Advertisement

ಎಸಿಬಿ ಭರ್ಜರಿ ಬೇಟೆ;  ರಾಜ್ಯಾದ್ಯಂತ 18 ಅಧಿಕಾರಿಗಳ ನಿವಾಸದ ಮೇಲೆ  ದಾಳಿ

12:56 AM Mar 17, 2022 | Team Udayavani |

ಬೆಂಗಳೂರು: ರಾಜ್ಯಾದ್ಯಂತ ಭ್ರಷ್ಟಾಚಾರ ನಿಗ್ರಹ ದಳ ಬುಧವಾರ ಭರ್ಜರಿಯಾಗಿ ಭ್ರಷ್ಟರ ಬೇಟೆ ನಡೆಸಿದ್ದು,  18   ಅಧಿಕಾರಿಗಳಿಗೆ ಸೇರಿದ ಕೋಟ್ಯಂತರ ರೂ. ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದೆ.

Advertisement

20 ಜಿಲ್ಲೆಗಳ 77 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದು, ಇದರಲ್ಲಿ 400ಕ್ಕೂ ಅಧಿಕ ಅಧಿಕಾರಿಗಳು ಮತ್ತು ಸಿಬಂದಿ ಭಾಗಿಯಾಗಿದ್ದಾರೆ. ಬೆಳಗ್ಗೆ 6 ಗಂಟೆಗೆ  ಆರಂಭವಾಗಿದ್ದ ದಾಳಿ ರಾತ್ರಿ 8ರ ವರೆಗೆ ನಡೆದಿದೆ.  18 ಮಂದಿ ಅಧಿಕಾರಿಗಳ ಮನೆ, ಕಚೇರಿ, ಖಾಸಗಿ ಕಚೇರಿ, ಫಾರ್ಮ್ ಹೌಸ್‌, ಸಂಬಂಧಿಕರು, ಆಪ್ತರು ಹಾಗೂ ಲೆಕ್ಕಪತ್ರ ಪರಿಶೋಧಕರ ಮನೆಗಳ ಮೇಲೂ  ದಾಳಿ ನಡೆದಿದೆ.

