Advertisement

ಬಸ್‌ ಸೌಲಭ್ಯ ಕಲ್ಪಿಸುವಂತೆ ಎಬಿವಿಪಿ ಆಗ್ರಹ

10:06 AM Aug 02, 2019 | Suhan S |

ಬೈಲಹೊಂಗಲ: ಸಮರ್ಪಕ ಬಸ್‌ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಪಟ್ಟಣದ ಕೇಂದ್ರ ಸಾರಿಗೆ ಘಟಕಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

Advertisement

ಇದಕ್ಕೂ ಮೊದಲು ಕೇಂದ್ರ ಬಸ್‌ ನಿಲ್ದಾಣದ ಆವರಣದಲ್ಲಿ ನೂರಾರು ವಿದ್ಯಾರ್ಥಿಗಳು ಜಮಾವಣೆಗೊಂಡು ಸಾರಿಗೆ ಘಟಕದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.

ಪ್ರತಿಭಟನೆಯಲ್ಲಿ ಎಬಿವಿಪಿ ಜಿಲ್ಲಾ ಸಂಚಾಲಕ ಸಿದ್ಧಾರೂಢ ಹೊಂಡಪ್ಪನ್ನವರ, ಪ್ರಶಾಂತ ಅಮ್ಮಿನಬಾವಿ ಮಾತನಾಡಿ, ಎರಡು ತಿಂಗಳಿಂದ ವಿದ್ಯಾರ್ಥಿಗಳು ಹಾಗೂ ನಾಗರಿಕರಿಗೆ ಬಸಿನ ಸೌಲಭ್ಯ ಇಲ್ಲದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳ ವ್ಯಾಸಂಗಕ್ಕಾಗಿ ಬೈಲಹೊಂಗಲ ಪಟ್ಟಣದ ಸರ್ಕಾರಿ, ಅರೆಸರಕಾರಿ ಕಾಲೇಜುಗಳಿಗೆ ಬರುತ್ತಿದ್ದಾರೆ. ಆದರೆ ಸರಿಯಾದ ವೇಳೆಗೆ ಬಸ್‌ಗಳ ಕೊರತೆಯಿಂದ ಕಲಿಕೆಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.

ಮರಕಟ್ಟಿ, ಹಾರುಗೊಪ್ಪ, ಕೆ.ಎಸ್‌. ಪಟ್ಟಿಹಾಳ, ಗಂದಿಗವಾಡ, ತುರಕರಶೀಗಿಹಳ್ಳಿ, ಸೊಗಲಕ್ಷೇತ್ರ, ರುದ್ರಾಪುರ, ಕಾರಿಮನಿ, ಚಿಕ್ಕೊಪ್ಪ, ಕರಿಡಿಗುದ್ದಿ, ನೇಸರಗಿ, ಖೋದಾನಪುರ, ಚಿವಟಗುಂಡಿ, ಹೊಳಿನಾಗಲಾಪುರ, ಪಟ್ಟಿಹಾಳ ಕೆ.ಬಿ, ಯರಗುದ್ದಿ, ಇಟಗಿರೋಡದಿಂದ ಸಂಗೊಳ್ಳಿ, ಗುಡದೂರ,ಲಿಂಗದಳ್ಳಿ, ಇನ್ನೂ ಹಲವಾರು ಗ್ರಾಮಗಳಿಂದ ವಿದ್ಯಾರ್ಥಿಗಳು ಬೆಳಗಿನ ಜಾವ ಕಾಲೇಜಿಗೆ ಬರುತ್ತಿದ್ದು, ಮಧ್ಯಾಹ್ನ ಹಾಗೂ ಸಂಜೆ ಗ್ರಾಮಕ್ಕೆ ಮರಳುತ್ತಾರೆ. ಆದರೆ ಸಕಾಲಕ್ಕೆ ಬಸ್‌ಗಳು ಇಲ್ಲದೇ ನಿತ್ಯ ತಾಸುಗಟ್ಟಲೆ ಕಾಯ್ದು ಬಸ್‌ ನಿಲ್ದಾಣದಲ್ಲೇ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಆರೋಪಿಸಿದರು.

ಸಿಪಿಐ ಮಂಜುನಾಥ ಕುಸಗಲ್, ಪಿಎಸ್‌ಐ ಎಂ.ಎಸ್‌.ಹೂಗಾರ, ಸಾರಿಗೆ ಘಟಕದ ಟ್ರಾಫೀಕ್‌ ಇನ್ಸ್‌ಪೆಕ್ಟರ್‌ ಮಂಜುನಾಥ ಆನಿಕಿವಿ, ಕಾರ್ಮಿಕ ಮುಖಂಡ ಸುರೇಶ ಯರಡ್ಡಿ ವಿದ್ಯಾರ್ಥಿಗಳ ಮನವೊಲಿಸಲು ಮುಂದಾದಾಗ ಈಗಾಗಲೇ ವಿದ್ಯಾರ್ಥಿಗಳ ಸಮಸ್ಯೆ ಕುರಿತು ಸಾಕಷ್ಟು ಬಾರಿ ಗಮನಕ್ಕೆ ತಂದರೂ ಕೂಡಾ ನಮ್ಮ ಸಮಸ್ಯೆಯನ್ನು ಈಡೇರಿಸಿಲ್ಲ. ಕೂಡಲೇ ಜಿಲ್ಲಾಘಟಕದ ಸಾರಿಗೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನ್ಯಾಯ ದೊರಕಿಸಿಕೊಡಬೇಕೆಂದು ಪಟ್ಟು ಹಿಡಿದರು.

Advertisement

ನಂತರ ಅಧಿಕಾರಿಗಳು ವಿದ್ಯಾರ್ಥಿಗಳ ಮನವೊಲಿಸಿ ಇನ್ನೂ ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸಿ ಸಮಯಕ್ಕೆ ಸರಿಯಾಗಿ ಬಸ್‌ ಬಿಡುವುದಾಗಿ ಹೇಳಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ಸಾಮಾಜಿಕ ಕಾರ್ಯಕರ್ತ ರಫೀಕ ಬಡೆಘರ್‌, ಎಬಿವಿಪಿ ಕಾರ್ಯಕರ್ತರಾದ ಬಸವರಾಜ ಮುರಕೀಬಾವಿ, ಅಪ್ಪಣ್ಣ ಹಡಪದ, ಸಾಗರ ಮಾದಾರ, ಪ್ರಪುಲ ಪಾಟೀಲ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next