ಬೆಂಗಳೂರು: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಗೆ ಕೂಡಲೇ ಸಚಿವರನ್ನು ನೇಮಿಸಬೇಕು ಹಾಗೂ ಪಿಯು ಇಲಾಖೆಗೆ ಕಾಯಂ ನಿರ್ದೇಶಕರನ್ನು ನೇಮಿಸಬೇಕು ಎಂದು ಆಗ್ರಹಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಶನಿವಾರ ಮಲ್ಲೇಶ್ವರದಲ್ಲಿರುವ ಪದವಿಪೂರ್ವ ಶಿಕ್ಷಣ ಇಲಾಖೆ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಸಚಿವರಾಗಿದ್ದ ಎನ್.ಮಹೇಶ್ ರಾಜೀನಾಮೆ ನಂತರ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಸಚಿವ ಸ್ಥಾನ ಖಾಲಿ ಇದೆ. ಸರ್ಕಾರದ ಒಳ ಜಗಳಗಳಿಂದ ತೆರವಾದ ಮಂತ್ರಿ ಸ್ಥಾನ ಇನ್ನೂ ಭರ್ತಿಯಾಗಿಲ್ಲ. ಎರಡು ವರ್ಷಗಳ ಹಿಂದೆ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಇಲಾಖೆ ತೀವ್ರ ಮುಖಭಂಗ ಅನುಭವಿಸಿತ್ತಲ್ಲದೇ ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಯಾಗಿತ್ತು.
ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗೆ ಕೆಲವೇ ತಿಂಗಳುಗಳು ಬಾಕಿ ಇದ್ದು, ಇದುವರೆಗೂ ಕಾಯಂ ನಿರ್ದೇಶಕರನ್ನು ಸರ್ಕಾರ ನೇಮಕ ಮಾಡಿಲ್ಲ ಎಂದು ಎಬಿವಿಪಿ ಬೆಂಗಳೂರು ಮಹಾನಗರ ಸಂಘಟನಾ ಕಾರ್ಯದರ್ಶಿ ಜಯಪ್ರಕಾಶ ಆರೋಪಿಸಿದರು.
2016ನೇ ಸಾಲಿನ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಬಂಧಿತನಾಗಿದ್ದ ಶಿವಕುಮಾರ್, ಲಕ್ಷಾಂತರ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಜೀವನದ ಜತೆ ಚೆಲ್ಲಾಟವಾಡಿ, ರಾಜ್ಯ ಹಾಗೂ ಪಿಯು ಇಲಾಖೆ ಮರ್ಯಾದೆ ತೆಗೆದಿದ್ದರೂ, ಆತನಿಗೆ ಯಾವುದೇ ಶಿಕ್ಷೆಯಾಗಿಲ್ಲ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ, ಮುಂದೇ ಈ ರೀತಿ ಆಗದಂತೆ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದರು.
ಪಿಯುಸಿ ವಾರ್ಷಿಕ ಪರೀಕ್ಷೆ ಸಮೀಪಿಸುತ್ತಿರುವ ಕಾರಣ, ವಿದ್ಯಾರ್ಥಿಗಳಲ್ಲಿ ಯಾವುದೇ ರೀತಿಯ ಆತಂಕ ಸೃಷ್ಟಿಯಾಗದಂತೆ ಸರ್ಕಾರ ಎಚ್ಚರ ವಹಿಸಬೇಕು. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಆರೋಪಿಗಳು ಹಾಗೂ ಇದಕ್ಕೆ ಸಹಕರಿಸುವ ಇಲಾಖೆ ಅಧಿಕಾರಿಗಳ ಮೇಲೆ ಕಣ್ಣಿಡಬೇಕು. ಸಿಐಡಿ ತನಿಖಾ ವರದಿಯಲ್ಲಿ ಉಲ್ಲೇಖೀಸಿರುವ ಸಂಸ್ಥೆಗಳ, ಕಾಲೇಜುಗಳ ಮಾನ್ಯತೆಯನ್ನು ಸಂಪೂರ್ಣ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಬೆಂಗಳೂರು ಕೇಂದ್ರ ನಗರ ಸಂಘಟನಾ ಕಾರ್ಯದರ್ಶಿಗಳಾದ ವೆಂಕಟೇಶ, ಶಿವಾನಂದ, ಜಿಲ್ಲಾ ಸಂಚಾಲಕರಾದ ಸುಭಾಷ್, ತೇಜಸ್, ಗಗನ, ನಗರ ಕಾರ್ಯದರ್ಶಿಗಳಾದ ಗುರುಪ್ರಸಾದ, ಕಿರಣ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.