ಹೊಸಪೇಟೆ: ಜಾನಪದ ಅಕಾಡೆಮಿ ವತಿಯಿಂದ 2021ನೇ ಸಾಲಿನ ರಾಜ್ಯಮಟ್ಟದ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ, ಏಪ್ರಿಲ್ 9 ಮತ್ತು 10ರಂದು ಹೊಸಪೇಟೆಯ ಸಿದ್ದಿಪ್ರಿಯಾ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಜಾನಪದ ಅಕಾಡೆಮಿ ಮತ್ತು ವಿಜಯನಗರ ಜಿಲ್ಲಾಡಳಿತದ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಏ. 9ರಂದು ಜಾನಪದ ಸಂಭ್ರಮ, ಏ. 10ರಂದು ಜಾನಪದ ಗೀತಗಾಯನ ನಡೆಯಲಿದೆ. ರಾಜ್ಯದ 30 ಜಿಲ್ಲೆಯ ಜಾನಪದ ಕಲಾವಿದರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ವಿಜಯನಗರ ಜಿಲ್ಲೆಯ ಕಲಾವಿದರಿಗೆ ಪ್ರಶಸ್ತಿ ನೀಡುವುದರ ಬಗ್ಗೆ ಚರ್ಚೆ ನಡೆದಿದೆ. ಇನ್ನೂ ಇಬ್ಬರು ಜಾನಪದ ತಜ್ಞರಿಗೂ ಪ್ರಶಸ್ತಿ ನೀಡಲಾಗುವುದು. ಜಾನಪದ ಕುರಿತು ಪುಸ್ತಕಗಳನ್ನು ಹೊರ ತಂದ ಮೂವರಿಗೆ ಪ್ರಶಸ್ತಿ ವಿತರಿಸಲಾಗುವುದು. ಕಲಾವಿದರಿಗೆ ಮತ್ತು ಪುಸ್ತಕ ಹೊರ ತಂದವರಿಗೆ ತಲಾ 25 ಸಾವಿರ ರು. ಪುರಸ್ಕಾರ ನೀಡಲಾಗುವುದು. ಇನ್ನೂ ಜಾನಪದ ತಜ್ಞರಿಗೆ ತಲಾ 50 ಸಾವಿರ ರೂ.ಪುರಸ್ಕಾರ ನೀಡಲಾಗುವುದು ಎಂದರು.
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು ಭಾಗವಹಿಸಲಿದ್ದಾರೆ. ರಾಜ್ಯದ ನಾನಾ ಕಡೆಯಿಂದ ಕಲಾವಿದರು ಆಗಮಿಸಲಿದ್ದಾರೆ.
ಇನ್ನೂ ಗೀತಗಾಯನದಲ್ಲಿ ಕಲ್ಯಾಣ ಕರ್ನಾಟಕದ ಕಲಾವಿದರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದರು. ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸದೇ ರಾಜ್ಯದ ಜಿಲ್ಲೆಗಳಲ್ಲಿ ಜಾನಪದ ಅಕಾಡೆಮಿ ಪ್ರಶಸ್ತಿ ಸಮಾರಂಭ ನಡೆಸುವ ಉದ್ದೇಶದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಜಯನಗರದಲ್ಲಿ ಜಾನಪದ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಸಲು ಅಕಾಡೆಮಿಯ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ. ಹೊಸ ಜಿಲ್ಲೆಯಲ್ಲಿ ಜಾನಪದ ಸೊಗಡನ್ನು ಪಸರಿಸಲು ಕಾರ್ಯಕ್ರಮ ಅನುಕೂಲವಾಗಲಿದೆ. ಸಚಿವರಾದ ಆನಂದ್ ಸಿಂಗ್, ಶಶಿಕಲಾ ಜೊಲ್ಲೆ, ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಸಹಕಾರ ನೀಡುವುದಾಗಿ ವಾಗ್ಧಾನ ನೀಡಿದ್ದಾರೆ ಎಂದರು.
ಈ ಹಿಂದೆ ಚಾಮರಾಜನಗರದಲ್ಲಿ ಜಾನಪದ ಅಕಾಡೆಮಿ ಪ್ರಶಸ್ತಿ ಸಮಾರಂಭ ನಡೆದಾಗ ಕೆಲವರು ತಮಗೆ ಒಳ್ಳೆಯದು ಆಗಲ್ಲ ಎಂದಿದ್ದರು. ಆದರೆ, ನಾನು ಅಲ್ಲಿ ಕಾರ್ಯಕ್ರಮ ನಡೆಸಿದ ಸ್ವಲ್ಪ ದಿನದಲ್ಲೇ ನನಗೆ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿತು. ಜಾನಪದ ಸೊಗಡನ್ನು ಗ್ರಾಮೀಣ ಭಾಗದಲ್ಲಿ ಪಸರಿಸುವ ಕಾರ್ಯವನ್ನು ಅಕಾಡೆಮಿ ಮಾಡುತ್ತಿದೆ ಎಂದರು. ಜಾನಪದ ಅಕಾಡೆಮಿ ರಜಿಸ್ಟ್ರಾರ್ ನಮ್ರತಾ ಇದ್ದರು.