ಹೊಸದಿಲ್ಲಿ /ಮುಂಬಯಿ: ಮುಂಬಯಿ ಸರಣಿ ಸ್ಫೋಟ ನಡೆದು 24 ವರ್ಷಗಳ ಬಳಿಕ ಭೂಗತ ಪಾತಕಿ ಅಬು ಸಲೇಂಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಬಂಧಿತರಾಗಿರುವ ತಾಹಿರ್ ಮರ್ಚೆಂಟ್ ಮತ್ತು ಫಿರೋಜ್ ಅಬ್ದುಲ್ ರಶೀದ್ ಖಾನ್‌ಗೆ ಗಲ್ಲು ಶಿಕ್ಷೆ ವಿಧಿಸಿ ಮುಂಬಯಿಯ ವಿಶೇಷ ಕೋರ್ಟ್ ಗುರುವಾರ ತೀರ್ಪು ನೀಡಿದೆ. ಖಲೀಫುಲ್ಲಾ ಖಾನ್‌ಗೆ ಹತ್ತು ವರ್ಷಗಳ ಕಠಿನ ಶಿಕ್ಷೆ ಮತ್ತು 2 ಲಕ್ಷ ರೂ. ದಂಡ ವಿಧಿಸಿ ಆದೇಶ ನೀಡಿದೆ. ಪ್ರಕರಣದ ಆರೋಪಿ ಅಬ್ದುಲ್ ಖಯಾಮ್‌ನನ್ನು ಸಾಕ್ಷ ಹೇಳಿದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ.
ಸಲೇಂ ಮತ್ತು ಇತರರ ವಿರುದ್ಧ ಸರಕಾರ ಮತ್ತು ದೇಶದ ವಿರುದ್ಧ ಯುದ್ಧ ಘೋಷಣೆ, ಕ್ರಿಮಿನಲ್, ಶಸ್ತ್ರಾಸ್ತ್ರ ಸಾಗಣೆ ಸಹಿತ ಗುರುತರ ಆರೋಪ ಹೊರಿಸಲಾಗಿದೆ.
ಕಳೆದ ಜೂನ್‌ನಲ್ಲಿ ವಿಶೇಷ ಕೋರ್ಟ್, ದುರಂತದ ಪ್ರಧಾನ ರೂವಾರಿ ಮುಸ್ತಫಾ ದೊಸ್ಸಾ ಮತ್ತು ಸಲೇಂ ಸಹಿತ 6 ಮಂದಿಯನ್ನು ದೋಷಿಗಳು ಎಂದು ಘೋಷಿಸಿತ್ತು. ಈ ಸಂದರ್ಭದಲ್ಲಿ ಅವರ ಮೇಲೆ ತನಿಖಾ ಸಂಸ್ಥೆಗಳು ಹೊರಿಸಿದ ಆರೋಪಗಳು ಸಾಬೀತಾಗಿವೆ. ಈ ಪೈಕಿ ಅಬು ಸಲೇಂ ಸ್ಫೋಟದ ಪ್ರಧಾನ ಸಂಚುಕೋರರಲ್ಲಿ ಒಬ್ಬನಾಗಿದ್ದಾನೆ. ಆತ ಬಾಲಿವುಡ್ ನಟ ಸಂಜಯ ದತ್‌ಗೆ ಹ್ಯಾಂಡ್ ಗ್ರೆನೇಡ್, ಮೂರು ಎಕೆ-56 ರೈಫಲ್‌ಗಳನ್ನು ನೀಡಿದ್ದ ಎಂದು ಕೋರ್ಟ್ ಹೇಳಿತ್ತು. ಈತ ಸ್ಫೋಟಕ್ಕೆ ಬೇಕಾಗಿದ್ದ ಸ್ಫೋಟಕ, ಶಸ್ತ್ರಾಸ್ತ್ರಗಳನ್ನು ಮುಂಬಯಿಗೆ ತರುವ ಹೊಣೆ ಹೊತ್ತುಕೊಂಡಿದ್ದ ಎಂದು ನ್ಯಾಯಾಲಯ ಹೇಳಿತ್ತು.
