ವರದಿ : ಕೇಶವ ಆದಿ
ಬೆಳಗಾವಿ: ಮೈ ಮೇಲೆ ಸದಾ ಎದ್ದು ಕಾಣುವ ಬಿಳಿ ಧೋತಿ. ಖಾದಿ ಜುಬ್ಟಾ, ಹೆಗಲ ಮೇಲೆ ರೈತರ ಶಕ್ತಿಶಾಲಿ ಅಸ್ತ್ರ ಹಸಿರು ಟವೆಲ್. ಜತೆಗೆ ಎಂಥವರಲ್ಲೂ ಛಳಿ ಬಿಡಿಸುವ ಗಡಸು ದನಿ. ನಿರಂತರ ರೈತ ಹೋರಾಟಗಾರ ಬಾಬಾಗೌಡ ಪಾಟೀಲ ಪರಿಚಯಕ್ಕೆ ಇವಿಷ್ಟು ಸಾಕು.
ಅದು 17 ವರ್ಷಗಳ ಹಿಂದಿನ ನೆನಪು. ಮಧ್ಯಾಹ್ನ 1:30ರ ಸಮಯ. ಜಿಪಂ ಎದುರು ಹತ್ತಾರು ಸಮಸ್ಯೆಗಳನ್ನಿಟ್ಟುಕೊಂಡು ರೈತರ ದೊಡ್ಡ ಹೋರಾಟವೇ ನಡೆದಿತ್ತು. ಜಿಲ್ಲೆಯ ನೂರಾರು ರೈತರು ಜಮಾಯಿಸಿದ್ದರು. ತಮ್ಮ ನ್ಯಾಯಯುತ ಬೇಡಿಕೆಗಳು ಮತ್ತು ಸರ್ಕಾರದ ವಿರುದ್ಧ ರೈತರು ಕೂಗುತ್ತಿದ್ದರೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರಲೇ ಇಲ್ಲ. ಆದರೆ ಆಗ ಹೋರಾಟದ ನೇತೃತ್ವ ವಹಿಸಿದ್ದ ಬಾಬಾಗೌಡ ಪಾಟೀಲ ಒಂದೇ ಒಂದು ಗುಡುಗು ಅಲ್ಲಿನ ಚಿತ್ರಣವನ್ನೇ ಬದಲಾಯಿಸಿತು. ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಎಚ್ಚರಿಕೆ ನೀಡಿ ಓಡಿ ಬರುವಂತೆ ಮಾಡಿದ ಬಾಬಾಗೌಡ ಪಾಟೀಲ ಎಲ್ಲರ ಎದುರೇ ಆ ಅಧಿಕಾರಿಯ ಛಳಿ ಬಿಡಿಸಿದರು. ಸ್ವತಃ ರೈತ ಸಮುದಾಯ ಬಾಬಾಗೌಡರ ಸಿಟ್ಟಿಗೆ ದಂಗಾಗಿ ಹೋಗಿತ್ತು. ಆಗ ಬಾಬಾಗೌಡರ ಗುಡುಗು ಐಎಎಸ್ ಅಧಿಕಾರಿಯ ಬೆವರಿಳಿಸಿತು. ಅಂದಿನಿಂದ ಸರ್ಕಾರ ಹಾಗೂ ಹಿರಿಯ ಅಧಿಕಾರಿಗಳಿಗೆ ಬಾಬಾಗೌಡರ ಹಾಗೂ ರೈತ ಸಂಘಟನೆಯ ಶಕ್ತಿ ಪರಿಚಯವಾಯಿತು.
