ಮಣಿಪಾಲ: ನಾನು ಅನೇಕ ಬಾರಿ ಉಡುಪಿಗೆ ಬಂದಿದ್ದೇನೆ, ಉದಯವಾಣಿ ಕಚೇರಿಗೂ ಬಂದಿದ್ದೇನೆ. ಸಂಸ್ಥೆಯ ಫೌಂಡೇಶನ್ ನನಗೆ ಜೀವಮಾನ ಸಾಧನೆಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಈ ಪತ್ರಿಕೆಗೂ ಐವತ್ತು ವರ್ಷವಾಗಿದ್ದು, ನನ್ನ ಸಿನಿ ಪಯಣಕ್ಕೂ ಐದು ದಶಕ ದಾಟಿದೆ. ಹೀಗಾಗಿ ನನಗೂ, ಮಣಿಪಾಲಕ್ಕೂ ಅವಿನಾಭಾವ ಸಂಬಂಧವಿದೆ. ನನಗೆ ತವರು ಮನೆಗೆ ಬಂದಷ್ಟೇ ಸಂತೋಷವಾಗಿದೆ ಎಂದು ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರು ಹೇಳಿದರು.
ಅವರು ಶುಕ್ರವಾರ (ಸೆಪ್ಟೆಂಬರ್ 17) ಉದಯವಾಣಿ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ತರಂಗ ವಾರಪತ್ರಿಕೆ ಮೂಲಕ ಸಂಧ್ಯಾ ಪೈ ಅವರು ಅತ್ಯುತ್ತಮ ಲೇಖಕಿಯಾಗಿ ಜ್ಞಾನವನ್ನು ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಸಿನಿಮಾದಲ್ಲಿ ಮನರಂಜನೆ, ಸಂದೇಶ ನೀಡುವಂತೆ, ಪೈ ಅವರು ಸಮಾಜದ ಕಳಕಳಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ನನ್ನ ಜೀವನದ ಆರಂಭದ ಕಾಲವನ್ನು ನಾನು ಇಲ್ಲಿಯೇ ಸುತ್ತಮುತ್ತ ಕಳೆದಿದ್ದೇನೆ. ಕಾಸರಗೋಡಿನ ಆನಂದ ಆಶ್ರಮದಲ್ಲಿ ನಂತರ ಶಿರಾಲಿಯ ಚಿತ್ರಾಪುರ ಮಠದಲ್ಲಿ ಹಾಗೂ ಉಡುಪಿಯ ಕಿನ್ನಿಮೂಲ್ಕಿಯಲ್ಲಿಯೂ ಎರಡು ವರ್ಷ ಇದ್ದೆ. ನನ್ನ ಅಕ್ಕ ಕೂಡಾ ಇಲ್ಲಿದ್ದಳು. ನನ್ನ ತಮ್ಮ ಶಂಕರ್ ಕೂಡಾ ಕಿನ್ನಿಮೂಲ್ಕಿಯ ಶಂಕರರಾಯರ ಮನೆಯಲ್ಲೇ ಹುಟ್ಟಿದ್ದ ಎಂದು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಹಲವು ಬಾರಿ ಉಡುಪಿಗೆ ಬಂದಿದ್ದರೂ ಕೂಡಾ ನನಗೆ ಸಮಾಧಾನ ಸಿಗ್ತಿರಲಿಲ್ಲವಾಗಿತ್ತು. ಆದರೆ ಈ ಬಾರಿ ನಾನು ನನ್ನ 74ನೇ ಹುಟ್ಟುಹಬ್ಬವನ್ನು ಶ್ರೀಕೃಷ್ಣ ಮಠದಲ್ಲಿ ಆಚರಿಸಿಕೊಂಡೆ, ಇಂದು ಮಣಿಪಾಲದ ಉದಯವಾಣಿ ಕಚೇರಿಗೆ ಬಂದಿದ್ದು ತುಂಬಾ ಸಂತೋಷ ಮತ್ತು ಹೆಮ್ಮೆಯನ್ನು ತಂದಿರುವುದಾಗಿ ಹೇಳಿದರು.
ಉಡುಪಿಯ ಸುತ್ತಮುತ್ತ ರಕ್ಷಿತ್ ಶೆಟ್ಟಿ ನಿರ್ಮಾಣದ ಅಬ್ರಕಡಬ್ರ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಸುಮಾರು ಇಪ್ಪತ್ತು ದಿನಗಳ ಕಾಲ ಇಲ್ಲಿಯೇ ತಂಗುವ ಅವಕಾಶ ಸಿಕ್ಕಿದೆ. ನನ್ನ 74ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಉಡುಪಿಯ ಶ್ರೀಕೃಷ್ಣನ ದರ್ಶನ ಪಡೆದು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದೆ. ಅದರಂತೆ ಇಲ್ಲಿಯ ವಾತಾವರಣ, ಜನರ ನಿಷ್ಕಲ್ಮಷ ಪ್ರೀತಿಯನ್ನು ಕಂಡು ಭಾವುಕನಾಗಿದ್ದೇನೆ. ಈ ಕಾರ್ಯಕ್ರಮ ನನಗೆ ಅವಿಸ್ಮರಣೀಯ ಎಂದು ಅನಂತ್ ನಾಗ್ ಹೇಳಿದರು.
ತರಂಗ ಮತ್ತು ತುಷಾರ ನಿಯತಕಾಲಿಕೆಗಳ ವ್ಯವಸ್ಥಾಪಕ ಸಂಪಾದಕಿ ಡಾ.ಸಂಧ್ಯಾ ಎಸ್.ಪೈ ಹಾಗೂ ಮಣಿಪಾಲ ಮೀಡಿಯ ನೆಟ್ ವರ್ಕ್ ಲಿ. ಸಿಇಒ ವಿನೋದ್ ಕುಮಾರ್ ಅವರು ನಟ ಅನಂತ್ ನಾಗ್ ಹಾಗೂ ಗಾಯತ್ರಿ ಅನಂತ್ ನಾಗ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಉದಯವಾಣಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಮಚಂದ್ರ ಮಿಜಾರು ಅತಿಥಿಗಳನ್ನು ಸ್ವಾಗತಿಸಿದರು. ಡಾ.ಸಂಧ್ಯಾ ಎಸ್ ಪೈ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ತರಂಗ ವಾರಪತ್ರಿಕೆಯ ಜೇಮ್ಸ್ ವಾಜ್ ಅವರು ಅನಂತ್ ನಾಗ್ ಗೆ ಅವರ ಕ್ಯಾರಿಕೇಚರ್ ನೀಡಿದರು.
ಸಭೆಯಲ್ಲಿ ಎಂಡಿಎನ್ ಎಲ್ ಮುಖ್ಯಸ್ಥ ಹರೀಶ್ ಭಟ್, ಮಣಿಪಾಲ್ ಮೀಡಿಯಾ ನೆಟ್ ವರ್ಕ್ ಲಿ.ನ ಜಿಎಂ(ಫೈನಾನ್ಸ್ ಅಕೌಂಟ್ಸ್) ಸುದರ್ಶನ್ ಶೇರಿಗಾರ್ ಸೇರಿದಂತೆ ಮಣಿಪಾಲ ಸಮೂಹ ಸಂಸ್ಥೆಗಳ ಸಿಬಂದಿಗಳು ಹಾಜರಿದ್ದರು. ಉದಯವಾಣಿ ಅಂತರ್ಜಾಲ ತಾಣದ ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದ್ದರು.