ಇಷ್ಟು ಮಾತ್ರವಲ್ಲದೆ ಜೂ.16ರಂದು ನೀಡಿದ್ದ ಆದೇಶದಲ್ಲಿ ತಾಹಿರ್ ಮರ್ಚೆಂಟ್ ಸರಣಿ ಬಾಂಬ್ ದಾಳಿ ನಡೆಸುವ ಬಗ್ಗೆ ಮೊದಲಾಗಿ ಸಲಹೆ ಮಾಡಿದ್ದ ಎಂದು ಕೋರ್ಟ್ ಹೇಳಿತ್ತು. ಅಬು ಸಲೇಂ, ಮುಸ್ತಾಫಾ ದೊಸ್ಸಾ, ಕರೀಮುಲ್ಲಾ ಖಾನ್, ಫಿರೋಜ್ ಅಬ್ದುಲ್ ರಶೀದ್ ಖಾನ್, ರಿಯಾಜ್ ಸಿದ್ದಿಕಿ, ತಾಹಿರ್ ಮರ್ಚೆಂಟ್ ಮತ್ತು ಅಬ್ದುಲ್ ಖಯಾಂ ವಿಚಾರಣೆಯನ್ನು ಮುಖ್ಯ ಪ್ರಕರಣದಿಂದ ಬೇರ್ಪಡಿಸಿ ಪ್ರತ್ಯೇಕವಾಗಿಯೇ ನಡೆಸಲಾಗಿತ್ತು. ಈ ಎಲ್ಲರನ್ನೂ ಪ್ರತ್ಯೇಕವಾಗಿಯೇ ಬಂಧಿಸಲಾಗಿದ್ದುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ನಡುವೆ ಮುಸ್ತಾಫಾ ದೊಸ್ಸಾ ಕಳೆದ ಜೂ.28ರಂದು ಹೃದಯಾಘಾತದಿಂದ ಅಸುನೀಗಿದ್ದ.
ಏನಿದು ಪ್ರಕರಣ?
ಅಯೋಧ್ಯೆಯಲ್ಲಿನ ವಿವಾದಿತ ಕಟ್ಟಡ ಧ್ವಂಸಗೊಳಿಸಿದ ಕಾರಣಕ್ಕಾಗಿ 1993ರ ಮಾ.12ರಂದು ಏರ್‌ಇಂಡಿಯಾ ಪ್ರಧಾನ ಕಚೇರಿ ಸೇರಿದಂತೆ 12 ಪ್ರಮುಖ ಸ್ಥಳಗಳಲ್ಲಿ ಪ್ರಬಲ ಬಾಂಬ್ ಸ್ಫೋಟ ನಡೆಸಲಾಗಿತ್ತು. ಕಟ್ಟಡ ಧ್ವಂಸದ ಬಳಿಕ ನಡೆದ ಮುಸ್ಲಿಮರ ಹತ್ಯೆ ಖಂಡಿಸಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಈ ಕೃತ್ಯದಲ್ಲಿ ನೇರ ಭಾಗಿದಾರನಾಗಿದ್ದ. ಈ ಘಟನೆಯಲ್ಲಿ 267 ಮಂದಿ ಸಾವಿಗೀಡಾಗಿ, 717 ಮಂದಿ ಗಾಯಗೊಂಡಿದ್ದರು. ವಿಶ್ವದಲ್ಲಿ ಏಕಕಾಲಕ್ಕೆ ಸರಣಿ ಬಾಂಬ್ ದಾಳಿ ನಡೆಸಿದ್ದು, ಅದುವೇ ಮೊದಲ ಬಾರಿಯಾಗಿತ್ತು ಮತ್ತು ದೇಶದಲ್ಲಿಯೇ ಅತ್ಯಂತ ಭೀಕರ ಘಟನೆ ಇದಾಗಿತ್ತು.