Advertisement

ಸುಳ್ಯ: ಸಬ್‌ ರಿಜಿಸ್ಟ್ರಾರ್‌ ಕಚೇರಿಗೆ ಎಸಿಬಿ ದಾಳಿ

09:54 AM Jun 20, 2019 | Team Udayavani |

ಸುಳ್ಯ: ಅಧಿಕಾರಿ ಓರ್ವರು ಲಂಚ ಪಡೆದ ವಿಡಿಯೋ ವೈರಲ್‌ ಆಗಿದ್ದ ಸುಳ್ಯ ಸಬ್‌ ರಿಜಿಸ್ಟ್ರಾರ್‌ ಕಚೇರಿಗೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬುಧವಾರ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿ ನಗದು ಮತ್ತು ದಾಖಲೆ ಪತ್ರ ವಶಕ್ಕೆ ಪಡೆದುಕೊಂಡಿದೆ.

Advertisement

ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 8 ಗಂಟೆ ತನಕ ವಿವಿಧ ದಾಖಲೆ ಪತ್ರಗಳನ್ನು ಪರಿಶೀಲಿಸಿತ್ತು. ಈ ಸಂದರ್ಭ ಕಚೇರಿಯಲ್ಲಿ ದೊರೆತ 13,850 ರೂ. ಹಾಗೂ ವಿವಿಧ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಉಳಿದ ದಾಖಲೆ, ಕಡತ ಪರಿಶೀಲನೆ ಪ್ರಗತಿಯಲ್ಲಿದೆ.

ಕಚೇರಿ ಕಾರ್ಯನಿರ್ವಹಣೆ ಬಗ್ಗೆ ಪಂಜದ ಗುರುಪ್ರಸಾದ್‌ ಅವರು ಎಸಿಬಿಗೆ ನೀಡಿದ ದೂರಿನ ಅನ್ವಯ ಎಫ್‌ಐಆರ್‌ ದಾಖಲಿಸಿಕೊಂಡು ನ್ಯಾಯಾಲಯದಿಂದ ಸರ್ಚ್‌ ವಾರೆಂಟ್‌ ಪಡೆದು ಭ್ರಷ್ಟಾಚಾರ ನಿಗ್ರಹ ದಳದ ಎಸ್‌.ಪಿ ಉಮಾಪ್ರಶಾಂತ್‌ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಯೋಗೀಶ್‌ ಕುಮಾರ್‌, ಮೋಹನ್‌ ನೇತೃತ್ವದ ತಂಡ ಮಧ್ಯಾಹ್ನ ದಾಳಿ ನಡೆಸಿತ್ತು.

ನಗದು, ದಾಖಲೆ ವಶ
ಲಂಚ ಪ್ರಕರಣ ಮತ್ತು ದೂರಿನ ಆಧಾರದಲ್ಲಿ ಕಚೇರಿ ಕಡತ ದಾಖಲೆ ಪತ್ರವನ್ನು ರಾತ್ರಿ ತನಕ ಪರಿಶೀಲನೆ ನಡೆಯಿತು. ಈ ಸಂದರ್ಭ ಕಚೇರಿಯಲ್ಲಿ ನಗದು ಪತ್ತೆಯಾಗಿದ್ದು, ಇದರ ಮೂಲದ ಬಗ್ಗೆ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದಾರೆ. ಕೆಲ ದಿನಗಳ ಹಿಂದೆ ಕಚೇರಿ ಕೆಲಸಕ್ಕೆ ಬಂದಿದ್ದ ಗ್ರಾಹಕನಿಂದ ಅಧಿಕಾರಿ ಲಂಚ ನೀಡುವಂತೆ ಪೀಡಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿ ಅನಂತರ ಅಧಿಕಾರಿಯನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿತ್ತು. ಇದರ ಬೆನ್ನಲ್ಲೇ ಎಸಿಬಿ ದಾಳಿ ನಡೆದಿದೆ.

ಎಸಿಬಿ ತಂಡದಲ್ಲಿ ರಾಧಾಕೃಷ್ಣ ಕೆ., ಹರಿಪ್ರಸಾದ್‌, ಉಮೇಶ್‌, ರಾಧಾಕೃಷ್ಣ ಡಿ.ಎ., ಪ್ರಶಾಂತ್‌, ವೈಶಾಲಿ, ರಾಕೇಶ್‌, ಗಣೇಶ್‌ ಮೊದಲಾದವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next