ವರದಿ: ಶ್ರೀಶೈಲ ಕೆ. ಬಿರಾದಾರ
ಬಾಗಲಕೋಟೆ: ಪಕ್ಕದ ವಿಶಾಲವಾದ ಪ್ರದೇಶದಲ್ಲಿ ಹಿನ್ನೀರು. 15 ಕಿ.ಮೀ ದೂರದಲ್ಲಿ ದೇಶದ 2ನೇ ಅತಿದೊಡ್ಡ ಜಲಾಶಯ. ಆದರೂ ಇಲ್ಲಿನ ರೈತರ ಭೂಮಿಗೆ ನೀರಿಲ್ಲ. ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಕೆಲವೊಮ್ಮೆ ಪರಿತಪಿಸುವ ದಿನಗಳು. ಇಂತಹ ಸಂಕಷ್ಟ ಎದುರಿಸುತ್ತಿದ್ದ ತಾಲೂಕಿನ ರೈತರು, ಹಲವು ಗ್ರಾಮಗಳ ಮೊಗದಲ್ಲಿ ಮಂದಹಾಸ ಮೂಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಅವರ ಭೂಮಿಗೆ ನೀರು ಹರಿಯಲಿದೆ.
ಹೌದು, ಇದು ತಾಲೂಕಿನ ಅಚನೂರ ಹಾಗೂ ಸುತ್ತಲಿನ ವಿವಿಧ ಗ್ರಾಮಗಳ ರೈತರ ಮಂದಹಾಸದ ಕಥೆ. ಘಟಪ್ರಭಾ ನದಿ ಸಮೀಪ ಹಾಗೂ ಆಲಮಟ್ಟಿ ಹಿನ್ನೀರು ಪ್ರದೇಶದಲ್ಲಿ ಅಣತಿ ದೂರದಲ್ಲಿರುವ ಈ ಗ್ರಾಮದ ಸುತ್ತಲಿನ ಪ್ರದೇಶ, ನೀರಾವರಿಯಿಂದ ವಂಚಿತವಾಗಿತ್ತು. ಇದಕ್ಕಾಗಿ ಹಲವಾರು ವರ್ಷಗಳಿಂದ ಹೋರಾಟ, ಸಭೆ, ಒತ್ತಾಯ ಎಲ್ಲವೂ ನಡೆದಿದ್ದವು. ಅದಕ್ಕಾಗಿ ವಿಶೇಷ ಯೋಜನೆ ಕೂಡ ರೂಪಿಸಲಾಗಿತ್ತು. ಆದರೆ, ಕಾಲ ಕೂಡಿ ಬಂದಿರಲಿಲ್ಲ. ರೈತರ ಭೂಮಿಗೆ ನೀರು ಹರಿದಿರಲಿಲ್ಲ. ಕಾರಜೋಳರಿಗೆ ಜಲ ಸಂಪನ್ಮೂಲ ವರ !: ಜಿಲ್ಲೆಯ ಮುಧೋಳ ಕ್ಷೇತ್ರ ಪ್ರತಿನಿಧಿಸುವ ಗೋವಿಂದ ಕಾರಜೋಳರು ಜಲಸಂಪನ್ಮೂಲ ಸಚಿವರಾದ ಬಳಿಕ ಅಚನೂರ ಏತ ನೀರಾವರಿ ಯೋಜನೆಗೆ ವರವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ಸುಮಾರು ನಾಲ್ಕೈದು ವರ್ಷಗಳಿಂದ ನಿರಂತರವಾಗಿ ಕೇಳಿ ಬರುತ್ತಿದ್ದ ಅಚನೂರ ಏತ ನೀರಾವರಿ ಯೋಜನೆಗೆ ಮಂಜೂರಾತಿ ಕೊಡಬೇಕೆಂಬ ಕೂಗಿಗೆ ಈಗ ಮಾನ್ಯತೆಯೂ ಸಿಕ್ಕಿದೆ. ಇದರಲ್ಲಿ ಬಾಗಲಕೋಟೆ ಶಾಸಕ ಡಾ|ವೀರಣ್ಣ ಚರಂತಿಮಠ ಅವರ ಗಂಭೀರ ಪ್ರಯತ್ನ, ಕಾರಜೋಳರಿಗೆ ಜಲ ಸಂಪನ್ಮೂಲ ಖಾತೆ ಸಿಕ್ಕ ವರದಾನ ಹಾಗೂ ಈ ಯೋಜನೆಗಾಗಿಯೇ ಹುಟ್ಟಿಕೊಂಡಿದ್ದ ಅಚನೂರ-ಭಗವತಿ ಏತ ನೀರಾವರಿ ಯೋಜನೆ ಸಮಿತಿಯ ನಿರಂತರ ಪ್ರಯತ್ನದ ಫಲವೇ ಇದೀಗ ರಾಜ್ಯ ಸರ್ಕಾರ, ಈ ಯೋಜನೆಗೆ ಮಂಜೂರಾತಿ ನೀಡಿದೆ.
