Advertisement

ಬಸ್‌ ಸೌಲಭ್ಯಕ್ಕೆ ಒತ್ತಾಯಿಸಿ ಎಬಿವಿಪಿಯಿಂದ ಪ್ರತಿಭಟನೆ

05:34 PM Dec 13, 2019 | Suhan S |

ಹಾನಗಲ್ಲ: ತಾಲೂಕಿನಲ್ಲಿ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತಮ್ಮ ಗ್ರಾಮಗಳಿಗೆ ತಲುಪಲು ಬಸ್‌ ಸೌಲಭ್ಯಸಿಗುತ್ತಿಲ್ಲ ಎಂದು ಖಂಡಿಸಿ ಎಬಿವಿಪಿ ವತಿಯಿಂದ ಬಸ್‌ ನಿಲ್ದಾಣದ ಬಳಿ ರಸ್ತೆ ತಡೆ ನಡೆಸಿ, ಪ್ರತಿಭಟಿಸಲಾಯಿತು. ಹಾನಗಲ್ಲಿನ ಬಸ್‌ ನಿಲ್ದಾಣದ ಪ್ರವೇಶ ದ್ವಾರಗಳನ್ನು ಬಂದ್‌ ಮಾಡಿ, ವಿದ್ಯಾರ್ಥಿಗಳ ಸಮಸ್ಯೆ ಸರಿಪಡಿಸುವವರೆಗೂ ಬಸ್‌ಗಳನ್ನು ಹೊರಗೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

Advertisement

ಎಬಿವಿಪಿ ಹಾನಗಲ್ಲ ತಾಲೂಕು ಸಂಚಾಲಕ ಮಲ್ಲಪ್ಪ ನಾಗರೊಳ್ಳಿ ಮಾತನಾಡಿ, ವಿದ್ಯಾರ್ಥಿಗಳ ಪಾಲಿಗೆ ಹಾನಗಲ್ಲ ಬಸ್‌ ಘಟಕ ನಿರುಪಯುಕ್ತವಾಗಿದೆ. ಇಲ್ಲಿ ಯಾವುದೇ ಉತ್ತಮ ಸಂಚಾರ ವ್ಯವಸ್ಥೆ ಇಲ್ಲ. ಈ ಘಟಕದಲ್ಲಿರುವ ಬಸ್‌ಗಳ ಗುಣಮಟ್ಟವಂತೂ ತೀರಾ ಹದಗೆಟ್ಟಿದ್ದು, ಸಂಚಾರಕ್ಕೆ ಹೋದ ಬಸ್ಸುಗಳು ಮರಳಿ ಸಕಾಲಕ್ಕೆ ಬಾರದೇ ದಾರಿಯಲ್ಲಿಯೇ ಕಟ್ಟು ನಿಲ್ಲುತ್ತಿವೆ. ಸಾರ್ವಜನಿಕರು ಇದನ್ನು ಹೇಗೆ ಸಹಿಸಿಕೊಂಡಿರುವರೋ ತಿಳಿಯದಾಗಿದೆ. ವರ್ಷವಿಡೀ ವಿದ್ಯಾರ್ಥಿಗಳು ಬಸ್‌ಗಳ ಸಮಸ್ಯೆಯಿಂದಾಗಿ ವಿದ್ಯಾಭ್ಯಾಸಕ್ಕೆ ಭಾರಿ ಅಡಚಣೆ ಆಗಿರುವುದನ್ನು ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ. ಹಲವು ಹೋರಾಟಗಳು ನಡೆದಿದ್ದರೂ ಬಸ್‌ ಘಟಕದ ವ್ಯವಸ್ಥಾಪಕರು ಜಾಣ ಕುರುಡುರಂತೆ ವರ್ತಿಸುತ್ತಿದ್ದಾರೆ. ಪರೀಕ್ಷೆ ಸಮಿಪಿಸುತ್ತಿದ್ದು ಬಸ್‌ ಸೌಲಭ್ಯವಿಲ್ಲದಿರುವುದಕ್ಕೆ ವಿದ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದಾರೆ ಎಂದರು.

ಬಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ನಿಲ್ಲುವುದಕ್ಕೂ ಜಾಗವಿರುವುದಿಲ್ಲ. ಬಾಗಿಲಲ್ಲಿ ತೂರಾಡಿಕೊಂಡು ನಿಲ್ಲುವಂತಾಗಿದೆ. ಇನ್ನು ಬಸ್‌ ಸಿಬ್ಬಂದಿ ವಿದ್ಯಾರ್ಥಿಗಳೊಂದಿಗೆ ಸೌಜನ್ಯದಿಂದ ವರ್ತಿಸುವುದಿಲ್ಲ. ಈ ಕುರಿತು ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನೆಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ಕೂಡಲೇ ಸಮಸ್ಯೆ ಪರಿಹರಿಸದಿದ್ದರೆ ಎಲ್ಲ ವಿದ್ಯಾರ್ಥಿಗಳ ಪಾಲಕರನ್ನೂ ಒಳಗೊಂಡು ಹಾನಗಲ್ಲ ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.

ಘಟಕ ವ್ಯವಸ್ಥಾಪಕ ಆರ್‌. ಸರ್ವೇಶ್‌ ವಿದ್ಯಾರ್ಥಿಗಳ ಮನವಿ ಸ್ವೀಕರಿಸಿ ಮಾತನಾಡಿ, ಹಾನಗಲ್ಲ ಬಸ್‌ ಡಿಪೋದಲ್ಲಿ ಸಿಬ್ಬಂದಿ ಕೊರತೆ ಇದೆ. ಕೆಟ್ಟು ಹೋದ ಬಸ್ಸುಗಳನ್ನು ರಿಪೇರಿ ಮಾಡಿಕೊಂಡು ಬಳಸುತ್ತಿದ್ದೇವೆ. ಇಲ್ಲಿ ಗುಣಮಟ್ಟಣದ ಬಸ್ಸುಗಳೇ ಇಲ್ಲ. ಇಷ್ಟಾಗಿ ಬಸ್‌ಗಳ ಕೊರತೆಯೂ ಇದೆ. ಹೊಸ ಬಸ್‌ಗಳಿಗಾಗಿ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಶೀಘ್ರದಲ್ಲಿಯೇ ಹೊಸ ಬಸ್‌ಗಳು ಬಂದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ ಎಂದು ನಿಸ್ಸಾಹಯಕತೆ ತೋರಿದರು. ವಿದ್ಯಾರ್ಥಿ ಪರಿಷತ್‌ ಮುಖಂಡರಾದ ಮಲ್ಲಪ್ಪ ಎನ್‌., ಬಸವರಾಜ ಮಟ್ಟಿಮನಿ, ಶಿವರಾಜ ಆಲದಕಟ್ಟಿ, ಮೇಘನಾ ಪುರೋಹಿತ್‌, ರಿತೀಶ ತಳವಾರ, ಅಭಿಷೇಕ್‌, ಶಂಕರ ಕೊಲ್ಲಾಪೂರ, ಮಾಲತೇಶ ಮಾಳಿ, ವೀರೇಶ, ಅಭಿಷೇಕ ಗಣಾಚಾರಿ, ಕಾಂತೇಶ, ಪ್ರಶಾಂತ ಮಹೇಂದ್ರಕರ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next