ಶಿವಮೊಗ್ಗ: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸ್ವಾಯತ್ತ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರದ ಅಧೀನದಲ್ಲಿರುವ ಇಡಿ, ಐಟಿ, ಸಿಬಿಐನಂತಹ ಉನ್ನತ ಸ್ವಾಯತ್ತ ತನಿಖಾ ಸಂಸ್ಥೆಗಳ ಮೇಲೆ ಜನತೆಗೆ ಅಪಾರ ಗೌರವವಿದೆ. ಆದರೆ, ಈ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿ ತನ್ನ ಅಧಿಕಾರ ಬಳಸಿಕೊಂಡು ಈ ಸಂಸ್ಥೆಗಳನ್ನು ರಾಜಕೀಯ ಕಾರಣಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಚುನಾವಣೆ ಸಂದರ್ಭ ಬಂತೆಂದರೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ನಾಯಕರ ಮನೆ ಮೇಲೆ ಐಟಿ, ಇಡಿ ದಾಳಿ ನಡೆಸುವ ಮೂಲಕ ವಿರೋಧ ಪಕ್ಷಗಳ ನಾಯಕರ ಮಾನಸಿಕ ಸ್ಥೈರ್ಯ ಕುಗ್ಗಿಸುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಕಾಂಗ್ರೆಸ್‌ನ ಪ್ರಭಾವಿ ನಾಯಕರಾದ ಡಿ.ಕೆ. ಶಿವಕುಮಾರ್ ಅವರ ಮೇಲೆ ಪದೇ ಪದೇ ಐಟಿ, ಇಡಿ ದಾಳಿಗಳನ್ನು ನಡೆಸುವ ಮೂಲಕ ಅವರ ಮಾನಸಿಕ ಸ್ಥೈರ್ಯ ಕುಗ್ಗಿಸುವ ಅವರ ಮೇಲೆ ಜನರಿಗೆ ಕೆಟ್ಟ ಅಭಿಪ್ರಾಯ ಬರುವಂತೆ ಬಿಂಬಿಸುವ ಪ್ರಯತ್ನ ನಡೆಸುತ್ತಿದೆ. ಏನೂ ತಪ್ಪು ಮಾಡದಿದ್ದರೂ ಈ ರೀತಿ ಸ್ವಾಯತ್ತ ತನಿಖಾ ಸಂಸ್ಥೆಗಳ ಮೂಲಕ ದಾಳಿ ನಡೆಸುವುದು, ಪದೇ ಪದೇ ವಿಚಾರಣೆಗೊಳಪಡಿಸುವುದನ್ನು ಮಾಡುವ ಮೂಲಕ ಅವರನ್ನು ಸಾರ್ವಜನಿಕವಾಗಿ ತೇಜೋವಧೆ ಮಾಡುತ್ತಿದ್ದು, ಇದನ್ನು ಯಾರೂ ಸಹಿಸುವುದಿಲ್ಲ ಎಂದರು.
ಇಡಿ, ಐಟಿಯಂತಹ ಸಂಸ್ಥೆಗಳಿರುವುದು ಭ್ರಷ್ಟಾಚಾರವನ್ನು ತೊಲಗಿಸಲು, ಅಕ್ರಮವಾಗಿ ಹಣ ಗಳಿಸಿದವರನ್ನು ಪತ್ತೆ ಹಚ್ಚಲೇ ಹೊರತು ರಾಜಕೀಯವಾಗಿ ಬಿಜೆಪಿಯ ವಿರೋಧಿಗಳನ್ನು ಮುಗಿಸುವುದಕ್ಕಲ್ಲ. ಆದರೆ, ಕೇಂದ್ರ ಸರ್ಕಾರದ ಕೈಗೊಂಬೆಯಂತೆ ಈ ಸಂಸ್ಥೆಗಳ ಅಧಿಕಾರಿಗಳೂ ವರ್ತಿಸುತ್ತಿರುವುದರಿಂದ ಈ ಸಂಸ್ಥೆಗಳ ಮೇಲೆ ಜನರಿಗಿರುವ ವಿಶ್ವಾಸ ಹೊರಟು ಹೋಗುತ್ತಿದೆ. ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಕೆಫೆ ಕಾಫಿ ಡೇ ಉದ್ಯಮಿ ಸಿದ್ಧಾರ್ಥ್ ಅವರು ಸಹ ತಮ್ಮ ಕೊನೆಯ ಪತ್ರದಲ್ಲಿ ಈ ಸಂಸ್ಥೆಗಳಲ್ಲಿನ ಅಧಿಕಾರಿಗಳು ಕೇಂದ್ರ ಸರ್ಕಾರದ ಕೈಗೊಂಬೆಗಳಂತೆ ವರ್ತಿಸುತ್ತಿರುವುದರ ಬಗ್ಗೆ ಪ್ರಸ್ತಾಪಿಸಿದ್ದರು ಎಂದರು.
ಕೂಡಲೇ ಕೇಂದ್ರ ಸರ್ಕಾರ ಈ ಸ್ವಾಯತ್ತ ತನಿಖಾ ಸಂಸ್ಥೆಗಳನ್ನು ರಾಜಕೀಯ ವಿರೋಧಿಗಳನ್ನು ಮುಗಿಸುವ ಉದ್ದೇಶದಿಂದ ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ನಿಲ್ಲಿಸಬೇಕು. ತನಿಖಾ ಸಂಸ್ಥೆಗಳ ಅಧಿಕಾರಿಗಳು ವಿನಾಕಾರಣ ಕಿರುಕುಳ ಕೊಡುವುದನ್ನು ನಿಲ್ಲಿಸಬೇಕು. ಕಾಂಗ್ರೆಸ್‌ನ ಪ್ರಭಾವಿ ನಾಯಕ ಡಿ.ಕೆ. ಶಿವಕುಮಾರ್ ಅವರ ಮೇಲೆ ವಿನಾಕಾರಣ ತನಿಖೆ ನೆಪದಲ್ಲಿ ಕಿರುಕುಳ ಕೊಡುತ್ತಿರುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಎನ್.ಎಸ್.ಯು.ಐ. ವತಿಯಿಂದ ಕೇಂದ್ರ ಸರ್ಕಾರ ಹಾಗೂ ಸ್ವಾಯತ್ತ ತನಿಖಾ ಸಂಸ್ಥೆಗಳ ಅಧಿಕಾರಿಗಳ ವಿರುದ್ಧ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಪ್ರತಿಭಟನೆ ವೇಳೆ ರಾಜ್ಯ ಉಪಾಧ್ಯಕ್ಷ ಚೇತನ್ ಕೆ., ಜಿಲ್ಲಾಧ್ಯಕ್ಷ ಬಾಲಾಜಿ ಎಚ್.ಎಸ್., ನಗರಾಧ್ಯಕ್ಷ ವಿಜಯ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಘು ಆರ್. ಗೌಡ, ಅಬ್ದುಲ್, ಅಶ್ವಲ್, ವೆಂಕಟೇಶ್ ಎಚ್.ಟಿ., ಸುದೀಪ್, ಯಶವಂತ್ ನಿಖೀಲ್, ಸಚಿನ್, ರಾಹುಲ್, ನಾಗ, ಸಚೀನ್, ಸುದೀಪ್, ಗೌತಮ್, ಜಯಕುಮಾರ, ದರ್ಶನ್ ಇತರರಿದ್ದರು.