Advertisement
ತಾಲೂಕಿನ ಹೇಮಗುಡ್ಡ ಮುಕ್ಕುಂಪಿ ಬೆಣಕಲ್ ಭಾಗದಲ್ಲಿರುವ ಕೆರೆಗಳು ಭರ್ತಿಯಾದ ಸಂದರ್ಭದಲ್ಲಿ ದುರುಗಮ್ಮನಹಳ್ಳಕ್ಕೆ ನೀರು ಬರುತ್ತಿತ್ತು. ಇದರಿಂದ ನಗರದ ಅಂತರ್ಜಲ ವೃದ್ಧಿ ಹಾಗೂ ಜನರ ಬಳಕೆಗೆ ಕಳೆದ 20 ವರ್ಷಗಳ ವರೆಗೆ ದುರುಗಮ್ಮನಹಳ್ಳ ನೆರವಾಗಿತ್ತು. ನಗರದ ಅವೈಜ್ಞಾನಿಕ ಬೆಳವಣಿಗೆ ಮತ್ತು ಡ್ರೈನೇಜ್ ನಿರ್ವಹಣೆ ಇಲ್ಲದೇ ಇರುವುದಿಂದ ದುರುಗಮ್ಮನಹಳ್ಳಕ್ಕೆ ಚರಂಡಿ ನೀರು ಹರಿಬಿಟ್ಟಿದ್ದು ಮತ್ತು ಮಳೆ ಕೊರತೆ ಕಾರಣ ಹಳ್ಳದಲ್ಲಿ ನೀರು ಹರಿದೇ ಇರುವುದರಿಂದ ಇಡೀ ವಾತಾವರಣ ಹದಗೆಟ್ಟಿದೆ. ಕಳೆದ 20 ವರ್ಷಗಳಿಂದ ದುರುಗಮ್ಮನಹಳ್ಳ ಬೇಡವಾದ ವಸ್ತುಗಳನ್ನು ಸುರಿಯುವ ಸ್ಥಳವಾಯಿತು. ಬೇಲಿಯೇ ಎದ್ದು ಹೊಲ ಮೇಯ್ದಂತೆ ನಗರಸಭೆ ಪ್ರತಿ ದಿನ ಉತ್ಪನ್ನವಾಗುವ ಘನತ್ಯಾಜ್ಯ ಪ್ಲಾಸ್ಟಿಕ್ ವಸ್ತುಗಳನ್ನು ಹಳ್ಳಕ್ಕೆ ಹಾಕುವ ಮೂಲಕ ನಗರದಲ್ಲಿ ಅನೈರ್ಮಲ್ಯಕ್ಕೆ ಕಾರಣವಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಮಳೆ ಕೊರತೆಯಿಂದಾಗಿ ಎಡದಂಡೆ ಕಾಲುವೆಯಲ್ಲಿ ನೀರು ಹರಿಯದ ಕಾರಣ ಹಳ್ಳ ಇನ್ನಷ್ಟು ಹಾಳಾಗಿದೆ. ನಗರದ ಮಧ್ಯದಲ್ಲಿರುವ ಹಳ್ಳ ಅನೈರ್ಮಲ್ಯದಿಂದ ಕೂಡಿದ್ದರೆ ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮವಾಗುವ ಸಂದರ್ಭವನ್ನರಿತ ಸಮಾನ ಮನಸ್ಕರು ನಮ್ಮ ಹಳ್ಳ ನಮ್ಮ ಊರು ಸಂಘಟನೆಯಡಿ ಕಳೆದ 15 ದಿನಗಳಿಂದ ಹಳ್ಳದಲ್ಲಿರುವ ಪ್ಲಾಸ್ಟಿಕ್ ಸಂಗ್ರಹ ಮಾಡಿದ್ದಾರೆ. ಹಳ್ಳದಲ್ಲಿ ಹರಡಿದ್ದ ಗಲೀಜು ನೀರನ್ನು ಒಂದೇ ಕಡೆ ಹರಿಯುವಂತೆ ಮಾಡಿದ್ದಾರೆ. ಇದರಿಂದ ಇಡೀ ಹಳ್ಳ ಒಣಗಿ ಅನಗತ್ಯ ವಸ್ತುಗಳನ್ನು ತೆಗೆದುಹಾಕಲು ನೆರವಾಗಿದೆ. ಹಳ್ಳ ಸಂಪೂರ್ಣ ಒಣಗಿದ ನಂತರ ಜೆಸಿಬಿ ಮೂಲಕ ಹೂಳು ತೆಗೆದು ಎರಡು ಬದಿಯಲ್ಲಿ ವೈಜ್ಞಾನಿಕವಾಗಿ ಗೋಡೆ ನಿರ್ಮಿಸುವ ಯೋಚನೆ ಇದೆ.
Related Articles
Advertisement