Advertisement

ದುಶ್ಚಟಗಳಿಂದ ದೂರವಿರಿ: ರಡ್ಡೆರ

06:33 PM Aug 03, 2022 | Team Udayavani |

ಕೊಪ್ಪಳ: ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಾಗಿರಬೇಕು ಎಂದು ಡಿಡಿಪಿಐ ಮುತ್ತಪ್ಪ ರಡ್ಡೆರ ಅವರು ಹೇಳಿದರು. ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಡಾ| ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‌ನಲ್ಲಿ ನಡೆದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.

Advertisement

ದಿನಾಚರಣೆಗಳ ಹಿಂದಿನ ತತ್ವ ಕೇಳಿಸಿಕೊಳ್ಳುವುದಷ್ಟೇ ಅಲ್ಲದೇ ಮಹನೀಯರ ಸಿದ್ಧಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ
ದಿನಾಚರಣೆಗಳಿಗೆ ಮಹತ್ವ ಬರುತ್ತದೆ. ಈ ನಿಟ್ಟಿನಲ್ಲಿ ಡಾ| ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆಯನ್ನು ಇಂದು ನಾವು ವ್ಯಸನ ಮುಕ್ತ ದಿನವನ್ನಾಗಿ ಆಚರಿಸುತ್ತಿದೆ ಎಂದರು.

ಹಳ್ಳಿ ಹಳ್ಳಿಗಳಿಗೆ ಹೋಗಿ ತಮ್ಮ ಜೋಳಿಗೆಯಲ್ಲಿ ದುಶ್ಚಟಗಳನ್ನು ಭಿಕ್ಷೆ ರೂಪದಲ್ಲಿ ಹಾಕಿ ಎಂದು ವಿಶೇಷ ರೀತಿಯ ಹೋರಾಡದ ಜೊತೆಗೆ ಜಾಗೃತಿ ಮೂಡಿಸಿದ ಕೀರ್ತಿ ಡಾ| ಮಹಾಂತ ಶಿವಯೋಗಿಗಳದ್ದಾಗಿದೆ. ಇಂತಹ ಹಲವಾರು ಸಂದೇಶಗಳೊಂದಿಗೆ ಅವರು ಸಮಾಜ ಸುಧಾರಣೆ ಮಾಡಿದ್ದಾರೆ. ಇಂದು ವಿದ್ಯಾರ್ಥಿಗಳು ದುಶ್ಚಟಗಳತ್ತ ಗಮನ ಹರಿಸುವುದಿಲ್ಲವೆಂದು ಪ್ರತಿಜ್ಞೆ ಮಾಡಬೇಕು. ಮುಂದೆ ನಿಮ್ಮ ಜೀವನದಲ್ಲಿ ವ್ಯಸನ ಮುಕ್ತರಾಗಿರಿ. ವ್ಯಸನ ಮುಕ್ತ ವಿಚಾರಗಳನ್ನು ವಿದ್ಯಾರ್ಥಿಗಳು ಒಬ್ಬರಿಂದ ಇನ್ನೊಬ್ಬರಿಗೆ ಹೇಳುವುದರಿಂದ ಒಂದು ಅಭಿಯಾನ ರೂಪದಲ್ಲಿ ಪ್ರಚಾರ ಮಾಡಿ, ಅಂದಾಗ ಮಾತ್ರ ಸಮಾಜ ಸುಧಾರಣೆ ಮಾಡಲು ಸಹಾಯಕವಾಗುತ್ತದೆ ಎಂದರು.