ಇದು 1980-90ರ ನೆನಪು. ಉತ್ತರ ಕರ್ನಾಟಕದ ರೈತರ ದನಿಗೆ ಶಕ್ತಿಯಾಗಿ ನಿಂತ ಬಾಬಾಗೌಡ ಪಾಟೀಲ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಬಿಲ್ ವಿಷಯದಲ್ಲಿ ಮಾಡಿದ ಹೋರಾಟ ಇಂದಿಗೂ ಅಚ್ಚಳಿಯದೇ ಉಳಿದಿದೆ. ಬಾಬಾಗೌಡ ಪಾಟೀಲ ಆಗ ಪ್ರತಿ ಹಳ್ಳಿಯಲ್ಲಿ ರೈತ ಸಂಘಟನೆ ಫಲಕ ಹಾಕಿಸಿದ್ದರು. ಯಾವುದೇ ಅಧಿಕಾರಿ ಗ್ರಾಮಕ್ಕೆ ಬರಬೇಕಾದರೆ ಕಡ್ಡಾಯವಾಗಿ ಅಲ್ಲಿನ ರೈತ ಮುಖಂಡರ ಅನುಮತಿ ಪಡೆದೇ ಬರಬೇಕು ಎಂದು ಫರ್ಮಾನು ಹೊರಡಿಸಿದ್ದರು. ಇದು ಬಾಬಾಗೌಡ ಪಾಟೀಲರ ಹೋರಾಟದ ಶಕ್ತಿ. ಬಾಬಾಗೌಡರ ಹೋರಾಟದ ಇಂತಹ ಅನೇಕ ಉದಾಹರಣೆಗಳಿವೆ. ಮೊನ್ನೆ ಮೊನ್ನೆವರೆಗೂ ರೈತರ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಬಾಬಾಗೌಡ ಯಾವತ್ತೂ ಸರ್ಕಾರಕ್ಕೆ ಬಿಸಿ ಮುಟ್ಟಿಸುವುದನ್ನು ಬಿಡಲಿಲ್ಲ. ರೈತರ ಪರ ಹೋರಾಟದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳದ ನಾಯಕ ಬಾಬಾಗೌಡ ಪಾಟೀಲ ಎಂದರೆ ತಪ್ಪಿಲ್ಲ.
ರೈತರಿಗೆ ನ್ಯಾಯ ಕೊಡಿಸುವ ವಿಷಯದಲ್ಲಿ ಯಾವತ್ತೂ ಹಸಿದವರಂತೆ ಕಂಡ ಬಂದವರು. ಆದರೆ ರಾಜಕೀಯದ ಆಟ ಹಾಗೂ ಆಗಾಗ ಮಾಡಿದ ಪಕ್ಷಾಂತರ ಸ್ವಲ್ಪ ಮಟ್ಟಿಗೆ ಅವರ ಹೋರಾಟದ ವರ್ಚಸ್ಸಿಗೆ ಕುಂದು ತಂದಿದ್ದು ನಿಜ. ಒಂದು ವೇಳೆ ಬಾಬಾಗೌಡ ಪಾಟೀಲ ರಾಜಕೀಯದಿಂದ ದೂರ ಉಳಿದಿದ್ದರೆ ಬಹುಶಃ ರಾಜ್ಯದಲ್ಲಿ ಇವತ್ತು ರೈತ ಸಂಘಗಳ ಹೋರಾಟಗಳ ಬಗ್ಗೆ ಯಾರೂ ಪ್ರಶ್ನೆ ಮಾಡುತ್ತಿರಲಿಲ್ಲ. ಅಷ್ಟೇ ಏಕೆ ಬಾಬಾಗೌಡರ ಬಗ್ಗೆ ಯಾರೊಬ್ಬರೂ ಹಗುರವಾಗಿ ಮಾತನಾಡುವ ಧೈರ್ಯ ಮಾಡುತ್ತಿರಲಿಲ್ಲ.
