Advertisement

ಎಆರ್‌ಟಿ ಕೇಂದ್ರ ಮುಚ್ಚಲು ಎಸಿಸಿ ಚಿಂತನೆ

04:44 PM Nov 14, 2020 | Suhan S |

ವಾಡಿ: ಬದುಕಿನ ಭರವಸೆಯನ್ನೇ ತೊರೆದು ಸಾವಿನ ದಿನಗಳನ್ನು ಎಣಿಸುತ್ತ ಕಾಲ ಕಳೆಯುತ್ತಿರುವ 400 ಎಚ್‌ಐವಿ ಸೋಂಕಿತರು, ವೈದ್ಯರ ಆತ್ಮಸ್ಥೈರ್ಯ ಮತ್ತು ಸರಕಾರದ ಉಚಿತ ಮಾತ್ರೆಗಳ ಸಹಾಯದಿಂದ ಉಸಿರಾಡುತ್ತಿದ್ದು, ಕಳೆದ 13 ವರ್ಷಗಳಿಂದ ಈ ಎಚ್‌ಐವಿ ಸೋಂಕಿತರ ಪಾಲಿಗೆ ಭರವಸೆ ಬೆಳಕಾಗಿ ಕಾರ್ಯನಿರ್ವಹಿಸುತ್ತಿರುವ ಎಆರ್‌ಟಿ ಕೇಂದ್ರ ಶಾಶ್ವತವಾಗಿ ಬಾಗಿಲು ಮುಚ್ಚುವ ದಿನಗಳು ಸಮೀಪಿಸುತ್ತಿವೆ.

Advertisement

ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಎಸಿಸಿ ಸಿಮೆಂಟ್‌ ಕಂಪನಿ ಆಧೀನದಲ್ಲಿರುವ ಎಆರ್‌ಟಿ ಕೇಂದ್ರ 2007ರಲ್ಲಿ ಸ್ಥಾಪನೆಯಾಗಿದೆ. ಆಯುಷ್ಮಾನ್‌ ಟ್ರಸ್ಟ್‌ ಹೆಸರಿನಲ್ಲಿ ಮಹಾಮಾರಿ ಏಡ್ಸ್‌ ರೋಗದ ಕುರಿತು ಜಾಗೃತಿ ಮೂಡಿಸುವ ಕೇಂದ್ರವಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಕಳೆದ ಎರಡು ವರ್ಷದಿಂದ ಆಯುಷ್ಮಾನ್‌ ಟ್ರಸ್ಟ್‌ನಿಂದ ಹೊರಬಂದು ಎಸಿಸಿ ಎಆರ್‌ಟಿ ಸೆಂಟರ್‌ ಎಂದು ಗುರುತಿಸಿಕೊಂಡಿದೆ. ಈ ಆಸ್ಪತ್ರೆಯಲ್ಲಿ ಇದುವರೆಗೂ ಒಟ್ಟು 900 ಜನ ಎಆರ್‌ಟಿ ಇನ್‌ ಕೇರ್‌ ರೋಗಿಗಳಾಗಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. 1538 ಜನ ಎಚ್‌ಐವಿ ಸೋಂಕಿತರಿದ್ದಾರೆ.

ಇದರಲ್ಲಿ 400 ಸೋಂಕಿತರು ಪ್ರತಿ ತಿಂಗಳು ಆಸ್ಪತ್ರೆಗೆ ಬಂದು ಮಾತ್ರೆ ಪಡೆದು, ಆಪ್ತ ಸಮಾಲೋಚನೆಗೆ ಒಳಪಡುತ್ತಿದ್ದಾರೆ. ಇಲ್ಲಿನ ವೈದ್ಯರು ನೀಡುತ್ತಿರುವ ಸೂಕ್ತ ಚಿಕಿತ್ಸೆ ಮತ್ತು ಸ್ಪಂದನೆಯಿಂದಾಗಿ ದೀರ್ಘ‌ಕಾಲ ಬಾಳಿ ಬದುಕಿದ ಸೋಂಕಿತರಲ್ಲಿ 225 ಜನ ಮೃತಪಟ್ಟಿರುವ ಕುರಿತು ಎಸಿಸಿ, ಎಆರ್‌ಟಿ ಕೇಂದ್ರದಲ್ಲಿ ದಾಖಲೆಗಳಿವೆ. ಯಾದಗಿರಿ ಹಾಗೂ ಬೀದರ ಜಿಲ್ಲೆ

ಸೇರಿದಂತೆ ಚಿತ್ತಾಪುರ, ಕಲಬುರಗಿ ನಗರ, ಶಹಾಬಾದ, ಹೈದ್ರಾಬಾದ, ಪುಣೆ, ವಿಷಾಕಪಟ್ಟಣಂ ಸೇರಿದಂತೆ ವಿವಿಧೆಡೆಯಿಂದ ಬರುವ ಎಚ್‌ಐವಿ ಸೋಂಕಿತರಲ್ಲಿ ಮಹಿಳೆಯರು-656, ಪುರುಷರು-732, ಮಕ್ಕಳು-131  ದಾಖಲಾತಿಯಿದೆ. ಇವರೆಲ್ಲಾ ವಾಡಿ ಎಸಿಸಿ ಎಆರ್‌ಟಿ ಕೇಂದ್ರದಲ್ಲಿ ಚಿಕಿತ್ಸೆ ಮುಂದುವರಿಸಿದ್ದಾರೆ.

