಕಾರಣವಾಗಿದೆ. ಹಿಂದೆಯೂ ಕೂಡ ಸ್ಮಾರ್ಟ್‌ಸಿಟಿ ಕಾಮಗಾರಿ ವಿಳಂಬ ಹಾಗೂ ಅವೈಜ್ಞಾನಿಕ ಖಂಡಿಸಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿದ್ದರು. ನಡೆದಿರುವ ಕಾಮಗಾರಿಗಳ ಕುರಿತು ಮಾಹಿತಿ ನೀಡುವಂತೆ ಲಿಖೀತವಾಗಿ ಕೇಳಿದರೂ ಯಾವ ಮಾಹಿತಿಯನ್ನೂ ನೀಡುತ್ತಿಲ್ಲ. ಜನರು ತಾಳ್ಮೆ ಪರೀಕ್ಷಿಸುವುದು ಸರಿಯಲ್ಲ ಎಂದರು. ಕಾಂಗ್ರೆಸ್ ಮುಖಂಡ ಪ್ರಕಾಶ ಬುರಬರೆ, ವ್ಯಾಪಾರಿಗಳಾದ ಪಾಂಡುರಂಗ ಪಟ್ಟಣ, ಅರವಿಂದ ಜಾದವ, ವೆಂಕಟೇಶ ರತನ, ರಾಜು ಮಲಜಿ ಸೇರಿದಂತೆ ಇನ್ನಿತರರಿದ್ದರು.