ಬಿಜೆಪಿಗೆ ಪರ್ಯಾಯ ನಾಯಕ: ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಅಲ್ಪ ಸಮಯದವರೆಗೆ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಬಾಬಾಗೌಡ ಪಾಟೀಲ ನಂತರ ರಾಜಕೀಯದಲ್ಲಿ ನಿರೀಕ್ಷೆ ಮಾಡಿದಂತೆ ಯಶ ಕಾಣಲಿಲ್ಲ. ಸಂತಸ ಪಡುವಂತಹ ಅಧಿಕಾರ ಸಹ ಸಿಗಲಿಲ್ಲ. ಪಕ್ಷಗಳ ಮೇಲೆ ಪಕ್ಷಗಳನ್ನು ಬದಲಾಯಿಸಿದರೂ ರಾಜಕೀಯದ ಅದೃಷ್ಟ ಅವರಿಗೆ ಒಲಿಯಲಿಲ್ಲ. ಇದೊಂದೇ ಅವರ ಆಪ್ತರನ್ನು ಬಹಳವಾಗಿ ಕಾಡಿದ ಸಂಗತಿ. 1990ರ ಅವಧಿಯಲ್ಲಿ ರೈತ ನಾಯಕ ನಂಜುಂಡಸ್ವಾಮಿ ಜತೆ ಮನಸ್ತಾಪ ಬಂದ ನಂತರ ಅದರಿಂದ ಹೊರಬಂದ ಬಾಬಾಗೌಡ ಪಾಟೀಲ 1996ರಲ್ಲಿ ಬಿಜೆಪಿ ಸೇರ್ಪಡೆಯಾದರು. 1998ರಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಆಯ್ಕೆಯಾಗಿದ್ದಲ್ಲದೆ ವಾಜಪೇಯಿ ಸರ್ಕಾರದಲ್ಲಿ ಮಂತ್ರಿ ಸಹ ಆದರು. ಆದರೆ ಕೇವಲ 13 ತಿಂಗಳಲ್ಲಿ ಸರ್ಕಾರ ಪತನವಾಯಿತು. 1999ರಲ್ಲಿ ಮತ್ತೆ ಸ್ಪರ್ಧೆ ಮಾಡಿದ ಬಾಬಾಗೌಡ ಪಾಟೀಲ ಆಗ ಕಾಂಗ್ರೆಸ್‌ನ ಅಮರಸಿಂಹ ವಿರುದ್ಧ ಸೋತರು. 1999ರಲ್ಲಿ ಸೋತ ನಂತರ ಬಾಬಾಗೌಡ ಬಿಜೆಪಿಯಿಂದ ದೂರ ಉಳಿದರು. ಆಗ ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ನಂತರ ಬಾಬಾಗೌಡ ಬಿಜೆಪಿಯ ಪರ್ಯಾಯ ನಾಯಕರು ಎಂಬ ಮಾತುಗಳು ಬಹಳ ಜೋರಾಗಿ ಹರಿದಾಡಿದ್ದವು. ಬಾಬಾಗೌಡ ಸಹ ಲಿಂಗಾಯತ ಸಮಾಜದ ಪ್ರಮುಖ ಮುಖಂಡ ಹಾಗೂ ಯಡಿಯೂರಪ್ಪ ಅವರಂತೆ ರೈತರ ಪ್ರಭಾವಿ ನಾಯಕ ಎಂದು ಗುರುತಿಸಿಕೊಂಡಿದ್ದರು. ಇದು ಬಿಜೆಪಿಯ ಕೆಲ ನಾಯಕರಿಗೆ ಸರಿ ಬರಲಿಲ್ಲ. ಹೀಗಾಗಿ ಕುತಂತ್ರ ಮಾಡಿ ಬಾಬಾಗೌಡರನ್ನು ಹಿಂದೆ ಸರಿಸಿದರು ಎಂಬ ಆರೋಪವೂ ಇದೆ. ಅಂದಿನಿಂದ ಬಾಬಾಗೌಡರು ಬೇರೆ ಯಾವುದೇ ರಾಜಕೀಯ ಪಕ್ಷದಲ್ಲಿ ಭದ್ರ ನೆಲೆ ಕಂಡುಕೊಳ್ಳಲಾಗಲಿಲ್ಲ.