ಕೆಲವರು ಕೋಟ್ಯಂತರ ರೂ. ಆಸ್ತಿಯನ್ನು  ಬಂಧುಗಳು ಹಾಗೂ ಸ್ನೇಹಿತರ ಹೆಸರಿನಲ್ಲಿ  ಮಾಡಿರುವುದು  ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ದಾಳಿಗೊಳಗಾದ ಅಧಿಕಾರಿಗಳು
ಬೆಂಗಳೂರಿನ ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕ ಬಿ.ಕೆ. ಶಿವಕುಮಾರ್‌, ಬೆಂಗಳೂರಿನ ಶಾಂತಿನಗರದಲ್ಲಿರುವ ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಜೆ. ಜ್ಞಾನೇಂದ್ರ ಕುಮಾರ್‌, ಬೆಂಗಳೂರಿನ ಬಿಡಿಎ ಉಪ ನಿರ್ದೇಶಕ ವಿ.ರಾಕೇಶ್‌ ಕುಮಾರ್‌, ಯಾದಗಿರಿಯ ಆರ್‌ಎಫ್ಒ ರಮೇಶ್‌ ಕನಕಟ್ಟೆ, ಬೆಳಗಾವಿಯ ಕೌಜಲಗಿ ವಿಭಾಗದ ಇಇ ಬಸವರಾಜ ಶೇಖರ್‌ ರೆಡ್ಡಿ ಪಾಟೀಲ್‌, ಗದಗ ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ್‌ ಬಸವ  ಕುಮಾರ್‌ ಎಸ್‌. ಅಣ್ಣಿಗೇರಿ, ವಿಜಯಪುರ ಜಿಲ್ಲೆಯ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಗೋಪಿನಾಥ ಸಾ ನಾಗೇಂದ್ರಸಾ ಮಾಲಜಿ, ಬಾಗಲಕೋಟೆಯ ಬಾದಾಮಿ ತಾಲೂಕಿನ ವಲಯ ಅರಣ್ಯಾಧಿಕಾರಿ ಶಿವಾನಂದ ಪೀರಪ್ಪ ಶರಣಪ್ಪ ಕೇದಗಿ, ಮೈಸೂರು ಜಿಲ್ಲೆಯ ವಿಜಯನಗರ ಪೊಲೀಸ್‌ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಎಚ್‌.ಎನ್‌. ಬಾಲಕೃಷ್ಣ ಗೌಡ, ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ವೃತ್ತದ ಅಬಕಾರಿ ಇನ್‌ಸ್ಪೆಕ್ಟರ್‌ ಚಲುವರಾಜು, ರಾಮನಗರ ಉಪವಿಭಾಗದ ಉಪವಿಭಾಗಾಧಿಕಾರಿ ಸಿ. ಮಂಜುನಾಥ್‌, ಬೆಂಗಳೂರಿನ ಸಮಾಜ ಕಲ್ಯಾಣ ಇಲಾಖೆಯ ಮೂಲಸೌಕರ್ಯ ವಿಭಾಗದ ಉಪ ನಿರ್ದೇಶಕ ಹಾಗೂ ಕಚೇರಿ ಅಧೀಕ್ಷಕ ಎ. ಶ್ರೀನಿವಾಸ್‌, ಮಂಗಳೂರಿನ ಕುಲಶೇಖರದ ಮೆಸ್ಕಾಂ ಎಇಇ ದಯಾಳು ಸುಂದರ್‌ರಾಜ್‌, ಚಿಕ್ಕಮಗಳೂರು ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಡಿ.ಎಚ್‌. ಗವಿರಂಗಪ್ಪ, ಕೊಪ್ಪಳ ಜಿಲ್ಲೆ ಯಲಬುರಗಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ಸಹಾಯಕ ಅಭಿಯಂತ  ಗಿರೀಶ್‌, ರಾಯಚೂರು ದೇವದುರ್ಗದ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ಎಇಇ ಅಶೋಕ ರೆಡ್ಡಿ ಪಾಟೀಲ್‌, ದಾವಣಗೆರೆ ಜಿಲ್ಲಾ ಪರಿಸರ ಅಧಿಕಾರಿ ಎಂ.ಎಸ್‌.ಮಹೇಶ್ವರಪ್ಪ ಹಾಗೂ ಹಾವೇರಿ ಜಿಲ್ಲೆ ಎಂ.ಡಿ.ಪಿ, ಎಪಿಎಂಸಿ ಸಹಾಯಕ ಎಂಜಿನಿಯರ್‌ ಕೃಷ್ಣ ಕೇಶಪ್ಪ ಅರೇರಾ.

ಬುಧವಾರ ದಾಳಿಗೊಳಗಾದ ಎಲ್ಲ ಅಧಿಕಾರಿಗಳ ಮನೆಗಳಲ್ಲಿಯೂ ಭಾರೀ ಪ್ರಮಾಣದ ನಗದು, ಚಿನ್ನ, ಬೆಳ್ಳಿ, ಆಸ್ತಿ ಪತ್ರಗಳು ಪತ್ತೆಯಾಗಿವೆ. ಒಬ್ಬ ಅರಣ್ಯ ಅಧಿಕಾರಿ ತಮ್ಮ ನಿವಾಸದಲ್ಲಿ ಗಂಧದ ತುಂಡುಗಳನ್ನೂ ಇರಿಸಿಕೊಂಡಿದ್ದರು. ಒಬ್ಬ ಅಧಿಕಾರಿ ಕಸದ ಬುಟ್ಟಿಯಲ್ಲಿ ಹಣ ಮುಚ್ಚಿಟ್ಟಿರುವುದೂ ಬೆಳಕಿಗೆ ಬಂದಿದೆ. ರಾತ್ರಿ 8 ಗಂಟೆ ವೇಳೆಗೆ  ದಾಳಿ ಮುಗಿದಿದ್ದು,  ಪತ್ತೆಯಾದ ನಗದು, ಚಿನ್ನಾಭರಣ, ಆಸ್ತಿಗಳ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿತ ಅಧಿಕಾರಿಗಳ ಮೇಲೆ ದಾಳಿ ಮುಂದುವರಿದಿದ್ದು, ಇದುವರೆಗಿನ ದಾಳಿಯಲ್ಲಿ ಆರೋಪಿತ ಅಧಿಕಾರಿಗಳಿಗೆ ಸೇರಿದ ಆಸ್ತಿಪಾಸ್ತಿ ಹಾಗೂ ಇತರ ಗಳಿಕೆ ಬಗ್ಗೆ ಮಾಹಿತಿ ಸಂಗ್ರಹಿಸಬೇಕಿದೆ ಎಂದು ಎಸಿಬಿ ತಿಳಿಸಿದೆ.

