Advertisement

ಅಕೇಶಿಯಾ ಬೆಳೆಯುವುದು ಬೇಡ: ಸಚಿವ ಉಮೇಶ್‌ ಕತ್ತಿ

12:13 PM May 09, 2022 | Team Udayavani |

ಉಡುಪಿ: ಕರಾವಳಿ ಭಾಗದಲ್ಲಿ ಮಳೆಯು ಹೆಚ್ಚಾಗಿ ಬರುವುದರಿಂದ ಗಿಡಮರಗಳನ್ನು ಬೆಳೆಸಲು ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಉಪಯುಕ್ತವಲ್ಲದ ಅಕೇಶಿಯಾ ಗಿಡಗಳನ್ನು ಕಡಿಮೆ ಮಾಡುವುದರ ಜತೆಗೆ ಇತರೆ ಗಿಡಮರಗಳನ್ನು ಬೆಳಸಲು ಮುಂದಾಗಬೇಕು ಎಂದು ಅರಣ್ಯ ಸಚಿವ ಉಮೇಶ್‌ ಕತ್ತಿ ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್‌ ಹಾಲ್‌ನಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸೋಲಾರ್‌ ವಿದ್ಯುತ್‌ ಬೇಲಿ ಉಪಯೋಗವಾಗಲಿ

ಕಾಡುಪ್ರಾಣಿಗಳ ವಲಸೆ ತಡೆಯಲು ಹಾಗೂ ಜನ ಜಾನುವಾರುಗಳು ಅರಣ್ಯಕ್ಕೆ ಅತಿಕ್ರಮ ಪ್ರವೇಶ ಮಾಡುವುದನ್ನು ತಡೆಯಲು ನಿರ್ಮಿಸಿರುವ ಸೋಲಾರ್‌ ವಿದ್ಯುತ್‌ ಬೇಲಿಯ ಉಪಯೋಗ ಕಂಡುಬರುತ್ತಿಲ್ಲ. ಇದಕ್ಕೆ ಪರ್ಯಯ ವ್ಯವಸ್ಥೆ ಕಂಡುಕೊಳ್ಳಬೇಕು. ಈಗಾಗಲೇ ಅಳವಡಿಸಿರುವ ಸೋಲರ್‌ ತಂತಿ ಬೇಲಿಗಳ ನಿರ್ವಹಣೆಯನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು. ಅರಣ್ಯ ವ್ಯಾಪ್ತಿಯ ಗ್ರಾಮಗಳಿಗೆ ಸಂಚಾರಕ್ಕೆ ಹಾಲಿ ಇರುವ ರಸ್ತೆಗಳ ಕಾಮಗಾರಿಗಳನ್ನು ಕೈಗೊಳ್ಳಲು ಕಾನೂನಿನ ಅಡಿಯಲ್ಲಿ ಅವಕಾಶವಿದ್ದಲ್ಲಿ ಕೂಡಲೇ ಅವುಗಳ ನಿರ್ಮಾಣಕ್ಕೆ ಅನುಮತಿ ಕೊಡಬೇಕು ಎಂದರು.

ಇ -ಕೆವೈಸಿ ನೋಂದಣಿ ಮಾಡಿ

Advertisement

ಜಿಲ್ಲೆಯ ಎಲ್ಲ ಪಡಿತರ ಚೀಟಿಗಳ ಇ -ಕೆವೈಸಿಯನ್ನು ಸಂಪೂರ್ಣವಾಗಿ ನೋಂದಣಿ ಮಾಡುವಂತೆ ಸೂಚನೆ ನೀಡಿದ ಅವರು, ಒಂದೊಮ್ಮೆ ನೋಂದಣಿ ಮಾಡದಿರುವ ಸದಸ್ಯರ ಹೆಸರನ್ನು ಪಡಿತರ ಚೀಟಿಯಲ್ಲಿ ತೆಗೆದುಹಾಕಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಕೇಂದ್ರ ಸರಕಾರಕ್ಕೆ ಪತ್ರ

ಬೆಂಬಲ ಬೆಲೆ ಯೋಜನೆಯಡಿ ಸ್ಥಳೀಯ ರೈತರು ಬೆಳಯುವ ಭತ್ತ ಖರೀದಿಯನ್ನು ಸೆಪ್ಟಂಬರ್‌, ಅಕ್ಟೋಬರ್‌ ಮಾಹೆಗಳಲ್ಲಿ ಖರೀದಿ ಮಾಡಬೇಕೆಂದು ಈ ಭಾಗದ ರೈತರ ಬೇಡಿಕೆಯಾಗಿದೆ. ಈ ಬಗ್ಗೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯುವ ಜತೆಗೆ ಇತರೆ ಪರ್ಯಾಯ ಮಾರ್ಗಗಳ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲು ಮುಂದಾಗಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಅಂಗಾರ, ಶಾಸಕ ಕೆ.ರಘುಪತಿ ಭಟ್‌, ಅಪರ ಜಿಲ್ಲಾಧಿಕಾರಿ ವೀಣಾ, ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್‌ ನೇಟಾಲ್ಕರ್‌, ಅರಣ್ಯ ಇಲಾಖೆ ಅಧಿಕಾರಿಗಳು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಳಸಂತೆಯಲ್ಲಿ ಪಡಿತರ: ಕಾನೂನು ಕ್ರಮ

ಜಿಲ್ಲೆಯಲ್ಲಿ 28,593 ಅಂತ್ಯೋದಯ ಪಡಿತರ ಚೀಟಿಗಳಿದ್ದು, 1,50,875 ಅಂತ್ಯೋದಯ ಸದಸ್ಯರು ಪಡಿತರ ಪಡೆಯುತ್ತಿದ್ದಾರೆ. 1,55,615 ಆದ್ಯತಾ ಪಡಿತರ ಚೀಟಿಗಳಿದ್ದು, 6,34,366 ಸದಸ್ಯರು ಇದರ ಲಾಭ ಪಡೆ ಯುತ್ತಿದ್ದಾರೆ ಎಂದ ಅವರು ಪಡಿತರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡದಂತೆ ಎಚ್ಚರ ವಹಿಸಬೇಕು. ಒಂದೊಮ್ಮೆ ಸಿಕ್ಕಿಬಿದ್ದಲ್ಲಿ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next