ಗವಿಸಿದ್ದೇಶ್ವರ ಕಾಲೇಜಿನ ಹಿರಿಯ ಉಪನ್ಯಾಸಕ ಡಾ| ಸಿದ್ಧಲಿಂಗಪ್ಪ ಕೊಟೆ°ಕಲ್‌ ಅವರು ಮಾತನಾಡಿ, ಡಾ| ಮಹಾಂತ ಶಿವಯೋಗಿಗಳು ತಮ್ಮ ಜೀವನದಲ್ಲಿ ಜೋಳಿಗೆ ಹಾಕಿಕೊಂಡು ಊರೂರು ಅಲೆದಾಡಿ ದುಶ್ಚಟಗಳನ್ನು ಭಿಕ್ಷೆ ಬೇಡಿ ತಮ್ಮ ಜೋಳಿಗೆಯಲ್ಲಿ ಹಾಕಿಕೊಳ್ಳುತ್ತಿದ್ದರು. ಆದ್ದರಿಂದ ಅವರ ಜನ್ಮದಿನವನ್ನು ವ್ಯಸನ ಮುಕ್ತ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.

ವಿದ್ಯಾರ್ಥಿಗಳು ದುಶ್ಚಟಗಳ ಬಗ್ಗೆ ತಿಳಿದುಕೊಳ್ಳಬೇಕು. ಪುರಾಣ ಕಾಲದಲ್ಲಿ ಹೆಣ್ಣು, ಹೊನ್ನು ಮತ್ತು ಮಣ್ಣಿಗಾಗಿ ವ್ಯಸನಕ್ಕೆ ಒಳಗಾಗುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಮದ್ಯ, ಧೂಮಪಾನ, ಗಾಂಜಾ, ಅಫೀಮು ಇತ್ಯಾದಿಗಳಿಗೆ ಯುವ ಜನರು ಹೆಚ್ಚು ದಾಸರಾಗುತ್ತಿದ್ದಾರೆ. ಅನೇಕ ಆರೋಗ್ಯ ಸಮಸ್ಯೆಗಳಿವೆ ತುತ್ತಾಗುತ್ತಾರೆ. ಅವು ಕೊನೆಗೆ ಸಾವಿನ ಕಡೆಗೆ ಕರೆದುಕೊಂಡು ಹೋಗುತ್ತದೆ.

Advertisement

ಆದ್ದರಿಂದ ವಿದ್ಯಾರ್ಥಿಗಳು ವ್ಯಸನದಂತಹ ದುಶ್ಚಟಗಳ ಕಡೆ ಗಮನಹರಿಸದೇ ಓದಿನ ಕಡೆಗೆ ಹೆಚ್ಚಿನ ಒಲವು ತೋರಿಸಬೇಕು. ಅದರ ಜೊತೆಗೆ ತಮ್ಮ ಮನೆಯ ಅಕ್ಕಪಕ್ಕದ ಸಂಬಂಧಿಕರಿಗೆ ಅಥವಾ ಸ್ನೇಹಿತರಿಗೆ ದುಶ್ಚಟಗಳ ಬಗ್ಗೆ ತಿಳಿಹೇಳಿ ವ್ಯಸನ ಮುಕ್ತ ಪರಿವರ್ತನೆ ಮಾಡಬೇಕು. ಈ ಆಧುನಿಕ ಯುಗದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಟಿವಿ ಮತ್ತು ಮೊಬೈಲ್‌ಗ‌ಳ ವ್ಯಸನಕ್ಕೆ ಒಳಗಾಗುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ಅದನ್ನು ಎಷ್ಟು ಪ್ರಮಾಣದಲ್ಲಿ ಬಳಕೆ ಮಾಡಬೇಕೆಂದು ತಿಳಿದು ಬಳಕೆ ಮಾಡಬೇಕು. ಆಗ ನಿಮ್ಮ ಭವಿಷ್ಯ ಉತ್ತಮವಾಗುತ್ತದೆ ಎಂದರು.

ದೈಹಿಕ ಶಿಕ್ಷಣ ನಿರ್ದೇಶಕ ಬಸವರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ನಿವೃತ್ತ ಪ್ರಾಚಾರ್ಯ ಜಡಿಯಪ್ಪ ಸೇರಿದಂತೆ ವಿವಿಧ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next