ಸರಕಾರ ಪ್ರತಿ ತಿಂಗಳು ಒಬ್ಬ ರೋಗಿಗೆ 3000ರೂ.ದಿಂದ 4000ರೂ. ಮೊತ್ತದ ಮಾತ್ರೆಗಳನ್ನು ಉಚಿತವಾಗಿ ವಿತರಿಸುತ್ತಿದೆ.ಆಸ್ಪತ್ರೆಯ ಓರ್ವ ವೈದ್ಯಾಧಿಕಾರಿ ಸೇರಿದಂತೆ ಏಳು ವೈದ್ಯಕೀಯ ಸಿಬ್ಬಂದಿಗಳಿಗೆ ಎಸಿಸಿ ಕಂಪನಿ ಸಂಬಳ ನೀಡುವ ಮೂಲಕ ಜನಸೇವೆ ಮಾಡುತ್ತಿದೆ. ಆದರೆ ಈ ಆಸ್ಪತ್ರೆಯಿಂದ ಕಂಪನಿಗೆ ಲಾಭವಿಲ್ಲ ಎನ್ನುವಕಾರಣಕ್ಕೆ ಶಾಶ್ವತವಾಗಿ ಸೇವೆ ನಿಲ್ಲಿಸಲು ಗುಪ್ತವಾಗಿ ಚಿಂತನೆ ನಡೆಸಿದೆ ಎನ್ನಲಾಗಿದೆ. ಕಲಬುರಗಿ ನಗರ ಮತ್ತು ಜೇವರ್ಗಿಯಲ್ಲಿ ಮಾತ್ರ ಎಆರ್‌ಟಿ ಕೇಂದ್ರಗಳಿದ್ದು, ವಾಡಿ ಕೇಂದ್ರದ ಸೋಂಕಿತರನ್ನು ಆ ಸೆಂಟರ್‌ಗಳಿಗೆಸೇರ್ಪಡೆಗೊಳಿಸಿ ಕೈತೊಳೆದುಕೊಳ್ಳುವ ತಂತ್ರ ರೂಪಿಸಲಾಗಿದೆ ಎನ್ನಲಾಗಿದೆ.

Advertisement

ಕಳೆದ ಒಂದು ವರ್ಷದಿಂದ ಆಸ್ಪತ್ರೆಗೆ ನೀಡಲಾದ ಭದ್ರತಾ ಸಿಬ್ಬಂದಿ ಸೇವೆ ಹಿಂದಕ್ಕೆ ಪಡೆಯಲಾಗಿದೆ. ಆಸ್ಪತ್ರೆ ಆವರಣ ಶುಚಿತ್ವ ಕೈಬಿಡಲಾಗಿದೆ. ಕಟ್ಟಡಕ್ಕೆ ಸುಣ್ಣಬಣ್ಣ ಮಾಡದೇ ಹಾಳುಗೆಡವಲಾಗಿದೆ. ಇದನ್ನೆಲ್ಲಗಮನಿಸಿದರೆ, ಎಸಿಸಿ ಹೆಣೆದಿರುವ ತಂತ್ರ ಫಲಿಸಿ, ಇದೇ ಮಾರ್ಚ್‌ ಅಂತ್ಯಕ್ಕೆ ವಾಡಿ ಎಆರ್‌ಟಿ ಕೇಂದ್ರಕ್ಕೆ ಶಾಶ್ವತವಾಗಿ ಬೀಗ ಬೀಳಲಿದೆ.

ಎಸಿಸಿ ಆಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಡಿ ನಗರದ ಎಆರ್‌ಟಿ ಕೇಂದ್ರದಲ್ಲಿ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಎಚ್‌ಐವಿ, ಏಡ್ಸ್‌ ಚಿಕಿತ್ಸಾ ಕೇಂದ್ರ ಎಂದರೆ ಬಹುತೇಕರು ಸೌಲಭ್ಯ ಪಡೆದುಕೊಳ್ಳಲು ಹಿಂದೇಟು ಹಾಕುತ್ತಾರೆ. ಆದ್ದರಿಂದ ಕೇವಲ ಎಆರ್‌ಟಿ ಕೇಂದ್ರ ಎನ್ನುವ ಬದಲಾಗಿ ಅದನ್ನು ಸಾರ್ವಜನಿಕರ ಅನುಕೂಲ ದೃಷ್ಟಿಯಿಂದ ಆರೋಗ್ಯ ಕೇಂದ್ರವಾಗಿ ಪರಿವರ್ತಿಸುವ ಕುರಿತು ಎಸಿಸಿ ಚಿಂತನೆ ನಡೆಸುತ್ತಿದೆ. ಎಚ್‌ಐವಿ ಸೋಂಕಿತರಿಗೆ ನೀಡುವ ಚಿಕಿತ್ಸಾ ಸೌಲಭ್ಯ ಕಸಿದುಕೊಳ್ಳುವ ಆಲೋಚನೆ ಎಸಿಸಿಗಿಲ್ಲ. ವೈದ್ಯರು-ಸಿಬ್ಬಂದಿ ವೇತನ ಸೇರಿದಂತೆ ಎಆರ್‌ಟಿ ಸೆಂಟರ್‌ ನಿರ್ವಹಣೆಗಾಗಿ ಎಸಿಸಿ ವರ್ಷಕ್ಕೆ 18 ಲಕ್ಷ ರೂ. ಖರ್ಚು ಮಾಡುತ್ತಿದೆ. ಇದುಜನರಿಗೆ ಸದುಪಯೋಗವಾಗಿಸಲು ಚಿಂತನೆ ನಡೆದಿದೆ. ಆದರೆ ಆಸ್ಪತ್ರೆ ಮುಚ್ಚುವ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲ. ಪೆದ್ದಣ್ಣ ಬೀದಲಾ, ಮುಖ್ಯ ವ್ಯವಸ್ತಾಪಕ, ಸಿಎಸ್‌ಆರ್‌ ವಿಭಾಗ, ಎಸಿಸಿ ಕಾರ್ಖಾನೆ

 

ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next