ಶಿರಸಿ: ಇಲ್ಲಿನ ಮಾರಿಕಾಂಬಾ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ಮುಂಜಾಗೃತೆ ವಹಿಸಬೇಕು ಎಂದು ಸಹಾಯಕ ಆಯುಕ್ತ ಡಾ| ಈಶ್ವರ ಉಳ್ಳಾಗಡ್ಡಿ ಸೂಚಿಸಿದರು.
ಅವರು ಶುಕ್ರವಾರ ನಗರದ ಮಿನಿ ವಿಧಾನ ಸೌಧದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ, ಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿ ಪ್ರಮುಖರ ಸಭೆಯಲ್ಲಿ ಮಾತನಾಡಿದರು. ಜಾತ್ರೆ ಯಶಸ್ಸಿಗಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆಯಲ್ಲಿ ಕೂಡ ಸಭೆ ಆಗಲಿದೆ.
ಸರಕಾರದಿಂದಲೂ ವಿಶೇಷ ಅನುದಾನ ಬರಲಿದೆ. ಆದರೆ, ಸ್ಥಳೀಯ ಮುಂಜಾಗೃತೆ ದೃಷ್ಟಿಯಲ್ಲಿ ಸಭೆ ನಡೆಸಲಾಗುತ್ತಿದ್ದು, ಜಾತ್ರೆಯ ಯಶಸ್ಸಿಗೆ ಆಯಾ ಇಲಾಖೆಗಳು ಏನೇನು ಮಾಡುತ್ತವೆ ಎಂಬ ವರದಿಯೊಂದಿಗೆ ಸಭಾಧ್ಯಕ್ಷರು ತೆಗೆದುಕೊಳ್ಳುವ ಸಭೆಗೆ ಬರಬೇಕಾಗಿದೆ. ಸಂಚಾರ, ಆರೋಗ್ಯ ಸುರಕ್ಷತೆ ಜೊತೆಗೆ ಜಾತ್ರೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲೂ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ನಟರಾಜ್ ರಸ್ತೆ ಭಾಗದಲ್ಲಿ ಅನಧಿಕೃತಅಂಗಡಿ ಮುಂಗಟ್ಟುಗಳನ್ನು ಹಾಕಿ ಸಂಚಾರಕ್ಕೆ ತೊಂದರೆ ಆಗುವುದನ್ನು ತಡೆಯಲಾಗುತ್ತದೆ. ಜಾತ್ರಾ ಬಯಲಿನಲ್ಲೂ ಅನ ಧಿಕೃತ ಅಂಗಡಿಗಳಿಗೆ, ಒಬ್ಬರಿಗೆ ಟೆಂಡರ್ ಆಗಿ ಇನ್ನೊಬ್ಬರಿಗೆ ನೀಡಿದರೆ ಆ ಬಗ್ಗೂ ಮುಂಜಾಗೃತೆ ವಹಿಸಲಾಗುತ್ತದೆ. ಡಿಪಾಸಿಟ್ ಕೂಡ ವರ್ತಕರು ಇಟ್ಟು ಅಂಗಡಿ ಹಾಕುವಂತೆ ಆಗಬೇಕಿದೆ. ಅಕ್ರಮ ನಡೆಸಿದರೆ ಡಿಪಾಸಿಟ್ ಮುಟ್ಟುಗೋಲು ಹಾಕಿಕೊಂಡು ಕಾನೂನು ಕ್ರಮ ಜರುಗಿಸಲಾಗುತ್ತದೆ. ಜಾತ್ರಾ ವ್ಯವಸ್ಥಿತ ಜೊತೆಗೆ ವಿವಿಧ ಇಲಾಖೆಗಳ ಅಧಿಕಾರಿಗಳ ಜಾಗೃತ ದಳ ಮಾಡಲಾಗುತ್ತದೆ. ಜಾತ್ರಾ ನೈರ್ಮಲ್ಯಕ್ಕೆ ನಗರಸಭೆಗೆ ಜವಾಬ್ದಾರಿ ನೀಡಲಾಗಿದೆ ಎಂದರು.
ಮಾರಿಕಾಂಬಾ ದೇವಿ ಜಾತ್ರಾ ಬಯಲಿಗೆ ತೆರಳುವ ಮಾರ್ಗಕ್ಕೆ ಸಂಬಂಧಿಸಿ 22 ರಸ್ತೆಗಳನ್ನು ಬಂದ್ ಮಾಡಲಾಗುತ್ತದೆ. ವಿದ್ಯುತ್ ಸುರಕ್ಷತೆಗೆ ಆದ್ಯತೆ ನೀಡುತ್ತೇವೆ. ಕಳೆದ ಬಾರಿ ರಾಯಪ್ಪ ಹುಲೇಕಲ್ ಶಾಲೆಯಲ್ಲಿ ವಸತಿ ವ್ಯವಸ್ಥೆಮಾಡಲಾಗಿತ್ತು. ಸ್ವತ್ಛತೆಗೆ ಕಳೆದ ಜಾತ್ರೆಯಲ್ಲಿನಗರಸಭೆಗೆ 22 ಲ.ರೂ. ಖರ್ಚು ಬಂದಿತ್ತು. ಪ್ರತಿ ದಿನವೂ ಲಕ್ಷಾಂತರ ಭಕ್ತರು ಬರುವ ಕಾರಣದಿಂದ ಕುಡಿಯುವ ನೀರು, ಶೌಚ ಯಾವುದೇ ಸಮಸ್ಯೆ ಆಗಬಾರದು ಎಂದು 22 ಕಡೆ ಕುಡಿಯುವ ನೀರು ಹಾಗೂ 15ಕ್ಕೂ ಅಧಿಕ ಕಡೆ ಮೊಬೈಲ್ ಟಾಯಲೆಟ್ ಇಡುವುದಾಗಿ ನಗರಸಭೆ ಅಧಿಕಾರಿ ಆರ್.ಎಂ. ವೆರ್ಣೇಕರ್ ತಿಳಿಸಿದರು.
ನಗರಸಭೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ಪಕ್ಕ ಅಂಗಡಿಗಳು ಬಾರದಂತೆ ಮಾರ್ಕಿಂಗ್ ಮಾಡಬೇಕು. ಮಾರಿಕಾಂಬಾ ಜಾತ್ರಾ ಬಯಲಿನಲ್ಲಿ ನೀಡಲಾಗುವ ಅಂಗಡಿಗಳೂ ವಿಸ್ತಾರ ಆಗದಂತೆನೋಡಿಕೊಳ್ಳಬೇಕು ಎಂದಾಗ ದೇವಸ್ಥಾನದ ಧರ್ಮದರ್ಶಿ ಮಂಡಳಿ ಪ್ರಮುಖ ಲಕ್ಷ್ಮಣ ಕಾನಡೆ 203 ಅಂಗಡಿಗಳನ್ನು ಬಯಲಿನಲ್ಲಿನೀಡಲಾಗುತ್ತಿದ್ದು, ಅವುಗಳ ಟೆಂಡರ್ ದರವನ್ನು ಧರ್ಮದರ್ಶಿ ಮಂಡಳಿ ತೀರ್ಮಾನ ಮಾಡುತ್ತದೆ ಎಂದರು.
ಧರ್ಮದರ್ಶಿ ಶಾಂತಾರಾಮ ಹೆಗಡೆ ಬಂಡೀಮನೆ, ತಹಶೀಲ್ದಾರ್ ಆರ್.ಎಂ. ಕುಲಕರ್ಣಿ, ಎಸಿಎಫ್ ಡಿ.ರಘು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.