ಬೆಂಗಳೂರು: ಗ್ರಾಹಕರ ಹಣವನ್ನು ಅಕ್ರಮ ವರ್ಗಾವಣೆ ಮತ್ತು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ಬಸವನಗುಡಿಯಲ್ಲಿರುವ ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಬ್ಯಾಂಕ್ ನ ವಿವಿಧ ಶಾಖೆ ಹಾಗೂ ಅಧ್ಯಕ್ಷರು, ಮಾಜಿ ಸಿಇಒ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಸಹಕಾರ ಬ್ಯಾಂಕ್‌ನ ಅಧ್ಯಕ್ಷರು ಮತ್ತು ಕೆಲವು ಸದಸ್ಯರು ಹಾಗೂ ಕಚೇರಿಯ ಸಿಬ್ಬಂದಿ ಬ್ಯಾಂಕಿಗೆ ಹೂಡಿಕೆ ಮಾಡಿರುವ ಗ್ರಾಹಕರ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿ ಕೊಂಡು ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಸಾರ್ವಜ ನಿಕರು ಎಸಿಬಿಗೆ ದೂರು ನೀಡಿದ್ದರು. ಈ ಮಧ್ಯೆ ಸಹಕಾರ ಬ್ಯಾಂಕ್‌ನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ರಿಜಿಸ್ಟ್ರಾರ್ ಸಹಕಾರ ಇಲಾಖೆಯವರ ವರದಿ ಹಾಗೂ ಆರ್‌ಬಿಐನ ಅಧಿಕಾರಿಗಳು ನಡೆಸಿರುವ ವಿಚಾರಣಾ ವರದಿಯಲ್ಲಿ ಬ್ಯಾಂಕ್‌ನಲ್ಲಿ ಕೆಲವು ಅವ್ಯವಹಾರ ನಡೆದಿರುವುದು ಕಂಡು ಬಂದಿತ್ತು.
ಬ್ಯಾಂಕ್‌ಗೆ ಹೂಡಿಕೆ ಮಾಡಿರುವ ಗ್ರಾಹಕರ ಹಣವನ್ನು ಬ್ಯಾಂಕಿನ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡು ಸುಮಾರು 1,400 ಕೋಟಿ ರೂ. ಅವ್ಯವಹಾರ ಮಾಡಿದ್ದಾರೆ. ಆರ್‌ಬಿಐ ನಿಯಮ ಗಳಿಗೆ ವಿರುದ್ಧವಾಗಿ ಬ್ಯಾಂಕಿನ ಕೆಲವು ಅಧಿಕಾರಿಗಳು-ಸಿಬ್ಬಂದಿ ಕೃತಕ (ನಕಲಿ) ಠೇವಣಿಗಳನ್ನು ಸೃಷ್ಟಿಸಿ 150 ಕೋಟಿ ರೂ. ಸಾಲವನ್ನು, 60 ಕಾಲ್ಪನಿಕ ಗ್ರಾಹಕರಿಗೆ ಮಂಜೂರು ಮಾಡಿದ್ದಾರೆ.
ಖಾತೆ ತೆರೆಯುವಾಗ ನೀಡಿದ ಬ್ರೌಷರ್‌ನಲ್ಲಿ ಎನ್‌ಪಿಎ ಶೇ.1 ಕ್ಕಿಂತ ಕಡಿಮೆ ಇದ್ದು, ನಿರಂತರವಾಗಿ ಶೇ.15 ರಿಂದ 16 ರಷ್ಟು ಎನ್‌ಪಿಎ ಇರುವುದಾಗಿ ತಿಳಿಸಿದ್ದಾರೆ. ಆದರೆ, ಸಹಕಾರ ಸಂಘಗಳ ವರದಿಯಿಂದ ಬ್ಯಾಂಕ್ ನ ಎನ್‌ಪಿಎ ಶೇ.25ರಿಂದ30ರಷ್ಟು ಇರುವುದು ಕಂಡು ಬಂದಿದೆ ಎಂದು ಎಸಿಬಿ ತಿಳಿಸಿದೆ.
ಎಸಿಬಿ ದಾಳಿ: ಬಸವನಗುಡಿಯ ನೆಟ್ಟಕಲ್ಲಪ್ಪ ವೃತ್ತದಲ್ಲಿರುವ ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಶಾಖಾ ಕಚೇರಿ, ಕೇಂದ್ರ ಕಚೇರಿ, ಶಂಕರಪುರದಲ್ಲಿನ ಶ್ರೀಗುರು ಸಾರ್ವಭೌಮ ಸೌಹಾರ್ದ ಸಹಕಾರ ಸಂಘದ ಕಚೇರಿ, ಬ್ಯಾಂಕಿನ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಚಿಕ್ಕಲ್ಲಸಂದ್ರದ ನಿವಾಸಿ ವಾಸುದೇವಮಯ್ಯ, ಬ್ಯಾಂಕ್‌ನ ಅಧ್ಯಕ್ಷರಾದ ಡಾ ಕೆ.ರಾಮಕೃಷ್ಣ, ಅವರ ಬಸವನಗುಡಿಯಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಕೆಲವೊಂದು ದಾಖಲೆ ಗಳನ್ನು ವಶಪಡಿಸಿಕೊಂಡು ಪರಿಶೀಲಿಸಲಾಗುತ್ತಿದೆ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದರು.