ಕೌಲಲಾಂಪುರ:ಕೋಬ್ರಾ ಕಿಸ್ಸರ್ ಎಂದೇ ಖ್ಯಾತಿ ಪಡೆದಿದ್ದ ಮಲೇಷ್ಯಾದ ಅಬು ಝರೀನ್ ಹುಸೈನ್ (33ವರ್ಷ) ವಿಷಪೂರಿತ ಹಾವು ಕಡಿದು ದುರಂತ ಸಾವನ್ನ ಕಂಡಿರುವ ಘಟನೆ ನಡೆದಿದೆ.
ಹಾವುಗಳ ಜತೆಯೇ ಹೆಚ್ಚು ಒಡನಾಡ ಇಟ್ಟುಕೊಂಡಿದ್ದ ಹುಸೈನ್, ಹಾವುಗಳನ್ನು ಪಳಗಿಸೋದರಲ್ಲಿ ಎತ್ತಿದ ಕೈ..ಹೀಗೆ 2016ರಲ್ಲಿ ಥಾಯ್ ಮಾಧ್ಯಮದಲ್ಲಿ ಹುಸೈನ್ ಬಗ್ಗೆ ವಿಶೇಷ ವರದಿ ಪ್ರಕಟವಾಗಿತ್ತು.
ಬಳಿಕ ಯುನೈಟೆಡ್ ಕಿಂಗ್ ಡಮ್ ನ ಹಲವಾರು ಟ್ಯಾಬ್ಲೊಯ್ಡ್ ಪತ್ರಿಕೆಗಳು “ಹಾವಿನ ಜತೆ ಮದುವೆಯಾದ ಥಾಯ್ ವ್ಯಕ್ತಿ ಹುಸೈನ್ “ ಎಂಬ ತಲೆಬರಹದಡಿ ವರದಿ ಪ್ರಕಟಿಸಿದ್ದವು. ಹುಸೈನ್ ಹಾವು ಜತೆ ಸಮಯ ಕಳೆಯುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಆಗ ಹರಿದಾಡಿದ್ದವು.
ಹಾವುಗಳ ಚಲನವಲನ, ಹಾವಭಾವ ಪರೀಕ್ಷಿಸುವ ನಿಟ್ಟಿನಲ್ಲಿಯೇ ಹುಸೈನ್ ನಾಲ್ಕು ಹಾವುಗಳನ್ನು ಮನೆಯಲ್ಲಿಯೇ ತನ್ನ ಜತೆಗೆ ಇಟ್ಟುಕೊಂಡಿರುವುದಾಗಿ ವರದಿಗಾರರಿಗೆ ಅಂದು ತಿಳಿಸಿದ್ದ.
ಹಾವಿನ ಜತೆ ಮದುವೆ ಸುಳ್ಳು ಸುದ್ದಿ ಎಂದಿದ್ದ ಹುಸೈನ್:
ಹಾವಿನ ಜತೆ ನಾನು ಮದುವೆಯಾಗಿದ್ದೇನೆ ಎಂದು ಮಾಧ್ಯಮಗಳಲ್ಲಿ ಬಂದ ವರದಿಯನ್ನು ಹುಸೈನ್ ಅಲ್ಲಗಳೆದಿರುವುದಾಗಿ ದ ಸನ್ ಪತ್ರಿಕೆ ವರದಿ ಮಾಡಿದೆ. ಪ್ರಾಣಿಗಳ ಜತೆಗಿನ ತನ್ನ ಪ್ರೀತಿ ಸಹಜವಾದದ್ದು ಎಂದು ಹುಸೈನ್ ತಿಳಿಸಿದ್ದರು.
ಯಾವ ಮನುಷ್ಯನೂ ಹಾವಿನ ಜತೆ ಮದುವೆಯಾಗಲಾರ. ಆ ಸುದ್ದಿ ನಿಜಕ್ಕೂ ಸುಳ್ಳು. ಬೇರೆ, ಬೇರೆ ನಂಬಕೆಗೆ ಅನುಗುಣವಾಗಿ ಸುದ್ದಿಯನ್ನು ತಿರುಚಿ ಬರೆದಿರಬಹುದು. ನಾನು ಮಾನವೀಯ ನೆಲೆಯಲ್ಲಿ ಆಸಕ್ತಿ ಹೊಂದಿರುವವನು, ಹಾಗೆಯೇ ಮನುಷ್ಯನಾಗಿಯೇ ನಾನು ಯಾವಾಗ ಮದುವೆಯಾಗಬೇಕೋ ಆ ವೇಳೆ ವಿವಾಹವಾಗುವುದಾಗಿ ಹುಸೈನ್ ತಿಳಿಸಿರುವುದಾಗಿ ಸನ್ ವರದಿ ವಿವರಿಸಿದೆ.
ದುರಂತ ಸಾವು:
ಮಲೇಷ್ಯಾದ ಸ್ಥಳೀಯ ಅಗ್ನಿಶಾಮಕ ದಳದಲ್ಲಿ ಕಿಂಗ್ ಕೋಬ್ರಾ ಸ್ಕ್ವಾಡ್ ನ ಮುಖ್ಯಸ್ಥರಾಗಿ ಹುಸೈನ್ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲಿ ಅಗ್ನಿಶಾಮಕ ದಳದ ತಮ್ಮ ಸಹೋದ್ಯೋಗಿಗಳಿಗೆ ಹುಸೈನ್ ಹಾವುಗಳಿಗೆ ಯಾವುದೇ ನೋವು, ತೊಂದರೆ ಕೊಡದೆ ಹಿಡಿಯುವುದು ಹೇಗೆ ಎಂಬುದನ್ನು ಕಲಿಸಿಕೊಡುತ್ತಿದ್ದರು.
ವಿಪರ್ಯಾಸ ಬೆನ್ ಟೋಂಗ್ ನಲ್ಲಿ ಹಾವು ಹಿಡಿಯುವ ಕಾರ್ಯಾಚರಣೆ ವೇಳೆಯೇ ವಿಷಪೂರಿತ ಹಾವೊಂದು ಹುಸೈನ್ ಗೆ ಕಚ್ಚಿತ್ತು. ಆಸ್ಪತ್ರೆಗೆ ಸೇರಿಸಿದರೂ ಕೂಡಾ ಚಿಕಿತ್ಸೆ ಫಲಕಾರಿಯಾಗದೆ ಹುಸೈನ್ ಕೊನೆಯುಸಿರೆಳೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.