ಬೆಂಗಳೂರು: ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದ ಪ್ರಕರಣಗಳಲ್ಲಿ “ಬಿ’ ರಿಪೋರ್ಟ್ ಸಲ್ಲಿಸಲು ಇರುವ ಅವಕಾಶ ದುರುಪಯೋಗ ಪಡಿಸಿಕೊಂಡು ವ್ಯಕ್ತಿಯೊಬ್ಬರಿಂದ 60 ಸಾವಿರ ರೂ. ಲಂಚ ಪಡೆದ ಆರೋಪದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಹೆಡ್ ಕಾನ್ಸ್‌ಟೆಬಲ್ ಒಬ್ಬರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರೆಡ್‌ಹ್ಯಾಂಡಾಗಿ ಬಲೆಗೆ ಕೆಡವಿದೆ.
ಸಂಪಂಗಿರಾಮನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕೃಷ್ಣ ಹಾಗೂ ಮುಖ್ಯ ಪೇದೆ ಮಂಗಳೇಶ್ ಎಸಿಬಿ ಬಲೆಗೆ ಬಿದ್ದವರು. ಕೊರಿಯರ್ ಅಂಗಡಿ ಮಾಲೀಕರೊಬ್ಬರಿಗೆ ಕೊಲೆ ಬೆದರಿಕೆ ಹಾಕಿದ ಆರೋಪ ಸಂಬಂಧ ರಾಮ್‌ಜಿ ಎಂಬಾತನ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ “ಬಿ’ ರಿಪೋರ್ಟ್ ಸಲ್ಲಿಸಲು ಇನ್ಸ್‌ಪೆಕ್ಟರ್ ಕೃಷ್ಣ 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಕುರಿತು ರಾಮ್ ಜಿ ಎಸಿಬಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಇನ್ಸ್‌ಪೆಕ್ಟರ್ ಕೃಷ್ಣ ಪರವಾಗಿ ಠಾಣೆಯಲ್ಲೇ ಮಂಗಳೇಶ್ 60 ಸಾವಿರ ರೂ. ಲಂಚ ಪಡೆಯುವಾಗ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳ ತಂಡ, ಇನ್ಸ್‌ಪೆಕ್ಟರ್ ಹಾಗೂ ಮುಖ್ಯ ಪೇದೆಯನ್ನು ಬಂಧಿಸಿ ಲಂಚದ ಹಣ ಜಪ್ತಿ ಮಾಡಿಕೊಂಡಿದೆ.
ಈ ಹಿಂದೆ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸಿದ್ದ ಇನ್ಸ್‌ಪೆಕ್ಟರ್ ಕೃಷ್ಣ, ಕೆಲ ತಿಂಗಳ ಹಿಂದಷ್ಟೇ ಎಸ್.ಆರ್.ನಗರ ಠಾಣೆಗೆ ವರ್ಗಾವಣೆ ಆಗಿದ್ದು, ಸೇವಾ ಅವಧಿ ಇನ್ನೂ ಐದಾರು ತಿಂಗಳು ಮಾತ್ರವಿದೆ ಎಂಬ ಮಾಹಿತಿಯಿದೆ. ಬಂಧಿತ ಆರೋಪಿಗಳಿಬ್ಬರ ಸೇವಾ ಹಿನ್ನೆಲೆಯನ್ನು ಪರಿಶೀಲಿಸುತ್ತಿದ್ದು, ತನಿಖೆ ಮುಂದುವರಿಸುವುದಾಗಿ ಎಸಿಬಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಎಸಿಬಿ ಬಲೆಗೆ ಬಿದ್ದ 2ನೇ ಇನ್ಸ್‌ಪೆಕ್ಟರ್!: ಸ್ನೂಕರ್ ಅಕಾಡೆಮಿ ಮುಂದುವರಿಸಲು ಮಾಲೀಕರಿಂದ 80 ಸಾವಿರ ರೂ. ಲಂಚ ಕೇಳಿದ್ದ ಬಾಣಸವಾಡಿ ಠಾಣೆ ಇನ್ಸ್‌ಪೆಕ್ಟರ್ ಮುನಿಕೃಷ್ಣ ಹಾಗೂ ಪೇದೆ ಉಮೇಶ್‌ನನ್ನು ಸೆಪ್ಟೆಂಬರ್‌ನಲ್ಲಿ ಎಸಿಬಿ ಬಂಧಿಸಿತ್ತು. ಇನ್ಸ್‌ಪೆಕ್ಟರ್ ಪರವಾಗಿ ಪೇದೆ ಉಮೇಶ್ 30 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗಲೇ ಎಸಿಬಿ ಕಾರ್ಯಾಚರಣೆ ನಡೆಸಿ ಬಂಧಿಸಿತ್ತು.