Advertisement

ಅರಣ್ಯಾಧಿಕಾರಿ ಮನೆಯಲ್ಲಿ ಗಂಧದ ತುಂಡುಗಳು
ಸಾಮಾಜಿಕ ಅರಣ್ಯ ಇಲಾಖೆಯ ಬಾದಾಮಿ ವಲಯ ಅರಣ್ಯಾಧಿಕಾರಿ ಪಿ.ಎಚ್‌. ಖೇಡಗಿ ನಿವಾಸದ ಮೇಲೆ ದಾಳಿ ವೇಳೆ 3 ಕೆಜಿ ಗಂಧದ ತುಂಡುಗಳು ಪತ್ತೆಯಾಗಿವೆ. ಜತೆಗೆ 7 ಲಕ್ಷ ರೂ.ಗಳಿಗೂ ಹೆಚ್ಚಿನ ನಗದು, ಅಪಾರ ಮೌಲ್ಯದ ಚಿನ್ನಾಭರಣಗಳೂ ಪತ್ತೆಯಾಗಿದೆ.

ಅಧಿಕಾರಿ ಮನೆಯಲ್ಲಿ ವಿದೇಶಿ ಬಾತ್‌ಟಬ್‌!
ವಿಜಯಪುರದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಗೋಪಿನಾಥಸಾ ಮುಲಜಿ ನಿವಾಸದಲ್ಲಿ  ಐಷಾರಾಮಿ ವಿದೇಶಿ ಬಾತ್‌ ಟಬ್‌ ಇರುವುದನ್ನು ಪತ್ತೆ ಹಚ್ಚಿದ್ದಾರೆ.

ಕಸದ ಬುಟ್ಟಿಯಲ್ಲೂ ನಗದು
ರಾಯಚೂರಿನ ಕೃಷ್ಣಭಾಗ್ಯ ಜಲನಿಗಮದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಅಶೋಕ್‌ ರೆಡ್ಡಿ ಪಾಟೀಲ್‌ ನಿವಾಸದಲ್ಲಿ ಕಸದ ಬುಟ್ಟಿಯಲ್ಲೂ ನಗದು ಸಿಕ್ಕಿದೆ.   ದೇವದುರ್ಗ ತಾಲೂಕಿನ ಅಮರಾಪುರ ಕ್ರಾಸ್‌ನಲ್ಲಿರುವ ಕೆಬಿಜೆಎನ್‌ಎಲ್‌ನ ಕಚೇರಿ ಹಾಗೂ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕದ್ರಾಪುರ ಗ್ರಾಮದ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.

ಹೋಂ ಥಿಯೇಟರ್‌ ನೋಡಿ  ದಂಗು
ಚಿಕ್ಕಮಗಳೂರಿನಲ್ಲಿ ಲೋಕೋಪ ಯೋಗಿ ಇಲಾಖೆಯ ಎಇಇ ರಂಗಪ್ಪ ಅವರ ಮನೆಯಲ್ಲಿದ್ದ ಹೋಂ ಥಿಯೇಟರ್‌ ನೋಡಿ ಅಧಿಕಾರಿಗಳು ಅಚ್ಚರಿಪಟ್ಟರು. ಬೃಹತ್‌ ಗಾತ್ರದ ಟಿವಿ. ಅದಕ್ಕೆ ಲೈಟಿಂಗ್ಸ್‌,  ಎಸಿ ಅಳವಡಿಸಲಾಗಿತ್ತು.  ಮನೆಯಿಂದ  100 ಗ್ರಾಂ ಚಿನ್ನದ ಗಟ್ಟಿ ಸಹಿತ 750 ಗ್ರಾಂ ಚಿನ್ನಾಭರಣ, 950 ಗ್ರಾಂ ಬೆಳ್ಳಿಯ ಆಭರಣಗಳು, 75 ಲಕ್ಷ ರೂ. ಮೌಲ್ಯದ 50/30 ಅಳತೆಯ ನಿವೇಶನದಲ್ಲಿ ನಿರ್ಮಿಸಿರುವ ಎರಡು ಮನೆಗಳು. 10 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು, 2 ಲಕ್ಷ ರೂ.  ವಶಪಡಿಸಿಕೊಳ್ಳಲಾಗಿದೆ. ಜತೆಗೆ ವಾಹನಗಳನ್ನೂ ವಶಪಡಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next