Advertisement

ರೇವಣ್ಣ ಸೇರಿ ಐವರ ವಿರುದ್ಧ ಎಸಿಬಿಗೆ ದೂರು

12:51 AM Sep 12, 2019 | Lakshmi GovindaRaju |

ಬೆಂಗಳೂರು: ವಾಹನ ಸಂಚಾರ ದಟ್ಟಣೆ ತಡೆಯಲು ಸಮ್ಮಿಶ್ರ ಸರ್ಕಾರ ಕೈಗೆತ್ತಿಕೊಂಡಿದ್ದ ಎಲಿವೇಟೆಡ್‌ ಕಾರಿಡಾರ್‌ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಸೇರಿ ಐವರ ವಿರುದ್ಧ ಬಿಜೆಪಿ ವಕ್ತಾರ ಎನ್‌.ಆರ್‌.ರಮೇಶ್‌, ಎಸಿಬಿ ಮತ್ತು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ.

Advertisement

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಬೆಂಗಳೂರು ನಗರಕ್ಕೆ ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಮೂಲಕ ಆಗಮಿಸುವ ವಾಹನಗಳ ಸಂಚಾರಕ್ಕೆ ಆರು ಪಥದ 87.87 ಕಿ.ಮೀ. ಉದ್ದದ ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡು, 17 ಸಾವಿರ ಕೋಟಿ ರೂ.ಗೆ ವಿವರವಾದ ಹಣಕಾಸು ವರದಿಗೂ (ಡಿಎಫ್ಆರ್‌) ಅನುಮೋದನೆ ಪಡೆದಿತ್ತು.

ಆದರೆ, ಈ ಯೋಜನೆಯ ವೆಚ್ಚವನ್ನು ಏಕಾಏಕಿ 26,960 ಕೋಟಿ ರೂ.ಗೆ ಏರಿಕೆ ಮಾಡಿದ್ದು, ಯೋಜನೆ ಅನುಷ್ಠಾನದ ಹೆಸರಿನಲ್ಲಿ ಸಾವಿರಾರು ಕೋಟಿ ರೂ. ಲೂಟಿ ಮಾಡಲಾಗಿದೆ ಎಂದು ಆರೋಪಿಸಿದರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್‌) ಈ ಕಾಮಗಾರಿಯ ಹೊಣೆ ಹೊತ್ತಿದ್ದು, ಒಂದು ಬಾರಿ ಡಿಎಫ್ಆರ್‌ಗೆ ಅನುಮೋದನೆ ದೊರೆತ ನಂತರ ಯಾವುದೇ ಕಾರಣಕ್ಕೂ ಬದಲಾಯಿಸುವಂತಿಲ್ಲ.

ಆದರೂ, ಯೋಜನಾ ವೆಚ್ಚದಲ್ಲಿ 9,960 ಕೋಟಿ ರೂ. ಏರಿಕೆ ಮಾಡಿರುವುದು ಕಾನೂನು ಬಾಹಿರವಾಗಿದೆ. ಆದ್ದರಿಂದ ಮಾಜಿ ಸಚಿವ ಎಚ್‌.ಡಿ.ರೇವಣ್ಣ, ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಜನೀಶ್‌ ಗೋಯೆಲ್‌, ಕಾರ್ಯದರ್ಶಿ ಕೃಷ್ಣಾರೆಡ್ಡಿ, ಹಣಕಾಸು ಇಲಾಖೆ ಕಾರ್ಯದರ್ಶಿ ಪಿ.ಸಿ.ಜಾಫ‌ರ್‌, ಕೆಆರ್‌ಡಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್‌.ಶಿವಕುಮಾರ್‌ ವಿರುದ್ಧ ಎಸಿಬಿ, ಲೋಕಾಯುಕ್ತ, ಬಿಎಂಟಿಎಫ್ನಲ್ಲಿ ವಂಚನೆ, ಅಧಿಕಾರ ದುರುಪಯೋಗ, ಭ್ರಷ್ಟಾಚಾರ, ಸಾರ್ವಜನಿಕರ ಹಣ ಲೂಟಿ ಸಂಚು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು.

ಹೆಬ್ಟಾಳದ ಬ್ಯಾಪ್ಟಿಸ್ಟ್‌ ಆಸ್ಪತ್ರೆ, ಕಂಟೋನ್‌ಮೆಂಟ್‌, ಹೊಸೂರು ರಸ್ತೆ, ಸಿಲ್ಕ್ ಬೋರ್ಡ್‌ ಜಂಕ್ಷನ್‌ ಪ್ರದೇಶಗಳ ಹೊರವಲಯ ಹೆದ್ದಾರಿಗಳೊಂದಿಗೆ ಸಂಪರ್ಕ ಕಲ್ಪಿಸಲು 6,855 ಕೋಟಿ ರೂ. ವೆಚ್ಚದ ಒಂದನೇ ಹಂತದ ಯೋಜನೆಯ ಮೂರು ಪ್ಯಾಕೇಜ್‌ಗಳಿಗೆ ಟೆಂಡರ್‌ ಆಹ್ವಾನಿಸಿ, ಒಂದೇ ಕಂಪನಿಗೆ ಟೆಂಡರ್‌ ಆಗುವಂತೆ ಸಂಚು ನಡೆಸಲಾಗಿದೆ. ಇದರಿಂದ ಅರ್ಹ ಬಿಡ್‌ದಾರರಿಗೆ ಮೋಸವಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ನೀಡಲಾಗಿದೆ ಎಂದರು.

Advertisement

ರಾಜ್ಯ ಸರ್ಕಾರ 87.87 ಕಿ.ಮೀ. ಉದ್ದದ ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣದ ಕ್ರಿಯಾಯೋಜನೆಯನ್ನು ಮತ್ತೂಮ್ಮೆ ತಯಾರಿಸಬೇಕು. ಯೋಜನೆಗೆ 9,960 ಕೋಟಿ ರೂ. ಏರಿಕೆ ಮಾಡಿ ಅನುಮೋದನೆ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next