ಯೋಜನೆಗೆ ಅನುಮೋದನೆ: ತಾಲೂಕಿನ ಅಚನೂರ ಹಾಗೂ ಸುತ್ತಲಿನ 13 ಗ್ರಾಮಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಅಚನೂರ ಏತ ನೀರಾವರಿ ಯೋಜನೆಗೆ ಸರಕಾರ ಅನುಮೋದನೆ ನೀಡಿದೆ. ನದಿ ಪಕ್ಕದಲ್ಲಿ ಇದ್ದರೂ ಶತಮಾನಗಳಿಂದ ನೀರಾವರಿ ವಂಚಿತವಾಗಿದ್ದ ಹದಿಮೂರು ಗ್ರಾಮಗಳಿಗೆ ಇದರಿಂದ ಅನುಕೂಲವಾಗಲಿದೆ. ಕಳೆದ ಮೂರು ವರ್ಷಗಳಿಂದ ತೀವ್ರಗೊಂಡಿದ್ದ ರೈತರ ಪ್ರತಿಭಟನೆಗೆ ಫಲವೂ ಸಿಕ್ಕಿದೆ. ಈ ಯೋಜನೆಯಿಂದ ಅಚನೂರ ಹಾಗೂ ಸುತ್ತಲಿನ 13 ಗ್ರಾಮಗಳ 20,880 ಎಕರೆ ಭೂಮಿಗೆ ನೀರಾವರಿ ಸೌಲಭ್ಯ ದೊರೆಯುವ ಜತೆಗೆ ಸುಮಾರು ನಾಲ್ಕು ಕೆರೆಗಳಿಗೆ ನೀರು ತುಂಬಿಸುವ ಯೋಜನೆಯೂ ಇದೆ. ಅಂದುಕೊಂಡಂತೆ ಎಲ್ಲವೂ ನಡೆದು ಯೋಜನೆ ಅನುಷ್ಠಾನಗೊಂಡಲ್ಲಿ 14 ಗ್ರಾಮಗಳಿಗೆ ನೀರಾವರಿ, 4 ಕೆರೆಗಳಿಗೆ ನೀರು ಹರಿಯಲಿದೆ.
ಶತಮಾನದಿಂದ ನೀರಾವರಿ ವಂಚಿತ: ಘಟಪ್ರಭಾ ನದಿ ಪಕ್ಕದಲ್ಲೇ ಮೈದುಂಬಿ ಹರಿಯುತ್ತಿದ್ದರೂ ನದಿ ದಂಡೆಯ ಸುಮಾರು 14 ಗ್ರಾಮಗಳಿಗೆ ನೀರಾವರಿ ಸೌಲಭ್ಯ ಸಿಕ್ಕಿರಲಿಲ್ಲ. ಸುಮಾರು ಮೂರು ದಶಕಗಳಿಂದ ನೀರಾವರಿ ಯೋಜನೆ ಕಲ್ಪಿಸುವಂತೆ ಈ ಭಾಗದ ರೈತರು ಒತ್ತಾಯಿಸುತ್ತಲೇ ಇದ್ದರು. ಕಳೆದ ಮೂರು ವರ್ಷಗಳಿಂದ ಅಚನೂರು-ಭಗವತಿ ಏತ ನೀರಾವರಿ ಹೋರಾಟ ಸಮಿತಿ ರಚಿಸಿಕೊಂಡು ಪ್ರತಿಭಟನೆ ನಡೆಸಿದ್ದರು. ಈ ಹೋರಾಟಕ್ಕೆ ಕೂಡಲಸಂಗಮದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಕೂಡ ಬಲ ನೀಡಿದ್ದರು. 14 ಹಳ್ಳಿಗಳ ಒಣ ಭೂಮಿಗೆ ನೀರಾವರಿ ಕಲ್ಪಿಸುವ ಯೋಜನೆಗೆ ಕೊನೆಗೂ ರಾಜ್ಯ ಸರ್ಕಾರ ಅಸ್ತು ಎಂದಿದೆ. ಈ ಯೋಜನೆಗಾಗಿ 346 ಕೋಟಿ ರೂ. ಗೆ ಅನುಮೋದನೆ ನೀಡಿದ್ದು, ಮುಂದಿನ 3 ಮೂರು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ.