Advertisement

ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ

05:29 PM Apr 11, 2018 | Team Udayavani |

ಧಾರವಾಡ: ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಧಾರವಾಡ ವಲಯದ ಎಸಿಎಫ್‌ ಪಿ.ಎಸ್‌. ವರೂರ ಅವರ ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆಗಳ ಮೇಲೆ ಏಕಕಾಲದಲ್ಲಿ ಮಂಗಳವಾರ ಬೆಳಗ್ಗೆ ಎಸಿಬಿ ದಾಳಿ ನಡೆಸಿದೆ. ಇಲ್ಲಿಯ ವಿನಾಯಕ ನಗರದಲ್ಲಿರುವ ವರೂರ ಅವರ ವಿಂದ್ಯಗಿರಿ ನಿವಾಸ ಮತ್ತು ಕಚೇರಿ, ನವನಗರದಲ್ಲಿರುವ ಸಹೋದರ ಮತ್ತು ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದಲ್ಲಿನ ಅಳಿಯನ ನಿವಾಸದ ಮೇಲೂ ಎಸಿಬಿ ತಂಡಗಳು ದಾಳಿ ಮಾಡಿವೆ.

Advertisement

ದಾಳಿ ವೇಳೆ ವರೂರ ಅವರ ಪತ್ನಿ ಪದ್ಮಾ ಹೆಸರಿನಲ್ಲಿ ಧಾರವಾಡದಲ್ಲಿ ಒಂದು ಪ್ಲಾಟ್‌ ಮತ್ತು ಮುರಕಟ್ಟಿ ಗ್ರಾಮದಲ್ಲಿ ಒಂದೂವರೆ ಎಕರೆ ಹೊಲ, ಅಳಿಯನ ಹೆಸರಿನಲ್ಲಿ ಧಾರವಾಡದ ಕಾಲೋನಿಯೊಂದರಲ್ಲಿ ಅಕ್ರಮ ಪ್ಲಾಟ್‌ ಹೊಂದಿರುವುದು ಗೊತ್ತಾಗಿದೆ. ನವನಗರದ ಮನೆಯಲ್ಲಿ ಯಾವುದೇ ದಾಖಲೆಗಳು ಸಿಕ್ಕಿಲ್ಲ. ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ಮಾತ್ರ ಸ್ವಂತ ಜಮೀನು ಇದೆ. ದಾಳಿಯಲ್ಲಿ ಸಿಕ್ಕ ಎಲ್ಲಾ ಅಕ್ರಮ ಆಸ್ತಿ ಮತ್ತು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದು ತನಿಖೆ ನಂತರ ನಿಜಾಂಶ ಹೊರಬೀಳಲಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್‌ಪಿ ವಿಜಯಕುಮಾರ್‌ ಬಿಸರಳ್ಳಿ ತಿಳಿಸಿದ್ದಾರೆ. ಇನ್‌ಸ್ಪೆಕ್ಟರ್‌ ಪ್ರಮೋದ ಯಲಿಗಾರ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.

ಹೆಸ್ಕಾಂ ಎಡಬ್ಲ್ಯುಇ ನಿವಾಸ-ಕಚೇರಿಯಲ್ಲಿ ಪರಿಶೀಲನೆ 
ಹುಬ್ಬಳ್ಳಿ: ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತದ (ಕೆಪಿಟಿಸಿಎಲ್‌) ಹುಬ್ಬಳ್ಳಿಯ ಸಹಾಯಕ ಕಾರ್ಯಪಾಲಕ ಅಭಿಯಂತ (ಎಡಬ್ಲ್ಯುಇ) ಮಲ್ಲಿಕಾರ್ಜುನ ಎನ್‌. ಸವಣೂರ ಅವರ ನಿವಾಸ, ಅಂಗಡಿ ಹಾಗೂ ಕಚೇರಿ ಮೇಲೆ ಮಂಗಳವಾರ ಬೆಳಗ್ಗೆ ಎಸಿಬಿ ತಂಡ ಏಕಕಾಲಕ್ಕೆ ದಾಳಿ ನಡೆಸಿತು.

ಇಲ್ಲಿಯ ಶಿರೂರ ಪಾರ್ಕ್‌ನಲ್ಲಿರುವ ಅವರ ವಾಸದ ಮನೆ ಸೇರಿ ಮೂರು ನಿವಾಸ, ಅಂಗಡಿ ಹಾಗೂ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ನೇತೃತ್ವದ ತಂಡ ದಾಳಿ ಮಾಡಿದೆ. ದಾಳಿಯ ವೇಳೆ ಅಧಿಕಾರಿಗಳು ಕೆಲವು ಮಹತ್ವದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದು, ಇವರು ಹೊಂದಿರುವ ಆಸ್ತಿ-ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಹಾಗೂ ದಾಖಲೆಗಳ ಪರಿಶೀಲನಾ ಕಾರ್ಯ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next